ಚಿಕ್ಕಮಗಳೂರು

ಬಸ್- ಲಾರಿ ಡಿಕ್ಕಿ: 4 ಸಾವು

Published On :

ದಾವಣಗೆರೆ: ಖಾಸಗಿ ಬಸ್ಸು ಮತ್ತು ಸರಕು ತುಂಬಿಕೊಂಡು ಹೊರಟಿದ್ದ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತಂದೆ- ಮಗ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ತೀವ್ರ ಗಾಯಗೊಂಡ ಘಟನೆ ಜಿಲ್ಲೆಯ ಜಗಳೂರು ತಾ. ದೊಣೆಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ- 13ರಲ್ಲಿ ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಸಂಭವಿಸಿದೆ.
ವಿಜಾಪುರದಿಂದ ಬೆಂಗಳೂರಿಗೆ ಹೊರಟಿದ್ದ ವಿಆರ್‌ಎಲ್ ಖಾಸಗಿ ಬಸ್ಸು ಹಾಗೂ ಸರಕು ತುಂಬಿಕೊಂಡು ಚಿತ್ರದುರ್ಗದಿಂದ ಹೊಸಪೇಟೆ ಕಡೆ ಹೊರಟಿದ್ದ ಲಾರಿ ಮಧ್ಯೆ ಬೆಳಗಿನ ಜಾವ ಸುಮಾರು 4 ಗಂಟೆ ಹೊತ್ತಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಲಾರಿ ಚಾಲಕ ಶ್ರೀನಿವಾಸ(60), ಮಗ ನಾಗರಾಜ(30), ವಿಆರ್‌ಎಲ್ ಚಾಲಕ ಶಿವಾನಂದ(36) ಹಾಗೂ ಬಸ್ಸಿನ ಪ್ರಯಾಣಿಕರಾದ ಕಸ್ತೂರಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.
ತೀವ್ರ ಗಾಯಗೊಂಡಿದ್ದ ಪಾರ್ವತಿ ರುದ್ರೇಗೌಡ ಪಟೇಲ್, ಶ್ರೀನಾಥ್‌ರಾಮ್, ನಿಂಗಾನಂದ, ಶಿವಾನಂದ, ಸಿದ್ದನಗೌಡಗೆ ಜಗಳೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ತೀವ್ರ ಗಾಯಗೊಂಡಿದ್ದ ಚಂದ್ರಪ್ರಭು, ಅಶೋಕ, ಚನ್ನಬಸವರಾಜ, ಅರುಣಕುಮಾರ, ನಿಖಿಲ್ ಮೋಘ, ಅಶೋಕ್ ಪತ್ತಾರ್ ಅವರನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಚಾರಕ್ಕೆ ಅಡ್ಡಿ: ಅಪಘಾತದ ಪರಿಣಾಮ ಉಭಯ ವಾಹನಗಳ ಮುಂಭಾಗವು ಸಂಪೂರ್ಣ ನುಜ್ಜುಗುಜ್ಜಾಗಿದೆ. ಒಂದು ತಾಸಿಗೂ ಅಧಿಕ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕಿಮೀನಷ್ಟು ಉದ್ದಕ್ಕೂ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು, ವಾಹನ ಸಾಲುಗಟ್ಟಿ ನಿಲ್ಲಬೇಕಾಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿನಾರಾಯಣ, ಜಗಳೂರು ವೃತ್ತ ನಿರೀಕ್ಷಕ ಜೆ.ಎಸ್. ತಿಪ್ಪೇಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಕ್ರೇನ್ ನೆರವಿನಿಂದ ವಾಹನಗಳನ್ನು ಬೇರ್ಪಡಿಸಿ, ಶವ ಹಾಗೂ ಗಾಯಾಳುಗಳನ್ನು ಹೊರ ತೆಗೆಯಲಾಯಿತು.

ಹೆದ್ದಾರಿ ಪ್ರಾಧಿಕಾರಕ್ಕೆ ಜನರ ಹಿಡಿಶಾಪ
ಕಳೆದ ಮೂರು ದಿನಗಳ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ- 13ರಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ತೀವ್ರ ಆಂತಕವನ್ನು ತಂದೊಡ್ಡಿದೆ. 3 ದಿನದ ದಿನ ಹಿರೇಮಲ್ಲನಹೊಳೆ ಕ್ರಾಸ್ ಬಳಿ ಲಾರಿ ಮತ್ತು ಟ್ರ್ಯಾಕ್ಟರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ನಾಲ್ವರು ಮೃತಪಟ್ಟಿದ್ದರು. ಪದೇ ಪದೇ ದೊಣೆಹಳ್ಳಿ, ಹಿರೇಮಲ್ಲನಹೊಳೆ, ಕಾನನಕಟ್ಟೆ ಕ್ರಾಸ್ ಬಳಿ ರಸ್ತೆ ಅಪಘಾತಗಳು, ಸಾವುಗಳು ಸಂಭವಿಸುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ತನ್ನ ಬೇಜವಾಬ್ದಾರಿ ಪ್ರದರ್ಶಿಸುತ್ತಲೇ ಇದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಒಂದು ವರ್ಷದ ಹಿಂದಷ್ಟೇ ರಾಷ್ಟ್ರೀಯ ಹೆದ್ದಾರಿ- 13ನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲೆಂದು ಹೆದ್ದಾರಿಯ ಇಕ್ಕೆಲಗಳಲ್ಲಿದ್ದ ಮರಗಳನ್ನು ಕಡಿಯಲಾಗಿತ್ತು. ಮರ ತೆರವುಗೊಳಿಸಿ ವರ್ಷವೇ ಕಳೆದರೂ ಚತುಷ್ಪಥ ಹೆದ್ದಾರಿ- 13 ನಿರ್ಮಾಣ ಕಾರ್ಯ ಮಾತ್ರ ಆರಂಭಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.