ದಕ್ಷಿಣ ಕನ್ನಡ

ಭಜನಾ ಮಂದಿರ ಸೊತ್ತು ಕಳವು

Published On :

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶ್ರೀಮೂಕಾಂಬಿಕ ಕೃಪಾ ಶ್ರೀರಾಮ ಭಜನಾ ಮಂದಿರದ ಹಿಂಭಾಗದ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಕಳವುಗೈಯ್ಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ದೇವರ ಮೂರ್ತಿಯ ಹಿಂಭಾಗದಲ್ಲಿ ಅಳವಡಿಸಲಾದ 1 ಕೆ.ಜಿ. ತೂಕದ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯಿಂದ ಮುಚ್ಚಲ್ಪಟ್ಟ ಅರ್ಧ ಕೆ.ಜಿ. ತೂಕದ ದೇವಿಯ ಪಂಚ ಲೋಹದ ವಿಗ್ರಹ ಹಾಗೂ ಮಣಿಗಂಟೆ ಸೇರಿದಂತೆ ಸುಮಾರು ರು. 1 ಲಕ್ಷ ಮೌಲ್ಯದ ಸೊತ್ತುಗಳು ಕಳವಾಗಿವೆ ಎಂದು ಭಜನಾಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ್ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗಕ್ಕೆ ದೂರು ನೀಡಿದ್ದಾರೆ. ಬುಧವಾರ ಮುಂಜಾನೆ ದೇವರ ಸ್ತುತಿ ಇಡಲೆಂದು ಮಂದಿರಕ್ಕೆ ಶಶಿಧರ್ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬಂಟ್ವಾಳ ನಗರ ಠಾಣೆಯ ಪ್ರಭಾರ ಎಸ್ಸೈ ಮಹೇಶ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳಕ್ಕೆ  ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಈ ಸಂದರ್ಭ ಪೊಲೀಸ್ ಶ್ವಾನ, ಮಂದಿರದ ಸಮೀಪದ ಮನೆಯ ಹತ್ತಿರ ಹೋಗಿ ನಿಂತ ಹಿನ್ನೆಲೆಯಲ್ಲಿ ಆ ಮನೆಯ ಯುವಕನೋರ್ವನನ್ನು ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸಂಜೆಯ ವೇಳೆಗೆ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಸದಾನಂದ ವರ್ಣೇಕರ್ ಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.
ಠಾಣೆಗೆ ಮುತ್ತಿಗೆ: ಪೊಲೀಸರು ವಶಕ್ಕೆ ತೆಗೆದುಕೊಂಡ ಶಂಕಿತ ಯುವಕನನ್ನು ಸರಿಯಾಗಿ ತನಿಖೆ ನಡೆಸದೆ ಪ್ರಕರಣದಿಂದ ಬಿಡುಗಡೆಗೊಳಿಸುತ್ತಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಬ್ರಹ್ಮರಕೂಟ್ಲು ಪರಿಸರದ ನೂರಾರು ಮಂದಿ ಸಾರ್ವಜನಿಕರು ಸಂಜೆ ಬಂಟ್ವಾಳ ನಗರ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. ಈ ಸಂದರ್ಭ ಠಾಣೆಯಲ್ಲಿದ್ದ ಡಿವೈಎಸ್ಪಿ ಸದಾನಂದ ವರ್ಣೇಕರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಕೃತ್ಯದ ಬಗ್ಗೆ ಕೂಲಂಕಶ ತನಿಖೆ ನಡೆಸಿ ನೈಜ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು. ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ್, ಬಿಜೆಪಿ ಮುಖಂಡ ರಾಮದಾಸ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.