ಚಿಕ್ಕಮಗಳೂರು

ಜಿಲ್ಲೆಯಾದ್ಯಂತ ಧಾರಾಕಾರ ಮಳೆ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 8
ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಆರಂಭಗೊಂಡ ಮಳೆ ಬಿಡುವಿಲ್ಲದೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ವಾರ ಗುಡುಗು ಸಹಿತ ಜಿಲ್ಲೆಯ ಹಲವೆಡೆ ಮಳೆ ಬಂದಿತ್ತು. ಆದರೆ, ಬುಧವಾರ ರಾತ್ರಿ ಆರಂಭಗೊಂಡ ಮಳೆ ಗುರುವಾರವೂ ಮುಂದುವರೆದಿತ್ತು.
ಮುಂಗಾರು ಬೆಳೆಗೆ ಭೂಮಿ ಹದಗೊಳಿಸಲು ಈ ಮಳೆಯಿಂದ ರೈತರಿಗೆ ತುಂಬಾ ಅನುಕೂಲವಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವಂತಹ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೆರೆಗಳು ಅಲ್ಪಸ್ವಲ್ಪ ನೀರನ್ನು ಕಂಡಿವೆ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಕ್ಕಂತಾಗಿದೆ.
ಹೊರ ಹೋಗದ ಜನ: ಮಳೆ ಬಿಡುವಿಲ್ಲದೆ ಸುರಿಯುತ್ತಿರುವುದರಿಂದ ಜನರು ಮನೆಯಿಂದ ಹೊರಗೆ ಹೋಗಲಾರದಂತಾಗಿದೆ. ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿದೆ.
ಮಳೆ ನೀರು ತೆರೆದ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ನಗರದ ಕೆಲವು ಭಾಗದಲ್ಲಿ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗಿತ್ತು. ದಟ್ಟವಾದ ಮೋಡ ನಿರಂತರವಾಗಿ ಸುರಿಯುತ್ತಿರುವ ಮಳೆಯನ್ನು ನೋಡಿದ ಜನರಿಗೆ ಮುಂಗಾರು ಮಳೆಯಂತೆ ಕಂಡಿತು. ಈ ಮಳೆ ರೈತಾಪಿ ವರ್ಗಕ್ಕೆ ತುಂಬಾ ಹರ್ಷ ತಂದಿದೆ.
ಮೂಡಿಗೆರೆಯಲ್ಲಿ ಅಧಿಕ ಮಳೆ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬಂದಿದೆ. ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆಯ ವಿವರ (ಮಿ.ಮೀ.ಗಳಲ್ಲಿ) ಈ ರೀತಿ ಇದೆ. ಚಿಕ್ಕಮಗಳೂರು- 11, ವಸ್ತಾರೆ- 21.4, ಆಲ್ದೂರು- 18, ಕೆ.ಆರ್.ಪೇಟೆ- 30.4, ಅತ್ತಿಗುಂಡಿ- 24, ಕಳಸಾಪುರ- 22, ಮಳಲೂರು- 30, ಕಡೂರು- 6, ಕೊಪ್ಪ - 21, ಮೂಡಿಗೆರೆ- 33.6, ಕೊಟ್ಟಿಗೆಹಾರ- 30.6, ಎನ್.ಆರ್.ಪುರ- 7.8, ಶೃಂಗೇರಿ- 4.6, ತರೀಕೆರೆ- 2.6, ಲಕ್ಕವಳ್ಳಿಯಲ್ಲಿ 14 ಮಿ.ಮೀ. ಮಳೆ ಬಂದಿದೆ.
ಬಾಳೆಹೊನ್ನೂರು: ಬಾಳೆಹೊನ್ನೂರು ಹೋಬಳಿಯಾದ್ಯಂತ ಬುಧವಾರ ಸಂಜೆಯಿಂದ ನಿರಂತರ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣ ಹಾಗೂ ಸುತ್ತಮುತ್ತ ಬುಧವಾರ ಸಂಜೆ ಆರು ಗಂಟೆಯಿಂದ ಸುರಿಯಲಾರಂಭಿಸಿದ ಮಳೆ ಗುರುವಾರ ಸಂಜೆಯಾದರೂ ಬಿಡುವು ನೀಡಿರಲಿಲ್ಲ.
ಹೋಬಳಿ ವ್ಯಾಪ್ತಿಯ ಕಡ್ಲೆಮಕ್ಕಿ, ಸೀಗೋಡು, ಸಿ.ಆರ್.ಎಸ್., ರಂಭಾಪುರಿಪೀಠ, ಗಡಿಗೇಶ್ವರ, ಅರಳಿಕೊಪ್ಪ, ಹೂವಿನಹಕ್ಲು, ಕಡ್ಲೆಮಕ್ಕಿ, ಬನ್ನೂರು, ಮಾಗುಂಡಿ, ಖಾಂಡ್ಯ, ಸಂಗಮೇಶ್ವರಪೇಟೆ, ಕಡಬಗೆರೆ, ದೇವದಾನ, ಹಲಸೂರು ಮುಂತಾದೆಡೆ ಧಾರಾಕಾರ ಮಳೆ ಸುರಿಯುತ್ತಿದೆ.
ನಿರಂತರ ಒಂದು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಗೆ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಪ್ರತಿದಿನ ಮಳೆ ಬರುತ್ತಿದ್ದರೂ ಸಹ ಈ ಮಟ್ಟದಲ್ಲಿ ಮಳೆ ಸುರಿದಿರಲಿಲ್ಲ.
ಹೊರಬಂದ ಛತ್ರಿ: ನಿರಂತರ ಮಳೆ ಹಿನ್ನೆಲೆಯಲ್ಲಿ ಮನೆಯ ಮೂಲೆಯಲ್ಲಿ ಕುಳಿತಿದ್ದ ಛತ್ರಿಗಳು ಈಗ ಹೊರಬಂದಿವೆ. ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಗುರುವಾರ ಹಲವು ಮದುವೆ ಸೇರಿದಂತೆ ಇತರ ಶುಭ ಸಮಾರಂಭಗಳು ಇದ್ದು, ಆ ಎಲ್ಲಾ ಕಾರ್ಯಕ್ರಮಗಳಿಗೆ ಮಳೆ ಅಡ್ಡಿ ಮಾಡಿತ್ತು.
ಪಟ್ಟಣದ ವ್ಯಾಪ್ತಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇರದ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಮುಖ್ಯ ರಸ್ತೆಯೆಲ್ಲಾ ನೀರಿನಿಂದ ಆವೃತವಾಗಿದ್ದು. ಹಳ್ಳದಂತೆ ಮಾರ್ಪಾಡಾಗಿತ್ತು. ಇದರಿಂದ ಪಾದಚಾರಿಗಳಿಗೆ ತೀವ್ರ ತೊಂದರೆ ಯಾಗಿದ್ದು, ವಾಹನ ಬಂದಾಗ ಅದರ ನೀರೆಲ್ಲ ದಾರಿಹೋಕರ ಮೈ ಮೇಲೆ ಹಾರುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.