ಚಿಕ್ಕಮಗಳೂರು

ಚಿಕ್ಕಮಗಳೂರು ಬಂದ್ ಯಶಸ್ವಿ

Published On :

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಮೇ 10
ಯೋಗಗುರು ಬಾಬಾ ರಾಂದೇವ್ ದಲಿತ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಸ್ವಾಭಿಮಾನಿ ಪ್ರಗತಿಪರ ದಲಿತ ಹೋರಾಟ ಸಮಿತಿ ಶನಿವಾರ ನೀಡಿದ್ದ ಚಿಕ್ಕಮಗಳೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಿಜೆಪಿ ಹೊರತುಪಡಿಸಿ, ಇನ್ನುಳಿದ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐ(ಎಂಎಲ್), ಬಿಎಸ್ಪಿಯ ಜತೆಗೆ ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದವು.
2ನೇ ಶನಿವಾರ ಆಗಿದ್ದರಿಂದ ರಾಜ್ಯ ಸರ್ಕಾರದ ಕಚೇರಿಗಳಿಗೆ ರಜೆ ಇತ್ತು. ಇನ್ನುಳಿದಂತೆ ಕೇಂದ್ರ ಸರ್ಕಾರ ಸ್ವಾಮ್ಯದ ಅಂಚೆ ಕಚೇರಿ, ಬ್ಯಾಂಕ್‌ಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದ್ದರು. ಚಲನಚಿತ್ರ ಮಂದಿರಗಳು, ಪೆಟ್ರೋಲ್ ಬಂಕ್, ಅಂಗಡಿ, ಹೊಟೇಲ್‌ಗಳು ಬಂದ್ ಆಗಿದ್ದವು. ಆದರೆ, ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಟೋ ಸಂಚಾರಎಂದಿನಂತೆ ಇತ್ತು.
ಪ್ರಯಾಣಕ್ಕೆ ತೊಂದರೆ:  ವಾರದ ಕೊನೆ ದಿನವಾಗಿದ್ದರಿಂದ ದೂರದ ಊರುಗಳಿಂದ ಬಂದಿದ್ದ ಪ್ರವಾಸಿಗರಿಗೆ, ಪ್ರಯಾಣಿಕರಿಗೆ ಹೊಟೇಲ್‌ಗಳು ಬಂದ್ ಆಗಿದ್ದರಿಂದ ತೊಂದರೆಯಾಯಿತು. ಆದರೆ, ಜನ ಜೀವನದ ಮೇಲೆ ಅಷ್ಟೇನೂ ದುಷ್ಪರಿಣಾಮ ಬೀರಲಿಲ್ಲ.
ಕೆಲವು ಅಂಗಡಿ, ಮುಂಗಟ್ಟುಗಳು ಬೆಳಗ್ಗೆ ಸ್ವಯಂ ಬಂದ್ ಆಗಿದ್ದವು. ಕೆಲವು ಅಂಗಡಿಗಳು ತೆರೆದಿದ್ದು, ಪ್ರತಿಭಟನಾಕಾರರು ಅವುಗಳನ್ನು ಬಂದ್ ಮಾಡಿಸುತ್ತಿರುವುದು ನಗರದಲ್ಲಿ ಕಂಡು ಬಂದಿತು. ಬಂದ್ ನಿಂದಾಗಿ ಪ್ರಮುಖ ವಾಣಿಜ್ಯ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಬಂದ್ ಅಂಗವಾಗಿ ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಪ್ರತಿಭಟನಾಕಾರರು ರಾಂದೇವ್ ಅವರ ಅಣಕು ಶವಯಾತ್ರೆಯ ಮೂಲಕ ಎಂ.ಜಿ. ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಆಜಾದ್ ಪಾರ್ಕ್ ವೃತ್ತಕ್ಕೆ ಬಂದು, ರಾಂದೇವ್ ಪ್ರತಿಕೃತಿ ದಹಿಸಿದರು.
ಸಮಾಜದ ಸ್ವಾಸ್ಥ್ಯ ಹಾಳು:  ಇದೇ ಸಂದರ್ಭ ಮಾತನಾಡಿದ ಬಿಎಸ್ಪಿಯ ಮುಖಂಡ ಕೆ.ಟಿ.ರಾಧಾಕೃಷ್ಣ, ಹಿಂದುಗಳು ಬೇರೆ ಧರ್ಮಕ್ಕೆ ಮತಾಂತರಗೊಂಡರೆ, ಸಂಘ ಪರಿವಾರ ಹುಯಿಲು ಎಬ್ಬಿಸುತ್ತದೆ. ದಲಿತರ ಬಗ್ಗೆ ರಾಂದೇವ್ ಕೀಳುಮಟ್ಟದ ಹೇಳಿಕೆ ನೀಡಿದ ಸಂದರ್ಭ ಸಂಘ ಪರಿವಾರ ಯಾವುದೇ ಪ್ರತಿಕ್ರಿಯೆ ನೀಡಿದೆ ಸುಮ್ಮನಾಗಿದೆ.
ಇದು, ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಈ ರೀತಿಯ ಹೇಳಿಕೆಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಭಾರತ ದೇಶ ಜಾತ್ಯತೀತ ಸಂವಿಧಾನವನ್ನು ಹೊಂದಿದೆ. ಇಲ್ಲಿ, ಎಲ್ಲಾ ಜಾತಿ, ಧರ್ಮದವರಿಗೆ ಸಮಾನವಾದ ಕಾನೂನು ಜಾರಿಯಲ್ಲಿದೆ. ರಾಂದೇವ್ ಒಂದು ಜನಾಂಗದ ವಿರುದ್ಧ ಹೇಳಿಕೆ ನೀಡುವ ಮೂಲಕ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಇದು, ಖಂಡನೀಯ ಎಂದರು.
ಎಚ್ಚರಿಕೆ ನೀಡಬೇಕು:  ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ರಾಂದೇವ್ ಓರ್ವ ಯೋಗಗುರು. ಆತನ ಬಾಯಿಯಲ್ಲಿ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತುಗಳು ಬಂದಿವೆ. ಆತ ಒಂದು ರಾಜಕೀಯ ಪಕ್ಷದ ವಕ್ತಾರರಂತೆ ವರ್ತಿಸಿದ್ದಾರೆ.
 ದಲಿತರಿಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ರೀತಿಯ ಹೇಳಿಕೆಗಳು ಮರುಕಳಿಸದಂತೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್. ದೇವರಾಜ್ ಮಾತನಾಡಿ, ಯೋಗಗುರು, ಬಾಬಾ ಎನಿಸಿಕೊಂಡವರು ದಲಿತರ ಹಾಗೂ ಶೋಷಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು. ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಇದು, ಯೋಗ್ಯ ಹೇಳಿಕೆ ಅಲ್ಲ. ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಭರತ್, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಜಿ.ರಘು, ಜಿಲ್ಲಾ ಕಾಂಗ್ರೆಸ್‌ನ ಎಸ್ಸಿ., ಎಸ್ಟಿ. ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ನಗರಸಭಾ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಹಾಗೂ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.