ಸುದ್ದಿ ಸಂಕ್ಷೇಪ
ಚಿಕ್ಕಬಳ್ಳಾಪುರದಿಂದ ಎಚ್ಡಿಕೆ ಸ್ಪರ್ಧೆ?
ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎಂದು ಪಕ್ಷದ ಮುಖಂಡ ಮಹಮ್ಮದ್ ನೂರುಲ್ಲಾ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 20 ರಂದು ಬೆಳಿಗ್ಗೆ 11 ಗಂಟೆಗೆ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಚಿಕ್ಕಬಳ್ಳಾಪುರದ ನಂದಿ ಕೋಲ್ಡ್ ಸ್ಪೋರೇಜ್ ಪಕ್ಕದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದು ಕ್ಷೇತ್ರದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡುವ ಮೂಲಕ ಊಹಾ ಪೂಹಗಳಿಗೆ ತೆರೆ ಎಳೆಯಲಾಗುತ್ತದೆ ಎಂದರು. ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ, ಹಗರಣಗಳನ್ನು ನಡೆಸಿದೆ. ರಾಜ್ಯದಲ್ಲಿ ಮೋದಿ ಅಲೆ ಇದೆ ಎಂದು ಪ್ರಚಾರವಾಗುತ್ತಿರುವುದು ಸುಳ್ಳು, ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿರವರ ಅಲೆ ಹೆಚ್ಚಾಗಿದೆ ಎಂದರು. ಗೋಷ್ಠಿಯಲ್ಲಿ ಕೊಲಿಮಿಪಲ್ಲಿ ವೆಂಕಟಸ್ವಾಮಿರೆಡ್ಡಿ, ಸಿ.ಡಿ. ಗಂಗುಲಪ್ಪ, ಎಂ.ಎಲ್ ವೆಂಕಟರಂಗಾರೆಡ್ಡಿ, ದೇವಿಕುಂಟೆಶ್ರೀನಿವಾಸ್, ಹೊಸಹುಡ್ಯ ವೆಂಕಟಶಿವಾರೆಡ್ಡಿ, ಎನ್. ಸದಾಶಿವಾರೆಡ್ಡಿ, ಜಯರಾಮರೆಡ್ಡಿ, ಜಿ.ಎಂ. ರಾಮಕೃಷ್ಣಪ್ಪ, ಎ. ಸೂರ್ಯನಾರಾಯಣರೆಡ್ಡಿ, ಜಿಲಾನಿ, ವಿಷ್ಣುವರ್ದನರೆಡ್ಡಿ, ಶಿವಾರೆಡ್ಡಿ ಇದ್ದರು.
ಶಿಡ್ಲಘಟ್ಟ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಶಿಡ್ಲಘಟ್ಟ: ಶಿಡ್ಲಘಟ್ಟ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು. ತಹಸೀಲ್ದಾರ್ ನಾರಾಯಣಸ್ವಾಮಿ ಚುನಾವಣಾಧಿಕಾರಿಯಾಗಿದ್ದರು. ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ಮೀಸಲಾಗಿಟ್ಟಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬ ಮಹಿಳೆ ಸ್ಪರ್ಧಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ 15ನೇ ವಾರ್ಡ್ ಸದಸ್ಯೆ ಪ್ರಭಾವತಿ ಸುರೇಶ್, 17ನೇ ವಾರ್ಡ್ ಸದಸ್ಯೆ ಮುಷ್ಟರಿ ತನ್ವೀರ್, ವಹೀದಾ ಕೌಸರ್ ಸ್ಪರ್ಧಿಗಳಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡ್ನ ಸುಮಿತ್ರಾ ರಮೇಶ್ ಮಾತ್ರ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ಸುಮಿತ್ರಾ ರಮೇಶ್ ಅವರು ಅವಿರೋಧ ಆಯ್ಕೆಯಾದರು. ಕಾಂಗ್ರೆಸ್ ಪರವಾಗಿ ಕೇಂದ್ರ ಸಚಿವ ಕೆ. ಎಚ್.ಮುನಿಯಪ್ಪ ಆಗಮಿಸಿದರೆ, ಜೆಡಿಎಸ್ ಪರವಾಗಿ ಶಾಸಕ ರಾಜಣ್ಣ ಆಗಮಿಸಿದ್ದು ಒಟ್ಟು 29 ಜನ ಕೈ ಎತ್ತುವುದರ ಮೂಲಕ ಮತದಾನ ಮಾಡಿದರು. ಜೆಡಿಎಸ್ ಅಭ್ಯರ್ಥಿ ಪ್ರಭಾವತಿ ಸುರೇಶ್ಗೆ 14 ಮತ ಬಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಮುಷ್ಟರಿ ತನ್ವೀರ್ಗೆ 15 ಮತ ಲಭಿಸಿ ಒಂದು ಮತದಿಂದ ಮುಷ್ಟರಿ ವಿಜಯ ಸಾಧಿಸಿದರು.
ಸಹಾಯಕ ಚುನಾವಣಾಧಿಕಾರಿ ನೇಮಕ
ಕೋಲಾರ: ಲೋಕಸಭಾ ಚುನಾವಣೆ ಸಂಬಂಧ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.
ಶಿಡ್ಲಘಟ್ಟ ವಿ.ಸ ಕ್ಷೇತ್ರ- ಬಿ.ಆರ್. ಯೋಗೇಶ್, ಉಪನಿರ್ದೇಶಕರು, ಖಾದಿ ಮತ್ತು ಕೈಮಗ್ಗ ಇಲಾಖೆ,ಚಿಕ್ಕಬಳ್ಳಾಪುರ, ಚಿಂತಾಮಣಿ- ಶ್ರೀನಿವಾಸಯ್ಯ, ಆಹಾರ ಮತ್ತು ನಾಗರಿಕ ಹಾಗೂ ಗ್ರಾಹಕರ ಸರಬರಾಜು ಇಲಾಖೆ, ಚಿಕ್ಕಬಳ್ಳಾಪುರ, ಶೀನಿವಾಸಪುರ- ಶಿವಕುಮಾರ್, ಕೋಲಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಮುಳಬಾಗಿಲು- ಗಿರಿಜಾ, ಉಪನಿರ್ದೇಶಕರು, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೋಲಾರ,ಕೆ.ಜಿ.ಎಫ್- ಜಗದೀಶ್ ಗಂಗಣ್ಣನವರ್, ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಕೋಲಾರ, ಬಂಗಾರಪೇಟೆ- ಸಿ.ಎನ್. ಮಂಜುನಾಥ, ಉಪವಿಭಾಗಾಧಿಕಾರಿ, ಕೋಲಾರ ಜಿಲ್ಲೆ. ಕೋಲಾರ- ಚಲುವರಾಜ್, ಯೋಜನಾ ನಿರ್ದೇಶಕರು, ಜಿಪಂ, ಕೋಲಾರ, ಮಾಲೂರು- ಪ್ರಸಾದ್ರೆಡ್ಡಿ, ಉಪನೋಂದಣಾಧಿಕಾರಿ, ಸಹಕಾರ ಸಂಘಗಳ ಇಲಾಖೆ, ಕೋಲಾರ ರವರನ್ನು ನಿಯೋಜಿಸಲಾಗಿದೆ.
ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನೆ
ಕೋಲಾರ: ಲೋಕಸಭಾ ಚುನಾವಣೆಗಾಗಿ ಕೋಲಾರ ಜಿಲ್ಲಾ ವಾರ್ತಾ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಿರುವ ಮಾಧ್ಯಮ ಕೇಂದ್ರವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಲೋಕಸಭಾ ಚುನಾವಣೆಗಾಗಿ ರಚಿಸಿರುವ ಸ್ವೀಪ್ ಸಮಿತಿ ಅಧ್ಯಕ್ಷರಾದ ವಿನೋತ್ ಆರ್.ಪ್ರಿಯಾ ಉದ್ಘಾಟಿಸಿದರು.
ಮಾಧ್ಯಮ ಕೇಂದ್ರದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ಕೆ.ರವಿ, ಈ ಕಚೇರಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಪ್ರತಿ ನಿತ್ಯದ ಪತ್ರಿಕಾ ವರದಿಗಳ ಪರಿಶೀಲನೆ, ದೂರುಗಳ ಸ್ವೀಕಾರ, ಪೇಯ್ಡ್ ಸುದ್ದಿಗಳ ಬಗ್ಗೆ ನಿಗಾ ವಹಿಸಿ ಕ್ರಮಕ್ಕೆ ಶಿಫಾರಸ್ಸು ಮಾಡುವುದು ಹಾಗೂ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣೆಯ ಕಾರ್ಯಗಳು ನಡೆಯಲಿದ್ದು, ಎಲ್ಲ ಮಾಧ್ಯಮಗಳು ಸಹಕಾರ ನೀಡಬೇಕೆಂದು ಕೋರಿದರು.
ಮಾ.19ರಿಂದ ಏ.16ರವರೆಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಸ್ಥೂಲವಾಗಿ ಪರಿಶೀಲಿಸುವುದು ಮಾತ್ರವಲ್ಲದೆ, ಸಾರ್ವಜನಿಕರು ಮತ್ತು ಮಾಧ್ಯಮದವರು ಏನಾದರೂ ಮಾಹಿತಿ ಕೇಳಿದಲ್ಲಿ ಒದಗಿಸುವಂತೆ ಎಂಸಿಎಂಸಿ ಸಮಿತಿಗೆ ನಿಯೋಜನೆಗೊಂಡಿರುವವರಿಗೆ ತಿಳಿಸಿದರು.
ಎಸ್ಪಿ ಅಜಯ್ ಹಿಲೋರಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಂಗಾರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

