ವಿಶ್ವ ಪರಿಸರ ದಿನಾಚರಣೆ
ಬೀರೂರು: ಪರಿಸರ ಎಂದರೆ ಜನ ಜೀವನ, ಕೃಷಿ, ಪ್ರಾಣಿ ಸಂಕುಲ, ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡಿದೆ ಎಂದು ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್. ಮೋಹನ್ ಕುಮಾರ್ ಹೇಳಿದರು. ಇಲ್ಲಿನ ಲಲಿತಸುಧಾ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರದಲ್ಲಿ ಇಂತಹ ಒಂದು ಕೊಂಡಿ ಹದಗೆಟ್ಟರು ಎಲ್ಲವೂ ಹಾಳಾಗುತ್ತದೆ. ಇಂತಹ ವಿಷಯಗಳನ್ನು ನಾವು ವಿವೇಚನೆಯಿಂದ ಅರ್ಥಮಾಡಿಕೊಂಡು ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡರೆ ಕೃಷಿಯೂ ಸೇರಿದಂತೆ ಎಲ್ಲವೂ ಸುವ್ಯವಸ್ಥಿತ ಕೊಂಡಿಯಂತೆ ಪರಸ್ಪರ ಬೆಸೆದು ಕೊಂಡಿರುತ್ತವೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಶಾಲೆಗೊಂದು ವನ: ಪರಿಸರ ರಕ್ಷಿಸುವ ಸಲುವಾಗಿ ಈ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದಲ್ಲಿ ದಾಖಲಾಗುವ ಪ್ರತಿ ಮಗುವಿನೊಂದಿಗೆ ಶಾಲೆಗಳಲ್ಲಿ ಒಂದು ಗಿಡ ನೆಟ್ಟು, ಮಗುವಿಗೊಂದು ಗಿಡ, ಶಾಲೆಗೊಂದು ವನ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ಪ್ರಕೃತಿ ಕ್ಷೇತ್ರವನ್ನು ಶಾಲೆಗಳಲ್ಲಿಯೇ ನಿರ್ಮಾಣ ಮಾಡಲು ಶಿಕ್ಷಕರಿಗೆ ಕರೆ ನೀಡಲಾಗುವುದು ಎಂದು ತಿಳಿಸಿದರು.
ಬೀರೂರು ವಲಯ ಅರಣ್ಯಧಿಕಾರಿ ಪಾಲಾಕ್ಷಪ್ಪ ಮಾತನಾಡಿ, ಪರಿಸರದಲ್ಲಿನ ಅರಣ್ಯವನ್ನು ಕಡಿದು ಹಾಕಿದ್ದರಿಂದ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ನಮ್ಮ ಭೂಮಿಯು ಮರು ಚೇತರಿಕೆಗೆ ಎಡೆಯಿಲ್ಲದೆ ಅವನತಿಯೆಡೆಗೆ ಪಯಣ ಬೆಳೆಸಿದೆ. ತಾಪಮಾನ ಏರಿಕೆಯಿಂದ ಮಾನವ ಸಂಪನ್ಮೂಲ ಅಭಿವೃದ್ಧಿಗಷ್ಟೇ ಅಲ್ಲದೆ ಇದೀಗ ಕೈಗೆತ್ತಿಕೊಳ್ಳುತ್ತಿರುವ ಹಲವಾರು ಅಭಿವೃದ್ಧಿ ಯೋಜನೆಗಳು ವಿಫಲವಾಗುವ ಆಂತಕವಿದೆ. ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಪರಿಸರ ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು, ಪೋಷಕರು ಇದ್ದಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. 6 ಮತ್ತು 7ನೇ ತರಗತಿ ಮಕ್ಕಳು ಸ್ವಪ್ರೇರಿತರಾಗಿ ಶಾಲಾ ಆವರಣದಲ್ಲಿರುವ ಗಿಡಗಳನ್ನು ಪೋಷಿಸುವುದಾಗಿ ದತ್ತು ಸ್ವೀಕಾರ ಮಾಡಿದರು. ಮುಖ್ಯ ಶಿಕ್ಷಕರು ಮಕ್ಕಳಿಗೆ ಗಿಡ ಬೆಳೆಸಲು ಮುಂದಾದರೇ ಸಾಲದು ಅವುಗಳನ್ನು ಪೋಷಿಸಲು ಪ್ರತಿ ಮಕ್ಕಳು ತಮ್ಮ ಮನೆಯಿಂದ 1 ಬಾಟೆಲ್ ನೀರು, ಮತ್ತು ಅಗತ್ಯಕನುಗುಣವಾದ ಸಾವಯವ ಗೊಬ್ಬರ ತಂದು ಸಾಕಿದರೇ ಗಿಡ ಬೆಳೆಯುವುದಾಗಿ ತಿಳಿಸಿದರು. ಬೀರೂರು ಅರಣ್ಯ ಪಾಲಕರಾದ ಯುಸುಫ್ ಬೇಗಂ, ವಿಶ್ವನಾಥ್ ಮಾತನಾಡಿದರು. ಅರಣ್ಯ ಪಾಲಕರಾದ ಕುಮಾರ್, ಸೋಮನಾಥ್, ಬಸವರಾಜ್, ಶಾಲೆಯ ಪ್ರಥಮ ಪ್ರವೇಶ ಪಡೆದು ದಾಖಲಿಸಿದ ಚೆಲುವೇಗೌಡ್ರು, ಮಂಜುನಾಥ್, ಶಿಕ್ಷಕ ನಂದಿಶ್ ಸೇರಿದಂತೆ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

