ಚಿಕ್ಕಮಗಳೂರು

ಕಾನ್ವೆಂಟ್‌ಗೆ ಲಗಾಮು ಹಾಕಿ

Published On :

ಕನ್ನಡಪ್ರಭ ವಾರ್ತೆ, ತರೀಕೆರೆ, ಜೂ.28
ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು, ಕನ್ನಡ ನಾಡು ನುಡಿಯನ್ನು ಕಟ್ಟುವ ಕಾಯಕದಲ್ಲಿ ಅದು ದಿವ್ಯಾಸ್ತ್ರವಾಗಿ ಹೊರಹೊಮ್ಮಬೇಕು, ಅದಕ್ಕಾಗಿ ಪೋಷಕರು, ತಂದೆ- ತಾಯಿಗಳು ಮಕ್ಕಳಿಗೆ ಮನೆ ಮೊದಲುಗೊಂಡು ಶಾಲೆಗಳಲ್ಲಿ ಕನ್ನಡ ಕಲಿಸುವ, ಕನ್ನಡ ಮಾತನಾಡುವ ಪರಿಪಾಠಕ್ಕೆ ಪ್ರೇರೇಣೆಯಾಗಬೇಕು, ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು 12ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅನಂತ ನಾಡಿಗ್ ಕರೆ ನೀಡಿದ್ದಾರೆ.
ಇಲ್ಲಿನ ಶ್ರೀ ಅನ್ನಪೂರ್ಣ ಸಮುದಾಯ ಭವನದಲ್ಲಿ ಶನಿವಾರ ನಡೆದ ತರೀಕೆರೆ ತಾಲೂಕಿನ 12ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅನಂತ್ ನಾಡಿಗ್, ಕನ್ನಡ ಕಲಿತರೆ ಭವಿಷ್ಯ ಉಜ್ವಲವಾಗುವ ನಂಬಿಕೆಯನ್ನು ಮೊದಲು ಮೂಡಿಸಬೇಕಾಗಿದೆ. ನಮ್ಮ ಮಕ್ಕಳ ಬಾಯಲ್ಲಿ ಕನ್ನಡ ಬಂದರೆ ದಂಡ ವಸೂಲು ಮಾಡುವ ದುಸ್ಸಾಹಸ ಮಾಡುತ್ತಿರುವ ಕಾನ್ವೆಂಟ್ ಎಂಬ ಹೆಸರಿನ ಶಾಲೆಗಳಿಗೆ ಲಗಾಮು ಹಾಕಬೇಕಿದೆ ಎಂದರು.
ಕೇಂದ್ರ ಸರ್ಕಾರ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು ಅಧಿಕೃತವಾಗಿ ಘೋಷಣೆಯ ಶಾಸ್ತ್ರ ಮುಗಿಸಿದ್ದರೂ ಭಾಷಾಭಿವೃದ್ಧಿಗಾಗಿ ಕನ್ನಡ ಕಾವ್ಯಗಳ, ಗ್ರಂಥಗಳ, ಅರ್ಥಕೋಶಗಳ, ಪುನರ್ ಮುದ್ರಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿಗಳನ್ನು ದೇಶದ ಸಹೋದರ ಭಾಷೆಗಳಲ್ಲಿ ಪ್ರಕಟಣೆ ಮಾಡುವುದರಿಂದ ಮೊದಲ್ಗೊಂಡು, ಕೇಂದ್ರ ಸರ್ಕಾರದ ಮಟ್ಟದ ರಾಜ್ಯದ ಕಚೇರಿಗಳಲ್ಲಿ ತ್ರಿಭಾಷಾ ಸೂತ್ರದ ಅನ್ವಯ ಕನ್ನಡ ಭಾಷೆಗೂ ಸೂಕ್ತ ಸ್ಥಾನಮಾನ ಕಲ್ಪಿಸುವಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು- ಸರ್ಕಾರದಲ್ಲಿರುವ ಕನ್ನಡ ಅಧಿಕಾರಿಗಳು ಮುತುವರ್ಜಿ ವಹಿಸಬೇಕಾಗಿದೆ.
ಬರಿಗನ್ನಡ: ದೇವನಾಗರಿ ಲಿಪಿಯಾದ ಸಂಸ್ಕೃತದಂತಹ ಭಾಷೆ ಸಂಕುಚಿತ ಭಾವದಿಂದ ಇಂದು ಪರ್ಯವಸನದ ಅಂಚಿಗೆ ಬಂದಿದೆ. ಈಗ ನಮ್ಮಲ್ಲಿ ಉದ್ಭವಿಸಿರುವ ಆಂಗ್ಲ ಭಾಷಾ ವ್ಯಾಮೋಹ ಹೀಗೆ ಮುಂದುವರಿದರೆ ಕನ್ನಡ ಸಾರಸ್ವತ ಲೋಕದ ಸವಿಗನ್ನಡ ಬರಿಗನ್ನಡವಾಗಿ ಉಳಿಯುವುದೂ ಬಹಳ ಕಷ್ಟ. ಮೊದಲು ನಾವು ಕನ್ನಡ ಮಾತನಾಡುವವರನ್ನು, ಕನ್ನಡದಲ್ಲಿ ತಮ್ಮ ಸಹಿ ಹಾಕುವವರನ್ನು, ಕನ್ನಡ ಅಂಕಿ- ಸಂಖ್ಯೆ ಬಳಸುವವರನ್ನು ಗೌರವಿಸೋಣ, ಕನ್ನಡದಲ್ಲಿ ಮಾತನಾಡಿದರೆ ಕನ್ನಡದಲ್ಲೇ ಉತ್ತರ ಕೊಡುವ ಔದಾರ್ಯ ತೋರಿಸೋಣ.
ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮ ಪೂರ್ಣ ಸಹಕಾರ, ಬೆಂಬಲವಿದೆ. ಎಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ಕೃಷಿ ಅವಶ್ಯವಿದೆ. ಹೊಸ- ಹೊಸ ಪ್ರತಿಭೆ ಬೆಂಬಲಿಸುವುದರ ಜತೆಗೆ ಇರುವ ಪ್ರತಿಭೆ ಪ್ರೋತ್ಸಾಹಿಸುವ ಕಾರ್ಯ ತಾಲೂಕಿನಾದ್ಯಂತ ತಮ್ಮ ಅಧ್ಯಕ್ಷತೆಯಲ್ಲಿ ನಡೆಸಲು ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾ.ಸು. ಶಿವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷರಾದ ಅನಂತ ನಾಡಿಗ್ ಅವರ ಪತ್ನಿ ಶ್ರೀಮತಿ ಉಷಾ ನಾಡಿಗ್, ಹಣ್ಣೆ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಸಾಪ ತಾಲೂಕು ಅಧ್ಯಕ್ಷ ಜಿ. ಸುಬ್ರಹ್ಮಣ್ಯ, ಪುರಸಭಾಧ್ಯಕ್ಷ ಸುನಿಲ್ ದತ್ತ, ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ್, ಮಾಜಿ ಶಾಸಕ ಎಸ್.ಎಂ. ನಾಗರಾಜ್, ಬಿ.ಎಸ್. ಭಗವಾನ್ ಉಪಸ್ಥಿತರಿದ್ದರು.




ಕಾರ್ಯಗತವಾಗಲಿ
ಭಾಷೆಯನ್ನು ಬೆಳಗುವುದರಲ್ಲಿ ಸರ್ಕಾರದ ಇಚ್ಛಾಶಕ್ತಿಯೂ ಪೂರಕ ಮತ್ತು ಪ್ರೇರಣೆಯಾಗಿರಬೇಕು. ಸರ್ಕಾರದಿಂದ ಬಂದ ಆದೇಶಗಳು ಶಂಖದಿಂದ ಬಂದ ತೀರ್ಥವಿದ್ದಂತೆ. ಪವಿತ್ರ ಹಾಗೂ ಪ್ರಾಮುಖ್ಯತೆ ಪಡೆದಿರುತ್ತದೆ. ಅದು ಕೇವಲ ಸರ್ಕಾರದ ಕಡತದಲ್ಲಿರದೆ ಕಾರ್ಯಗತವಾಗಬೇಕು. ಕನ್ನಡ ಬಳಸುವಲ್ಲಿ ಸರ್ಕಾರ ಇನ್ನೂ ಹೆಚ್ಚು ಆದ್ಯತೆ ಕೊಡಬೇಕು. ಅದು, ನಮ್ಮನ್ನಾಳುವ ರಾಜಕಾರಣಿಗಳ, ಆಡಳಿತ ಚುಕ್ಕಾಣಿ ಹಿಡಿದಿರುವ ಅಧಿಕಾರಿಗಳ ಹೃದಯದಿಂದ ಬರಬೇಕು. ಆಗ ಕನ್ನಡದ ನಿಜವಾದ ನವೋದಯ ಎನ್ನಬಹುದು.
ಮಡಿವಂತಿಕೆ ಬೇಡ
ನಾವು ಮಡಿವಂತಿಕೆ ಬಿಟ್ಟು ಕಂಪ್ಯೂಟರ್‌ಗೆ ಅಗತ್ಯವಾದ ಕನ್ನಡ ತಾಂತ್ರಿಕ, ವೈಜ್ಞಾನಿಕ, ವೈದ್ಯಕೀಯ ಮತ್ತು ಸಾಹಿತ್ಯಾತ್ಮಕ ದೃಢತೆ ಹಿನ್ನೆಲೆಯಲ್ಲಿ ಅನ್ಯ ಭಾಷೆಗಳಲ್ಲಿರುವ ಪಾರಿಭಾಷಿಕ ಶಬ್ದ ಸಂಪತ್ತನ್ನು ನಮ್ಮದನ್ನಾಗಿಸಿಕೊಳ್ಳಬೇಕು, ಅವುಗಳನ್ನು ನಾವು ಜೀರ್ಣಿಸಿಕೊಳ್ಳಬೇಕು. ಹಾಗಾಗಿ ಕನ್ನಡ ಭಾಷಾ ತಜ್ಞರು, ವಿಶೇಷವಾಗಿ ಶಿಕ್ಷಣ ತಜ್ಞರು ಈ ದಿಸೆಯಲ್ಲಿ ಹೆಜ್ಜೆ ಹಾಕಬೇಕು.
ಅಗ್ರಪೂಜೆ
ಶ್ರೀಮಂತ ಭಾಷೆ ಎನಿಸಿಕೊಂಡಿರುವ ಕನ್ನಡಕ್ಕೆ ಈ ಒಂದು ಹೊಸ ಕೊಡುಗೆ ಭಾಷೆ ದೃಷ್ಟಿಯಿಂದ ಕನ್ನಡವು ಪುಟಕ್ಕೆ ಹಾಕಿದ ಚಿನ್ನದಂತೆ ಅಪ್ಪಟ ಬಂಗಾರದಂತೆ ಮಿರಿ ಮಿರಿ ಮಿಂಚುವುದರಲ್ಲಿ ಇನಿತೂ ಸಂದೇಹವೇ ಇಲ್ಲ. ಅದರಿಂದಲಾದರೂ ಅಷ್ಟಿಷ್ಟು ಕನ್ನಡಮ್ಮನ ಸೇವೆಯನ್ನು ಮೊದಲು ನಾವು ಮಾಡೋಣ. ನಮ್ಮ ಮಾತೃ ಭಾಷೆಯ ನಿಜವಾದ ಅಗ್ರಪೂಜೆ ನಡೆಸೋಣ ಎಂದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.