ನಕ್ಸಲರಿಗೆ ಹಣ ಕೊಡ್ಬೇಡಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮಾ.5
ನಕ್ಸಲೀಯರು ಹಣಕ್ಕೆ ಒತ್ತಾಯಿಸಿದರೆ ಕೂಡಲೇ ಪೊಲೀಸರಿಗೆ ದೂರು ನೀಡಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಹೇಳಿದ್ದಾರೆ.
ಸದ್ಯ ಅಡಿಕೆ ಮತ್ತು ಕಾಫಿ ಸುಗ್ಗಿ ಕಾಲವಾಗಿದ್ದು, ಬೆಳೆಗಾರರಲ್ಲಿ ಹಣ ಇರುವುದರಿಂದ ನಕ್ಸಲೀಯರು ಹಣಕ್ಕಾಗಿ ಒತ್ತಾಯಿಸುವ ಸಾಧ್ಯತೆ ಹೆಚ್ಚಿದೆ. ಅದುದರಿಂದ ಯಾರೂ ಕೂಡ ನಕ್ಸಲೀಯರ ಬಗ್ಗೆ ಭಯಭೀತರಾಗಬಾರದು. ಹಣವನ್ನು ಸಹ ಕೊಡಬಾರದು. ಇದರ ಬಗ್ಗೆ ಮಾಹಿತಿಗಳನ್ನು ಪೊಲೀಸ್ ಇಲಾಖೆಗೆ ನೀಡಬೇಕು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಣಕ್ಕೆ ಒತ್ತಾಯ: ಶೃಂಗೇರಿ ತಾಲೂಕಿನ ಬುಕಡಿ ಬೈಲು ಸಮೀಪದ ನಾಯಿಮಡು ಗ್ರಾಮದ ಆನಂದರಾವ್ ಎಂಬುವವರ ಮನೆಗೆ ಕಳೆದ ಶುಕ್ರವಾರ ರಾತ್ರಿ ನಾಲ್ವರು ನಕ್ಸಲೀಯರು ಬಂದು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಈ ಗುಂಪಿನಲ್ಲಿ ಮುಂಡಗಾರು ಲತಾ ಸಹ ಇದ್ದರೆಂದು ಹೇಳಲಾಗಿದೆ ಎಂದ ಅವರು, ನಕ್ಸಲೀಯರು ಜನರಲ್ಲಿ ಭಯ ಹುಟ್ಟಿಸಿ ಹಣ ವಸೂಲಿಗೆ ಮುಂದಾಗಿದ್ದಾರೆ ಎಂದು ಹೇಳಿದರು.
ಈ ಹಿಂದೆ ನಕ್ಸಲೀಯರಿಗೆ ಸ್ಥಳೀಯರು ಸಹಕಾರ ನೀಡುತ್ತಿದ್ದರು. ಆದರೆ, ಇದೀಗ ನಕ್ಸಲೀಯರು ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ನಾಯಿ ಮಡು ಗ್ರಾಮಕ್ಕೆ ಭೇಟಿ ನೀಡಿ ಹಣ ವಸೂಲಿಗೆ ಮುಂದಾಗಿರುವ ಸಂಬಂಧ ನಾಲ್ವರು ನಕ್ಸಲೀಯ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು.
74 ಕಾಮಗಾರಿ ಪೂರ್ಣ: ನಕ್ಸಲೀಯರು ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಿಸಿದ್ದು, ಅದರಂತೆ ಈವರೆಗೆ ನಾಲ್ವರು ನಕ್ಸಲೀಯರು ಶರಣಾಗಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ರಾಜ್ಯ ಸರ್ಕಾರ ಹಣವನ್ನು ಸಹ ಬಿಡುಗಡೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ 113 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ 74 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದರು.
ಆರೋಪಿ ಬಂಧನ: ಕಡೂರು ತಾಲೂಕಿನ ಸಖರಾಯಪಟ್ಟಣ ಅಯ್ಯನಕೆರೆ ಬಳಿ ಫೆ. 22 ರಂದು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಗೆ ಸ್ಥಳೀಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರದಲ್ಲಿ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ ಡೆಲ್ಲಿ ಪಬ್ಲಿಕ್ ಸ್ಕೂಲ್ ಹೆಸರು ಮಾತ್ರ ಹೇಳಿದ್ದರಿಂದ ಇದರ ಜಾಡು ಹಿಡಿದ ಪೊಲೀಸರು ಅದೇ ಶಾಲೆಯ ವಾಹನದ ಚಾಲಕನಾಗಿದ್ದ ನಂಜುಂಡ ಎಂಬುವವರನ್ನು ವಿಚಾರಣೆಗೆ ಒಳಪಡಿಸಿದಾಗ ಆತ ನಡೆದಿರುವ ಘಟನೆಯನ್ನು ವಿವರಿಸಿದ್ದಾನೆ.
ಗೌರಮ್ಮ ಎಂಬ ಮಹಿಳೆ ಅದೇ ಶಾಲೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದು, ಅವರ ಬಳಿ ಚಿನ್ನಾಭರಣ ಇದ್ದು, ಅದನ್ನು ದೋಚುವ ಸಲುವಾಗಿ ಗೌರಮ್ಮ ಅವರನ್ನು ಸಖರಾಯುಪಟ್ಟಣದಲ್ಲಿ ಜಾತ್ರೆ ಇರುವುದಾಗಿ ಹೇಳಿ ಅವರನ್ನು ಕರೆದುಕೊಂಡು ಇಲ್ಲಿಗೆ ಬಂದು ಆಯ್ಯನ ಕೆರೆಗೆ ಕರೆದುಕೊಂಡು ಹೋಗಿ, ಅವರ ಬಳಿ ಇದ್ದ ಚಿನ್ನಾಭರಣವನ್ನು ತೆಗೆದುಕೊಂಡು ಅವರನ್ನು ಕೆರೆಗೆ ತಳ್ಳಿ ಪರಾರಿಯಾಗಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

