ಮಸೀದಿಗೆ ಕಲ್ಲು ತೂರಾಟ
ಉಡುಪಿ: ಇಲ್ಲಿನ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ಮಂಗಳವಾರ ರಾತ್ರಿ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವ ಎರಡು ಘಟನೆಗಳು ನಡೆದಿವೆ. ಒಂದು ಘಟನೆಯಲ್ಲಿ ಮುಸ್ಲಿಂ ಯುವಕನೊಬ್ಬನ ಮೇಲೆ ಹಲ್ಲೆ ಹಾಗೂ ಇನ್ನೊಂದು ಘಟನೆಯಲ್ಲಿ ಮಸೀದಿಯ ಮೇಲೆ ಕಲ್ಲೆಸೆಯಲಾಗಿದೆ. ಹಲ್ಲೆಗೊಳಗಾದ ಯುವಕ ಮಾರಣಾಂತಿಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಗ್ರಾಪಂ ಅಧ್ಯಕ್ಷರೂ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಇಲ್ಲಿನ ಕೆಳನೇಜಾರು ಎಂಬಲ್ಲಿನ ಮನೆಯೊಂದರಲ್ಲಿ ಮದುವೆಯ ಮುನ್ನಾದಿನದ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದರಲ್ಲಿ ಮನೆಯವರ ಆಪ್ತರಾಗಿದ್ದ ಅನೇಕ ಹಿಂದೂ ಮತ್ತು ಮುಸ್ಲಿಂ ಯುವಕರು ಭಾಗವಹಿಸಿದ್ದರು. ರಾತ್ರಿ 11 ಗಂಟೆಗೆ ಅಲ್ಲಿಯೇ ಊಟ ಮುಗಿಸಿ ಕಾಲ್ನಡಿಗೆಯಲ್ಲಿ ಮನೆಗೆ ಹೊರಟಿದ್ದ ಮಹಮ್ಮದ್ ಇಕ್ಬಾಲ್ ಎಂಬ ಯುವಕನ ಮೇಲೆ ಗುಂಪೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ.
ತಕ್ಷಣ ಇಕ್ಬಾಲ್,ನನ್ನು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಕ್ಬಾಲ್ ನೀಡಿದ ಪೊಲೀಸ್ ಹೇಳಿಕೆಯಂತೆ 7 ಮಂದಿಯ ಮೇಲೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ಸತೀಶ್ ನಾಯಕ್, ಪ್ರಶಾಂತ್ ಮತ್ತು ಪ್ರವೀಣ್ ಎಂಬವರನ್ನು ಬಂಧಿಸಲಾಗಿದೆ. ಉಳಿದವರು ತಲೆ ಮರೆಸಿಕೊಂಡಿದ್ದಾರೆ.
ಮಸೀದಿಗೆ ಕಲ್ಲು ತೂರಾಟ: ಮತ್ತೊಂದು ಘಟನೆಯಲ್ಲಿ ಮಂಗಳವಾರ ರಾತ್ರಿ 12 ಗಂಟೆಗೆ ಈ ಮದುವೆ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ನೇಜಾರು ಜಾಮೀಯ ಮಸೀದಿಗೆ ಗುಂಪೊಂದು ಕಲ್ಲುಗಳನ್ನೆಸೆದು ಕಿಟಕಿ ಗಾಜುಗಳಿಗೆ ಹಾನಿಯನ್ನುಂಟು ಮಾಡಿದೆ. ಮದುವೆ ಮನೆಯ ಬಳಿ ಇಕ್ಬಾಲ್ ಎಂಬಾತನ ಮೇಲೆ ನಡೆದ ಹಲ್ಲೆಯ ಮುಂದುವರಿದ ಭಾಗವಾಗಿ ಆ ಗುಂಪು ಅಲ್ಲಿಂದ ಮಸೀದಿಯತ್ತ ಬಂದು ಈ ಕಲ್ಲೆಸೆತ ನಡೆಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂದರ್ಭದಲ್ಲಿ ಮಸೀದಿಯೊಳಗೆ ಮಲಗಿದ್ದ ಧರ್ಮಗುರುಗಳಾದ ಮೌಲಾನ ಅಬೂಬಕ್ಕರ್ ಮಸ್ಲಿಯಾರ್, ಮೂಸಾ ಕುಂಞ ಮತ್ತು ಬಶೀರ್ ಸಅದಿ ಅವರು ಕಲ್ಲೆಸೆದ ಶಬ್ದಕ್ಕೆ ಎಚ್ಚರವಾಗಿ, ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಬರುವಷ್ಟರಲ್ಲಿ ಕಲ್ಲೆಸೆದ ಗುಂಪು ಅಲ್ಲಿಂದ ಕಾಲ್ಕಿತ್ತಿದೆ.
2008ರಲ್ಲಿಯೂ ಇದೇ ಮಸೀದಿಯ ಮೇಲೆ ಕಲ್ಲೆಸೆದು ಎಲ್ಲಾ ಕಿಟಿಕಿಯ ಗಾಜುಗಳನ್ನು ನಾಶಗೊಳಿಸಲಾಗಿತ್ತು. ಅಂದಿನಿಂದ ಈ ಮಸೀದಿಯ ಮುಂದೆ ಪ್ರತಿದಿನ ಪೊಲೀಸ್ ಸಿಬ್ಬಂದಿಯೊಬ್ಬರ ಪಹರೆ ಇರುತ್ತದೆ. ಮಂಗಳವಾರೂ ಅವರು ಇದ್ದರು. ಆದರೆ ಕೆಳನೆಜಾರಿನಲ್ಲಿ ಹಲ್ಲೆ ನಡೆದ ವಿಷಯ ಕೇಳಿ ಅವರು ಅತ್ತ ತೆರಳಿದ್ದರು. ಇತ್ತ ಮಸೀದಿಯ ಬಳಿ ಬಂದ ಗುಂಪು ಕಲ್ಲೆಸೆದು ಪರಾರಿಯಾಗಿದೆ. ಬುಧವಾರ ಮಸೀದಿಯ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಖುದ್ದು ಮಲ್ಪೆ ಠಾಣಾಧಿಕಾರಿ ಜಯಂತ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಎರಡೂ ಘಟನೆಗಳ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

