15ರಿಂದ 'ರಂಗ ದಾಸೋಹ' ಪ್ರಾರಂಭ
ಕ.ಪ್ರ.ವಾರ್ತೆ ಭದ್ರಾವತಿ ಮಾ. 7
ಇಲ್ಲಿನ ಸಿದ್ದಾರೂಢ ನಗರದ ಬಸವೇಶ್ವರ ಸಭಾ ಭವನದಲ್ಲಿ ಬಸವ ಜಯಂತಿ ಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ರಂಗದಾಸೋಹ (ವಚನ ರಂಗೋತ್ಸವ) ಕಾರ್ಯಕ್ರಮವನ್ನು ಮಾ.15, 16ರಂದು ಹಮ್ಮಿಕೊಳ್ಳಲಾಗಿದೆ.
ಹಲವು ವರ್ಷಗಳಿಂದ ನಿರಂತರವಾಗಿ ರಂಗಭೂಮಿ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಾ ಬಂದಿರುವ ಬೆಂಗಳೂರಿನ ರಂಗಮಂಡಲ ಕಾರ್ಯಕ್ರಮ ಉಸ್ತುವಾರಿ ಹೊತ್ತಿದೆ. ಭದ್ರಾವತಿಯ ವಿಕಸಂ ಕಲಾವಿದರು, ನವೋದಯ ಕಲಾಸಂಘ, ಎಂಪಿಎಂ ಲಲಿತ ಕಲಾಸಂಘ, ಶಾಂತಲಾ ಕಲಾ ವೇದಿಕೆ, ಶಾಶ್ವತಿ ಮಹಿಳಾ ಸಮಾಜ, ಅಪೇಕ್ಷ ನೃತ್ಯ ಕಲಾವಿದರು, ತಾಲೂಕು ಪತ್ರಕರ್ತರ ಸಂಘ, ಪ್ರಗತಿ ಸಿಟಿ ಕೇಬಲ್, ಕಾಗದ ನಗರದ ವಿಶ್ವಗುರು ಬಸವೇಶ್ವರ ಸಮಿತಿ, ಹಳೇನಗರದ ಬಸವಕೇಂದ್ರ, ಅಕ್ಕನ ಬಳಗ, ಶಾಂತಲಾ ಆರ್ಟ್ಸ್ ಮೊದಲಾದ ಕಲಾತಂಡಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ರಂಗಮಂಡಲದ ಅಧ್ಯಕ್ಷ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15ರಂದು ಸಂಜೆ 6 ಗಂಟೆಗೆ ನಡೆಯುವ ರಂಗೋತ್ಸವದಲ್ಲಿ ಉದ್ಘಾಟನಾ ಸಮಾರಂಭದ ನಂತರ ಭದ್ರಾವತಿಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ 'ಈ ಸಕ್ಕಿಯಾಸೆ ನಿಮಗೇಕೆ' ಎಂಬ ನಾಟಕ ಹಾಗೂ 'ಶರಣ ಸಂಗಮ' ಎಂಬ ರಂಗರೂಪಕವನ್ನೂ ಪ್ರದರ್ಶಿಸಲಾಗುತ್ತದೆ ಎಂದರು.
ಸಮಾರಂಭವನ್ನು ಶಾಸಕ ಎಂ.ಜೆ.ಅಪ್ಪಾಜಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಂಪಿಎಂ ಕಾರ್ಖಾನೆಯ ಹಣಕಾಸು ಸಹಾಯಕ ಮಹಾಪ್ರಬಂಧಕ ಸಿ.ಲಕ್ಷ್ಮೀನಾರಾಯಣಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್, ಅಖಿಲ ಭಾರತ ವೀರಶೈವ ಮಹಾಸಭಾ ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗಯ್ಯ, ಸಾಣೇಹಳ್ಳಿ ಶ್ರೀಮಠದ ರಂಗಸಂಘಟಕ ಮಲ್ಲಯ್ಯ ಹಾಗೂ ಭದ್ರಾವತಿ ನಗರಸಭಾ ಸದಸ್ಯ ಶಿವರಾಜ್ ಆಗಮಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಸದಾಶಿವಯ್ಯ ಅಧ್ಯಕ್ಷತೆ ವಹಿಸುವರು.
ಮಾ.16 ರಂದು ಸಂಜೆ 6 ಗಂಟೆಗೆ ರಂಗಸಂಗೀತ ವಚನ ಗಾಯನವನ್ನು ಭದ್ರಾವತಿಯ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ತಂಡದವರು ನಡೆಸಿಕೊಡುವರು. ಹಿರಿಯ ರಂಗಕಲಾವಿದರಾದ ಕೆ.ಆರ್.ಸುಬ್ಬರಾವ್, ಕೆ.ಬಿ.ಕಪನೀಗೌಡ, ಕಾಂತೇಶ್ ಕದರಮಂಡಲಗಿ, ಡಿ.ವೆಂಕಟರಮಣಯ್ಯ, ಸಿ.ಲಕ್ಷ್ಮಿನಾರಾಯಣಪ್ಪ ಹಾಗೂ ಎಚ್.ವಿ.ಮಹೇಂದ್ರ ಅವರನ್ನು ಅಂದು ರಂಗದಾಸೋಹಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ರಾತ್ರಿ 9 ಗಂಟೆಗೆ ಪಿ.ಲಂಕೇಶ್ ಅವರ 'ಸಂಕ್ರಾಂತಿ' ನಾಟಕ ಪ್ರದರ್ಶನವಿರುತ್ತದೆ. ಇದನ್ನು ಶಿವಮೊಗ್ಗದ ಸಹ್ಯಾದ್ರಿ ರಂಗತರಂಗ ತಂಡದ ಕಲಾವಿದರು ಅಭಿನಯಿಸುವರು ಎಂದರು.
ಬಸವಕಲ್ಯಾಣ, ಗುಲ್ಬರ್ಗ, ಬೀದರ್, ಬಳ್ಳಾರಿ ಮತ್ತು ಧಾರವಾಡಗಳಲ್ಲಿ ಯಶಸ್ವಿಯಾಗಿ 'ಈ ಸಕ್ಕಿಯಾಸೆ ನಿಮಗ್ಯಾಕೆ' ಮತ್ತು 'ಸಂಕ್ರಾಂತಿ' ಪ್ರದರ್ಶನ ನೀಡಿದ್ದು, ಈಗ ಭದ್ರಾವತಿಯಲ್ಲಿ ಅಭಿನಯಿಸಲಾಗುತ್ತಿದೆ. ಮುಂದೆ ತುಮಕೂರಿನಲ್ಲಿ ಪ್ರದರ್ಶನ ನಡೆಯಲಿದೆ ಎಂದು ಮಹಾಮನೆ ತಿಳಿಸಿದರು. ನೇಪಥ್ಯದಲ್ಲಿರುವವರನ್ನು ಗುರುತಿಸಿ ಪುರಸ್ಕರಿಸುವ ಯತ್ನ ಈ ಸಂದರ್ಭ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂತೇಶ್ ಕದರಮಂಡಲಗಿ, ನಂದಿನಿ ಮಲ್ಲಿಕಾರ್ಜುನ, ಸಿದ್ದಲಿಂಗಯ್ಯ, ಎಚ್.ಎನ್. ಮಹಾರುದ್ರ, ಮಲ್ಲಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

