ಮೂಡಿಗೆರೆ ಬಂದ್ ಸಂಪೂರ್ಣ
ಮೂಡಿಗೆರೆ: ತಾಲೂಕಿನ ಕಳಸ ಹೋಬಳಿಯಲ್ಲಿ ಇನಾಂ ಭೂಮಿ ಸಮಸ್ಯೆ ತಲೆದೋರಿದ್ದು, ತಲಾತಲಾಂತರದಿಂದ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಿಲು ಮುಂದಾಗಿರುವುದನ್ನು ವಿರೊಧಿಸಿ ಸರ್ವಪಕ್ಷ, ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೂ ನಡೆದ ಮೂಡಿಗೆರೆ ಬಂದ್ ಯಶಸ್ವಿಯಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಸ್ ನಿಲ್ದಾಣ ಬಳಿ ಬಹಿರಂಗ ಸಭೆ ನಡೆಸಿದರು. ನಂತರ ತಹಸೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದರು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಎಂದಿನಂತೆ ತಮ್ಮ ಕಾರ್ಯ ಮುಂದುವರೆಸಿದವು.
ಈ ಸಂದರ್ಭದಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಎಚ್.ಎಚ್.ದೇವರಾಜ್, ತಾಪಂ ಸದಸ್ಯ ಸುಬ್ರಾಯಗೌಡ, ಬಿ.ಎಸ್.ಜಯರಾಮ್, ಎಂ.ಸಿ.ಸುದರ್ಶನ್, ಎಂ.ಆರ್.ಜಗದೀಶ್, ಗುತ್ತಿ ಜಗದೀಶ್, ಗಿರೀಶ್, ಲಕ್ಷ್ಮಣಗೌಡ, ಬಕ್ಕಿ ನಾರಾಯಣ್, ಪಿ.ಕೆ.ನಾಗೇಶ್, ಬಿ.ಸಿ.ದಯಾಕರ್, ಬೆಳೆಗಾರರ ಸಂಘದ ಕಾರ್ಯದರ್ಶಿ ಬಾಲಕೃಷ್ಣ, ಮುರಳಿ, ಶ್ರೀಧರ ಕಳಸ ಜ್ವಾಲನಯ್ಯ, ಸಚೇತನ ಯುವ ಸಂಘ ಸೇರಿದಂತೆ ವಿವಿಧ ಸಂಘಟನೆಯ ಈ ಸಂದರ್ಭದಲ್ಲಿ ಮುಖಂಡರು ಭಾಗವಹಿಸಿದ್ದರು.
ಮಹಿಳೆ ಕೊಲೆ: ಚಿನ್ನಾಭರಣ ಅಪಹರಣ
ಚಿಕ್ಕಮಗಳೂರು: ನಗರದ ಹೃದಯ ಭಾಗದ ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಚಿನ್ನಮ್ಮ (78) ಕೊಲೆಯಾದ ದುರ್ದೈವಿ.
ನಗರದ ವಿಜಯಪುರ ಬಡಾವಣೆಯ ಮೂರನೇ ತಿರುವಿನಲ್ಲಿ ಚಿನ್ನಮ್ಮ ಒಬ್ಬರೇ ವಾಸವಾಗಿದ್ದರು. ಭಾನುವಾರ ರಾತ್ರಿ ಅವರನ್ನು ಕೊಲೆ ಮಾಡಿ, ಅವರ ಮೈಮೇಲಿದ್ದ ಎರಡು ಚಿನ್ನದ ಬಳೆ, ಎರಡು ಎಳೆ ತೂಕದ ಸರ ಸೇರಿದಂತೆ ಒಟ್ಟು 70 ಗ್ರಾಂ ತೂಕದ ಸುಮಾರು ರು. 2.10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಸೋಮವಾರ ಬೆಳಿಗ್ಗೆ ಮನೆಗೆಲಸದ ಮಹಿಳೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆಗೆದಿದ್ದು, ಚಿನ್ನಮ್ಮ ಕೊಲೆಯಾಗಿರುವುದು ಗಮನಕ್ಕೆ ಬಂದಿತು. ಈ ಸಂಬಂಧ ಸಂಬಂಧಿ ಬಿ.ಸಿ. ವಿವೇಕ್ ನೀಡಿರುವ ದೂರಿನನ್ವಯ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಾನಿ ಚಿನ್ನಮ್ಮ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಸಹಾಯಧನ ನೀಡಿದ್ದರು. ಅವರಿಗೆ ಪರಿಚಯದವರೇ ಈ ಕೃತ್ಯ ಎಸಗಿರಬಹುದೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಭೇಟಿ ನೀಡಿದ್ದರು.
ಚಿನ್ನಮ್ಮ ವೀರಭದ್ರಪ್ಪ ನಿಧನಕ್ಕೆ ಶ್ರೀಗಳ ಸಂತಾಪ
ಚಿಕ್ಕಮಗಳೂರು: ದಾನಿ ಶ್ರೀಮತಿ ಚಿನ್ನಮ್ಮ ವೀರಭದ್ರಪ್ಪ ನಿಧನಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಯುನಿವರ್ಸಲ್ ಕಾಫಿ ಪೌಂಡೇಷನ್ ನಿರ್ದೇಶಕರು, ಅಕ್ಕಮಹಾದೇವಿ ಮಹಿಳಾ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಗೆ ಸದಸ್ಯರು ಹಾಗೂ ಕೊಡುಗೈ ದಾನಿಯಾಗಿದ್ದ ಚಿನ್ನಮ್ಮ ವೀರಭದ್ರಪ್ಪ ನಿಧನದಿಂದ ಸಮಾಜಕ್ಕೆ ತೀವ್ರ ಹಾನಿ ಆಗಿದೆ ಎಂದು ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡರು ಸಂತಾಪ ಸೂಚಿಸಿದ್ದಾರೆ.
ಖಾತ್ರಿ ಕೂಲಿಗೆ ಲಂಚ: ಕಾರ್ಯದರ್ಶಿಗೆ ಜೈಲು
ಚಿಕ್ಕಮಗಳೂರು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೂಲಿ ಹಣ ನೀಡಲು ಲಂಚ ಪಡೆದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಕಡೂರು ತಾ. ಮಲ್ಲೇಶ್ವರ ಗ್ರಾಮದಲ್ಲಿ ಖಾತ್ರಿ ಯೋಜನೆಯಡಿಯಲ್ಲಿ ಎಂ.ಎಂ. ಧರ್ಮರಾಜ್ ಎಂಬುವರ ಜಮೀನಿನಲ್ಲಿ ತೆಂಗಿನ ಸಸಿಗಳನ್ನು ನೆಡಲು ಬಂದ ಕೂಲಿ ಕಾರ್ಮಿಕರಿಗೆ ಕೂಲಿ ಹಾಗೂ ಮತ್ತಿತರೆ ಹಣವನ್ನು ಚೆಕ್ ಮೂಲಕ ಬ್ಯಾಂಕ್ಗೆ ಕಳುಹಿಸಿಕೊಡಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜಪ್ಪ ರು. 2 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಎಚ್.ಎಸ್. ಕಮಲ ಪ್ರಕರಣ ಸಾಬಿತಾದ ಹಿನ್ನೆಲೆಯಲ್ಲಿ ಆರೋಪಿಗೆ 3 ವರ್ಷ ಕಠಿಣ ಸಜೆ ಹಾಗೂ ರು. 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಡಿ.ಬಿ. ಸುಜೇಂದ್ರ ವಾದ ಮಂಡಿಸಿದ್ದರು.
ಮತ್ತೊಂದು ಪ್ರಕರಣ: ಉದ್ಯೋಗ ಖಾತ್ರಿ ಕೆಲಸದ ಬಿಲ್ ನೀಡಲು ಲಂಚ ಪಡೆದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರು. ದಂಡ ವಿಧಿಸಿದೆ. ಮೂಡಿಗೆರೆ ತಾ. ಬಣಕಲ್ ಹೋಬಳಿ ಬಟ್ಟೆಗೆರೆ ಗ್ರಾಮದ ವಿಜಯ ಪಿಂಟೋ ಎಂಬುವರ ಜಮೀನಿನಲ್ಲಿ ಖಾತ್ರಿ ಯೋಜನೆಯಡಿ ಬಾಳೆ ಗಿಡ ನೆಟ್ಟಿರುವ ಸಂಬಂಧ ಬೆಟ್ಟಗೆರೆ ಗ್ರಾಪಂ ಕಾರ್ಯದರ್ಶಿ ಜಿ.ಎಫ್. ಹೊನ್ನತ್ತಿ ಕೆಲಸ ಮಾಡಿದ ಬಿಲ್ ಮಾಡಿಕೊಡಲು ರು. 1500 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಚ್.ಎಸ್. ಕಮಲ ಪ್ರಕರಣ ಸಾಬಿತಾದ ಹಿನ್ನೆಲೆಯಲ್ಲಿ ಆರೋಪಿಗೆ 3 ವರ್ಷ ಕಠಿಣ ಸಜೆ ಹಾಗೂ ರು. 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

