ದಕ್ಷಿಣ ಕನ್ನಡ

ಮರೆತು ಹೋಯಿತೇ ಮಾನವೀಯತೆ?

Published On :

ಉಪ್ಪಿನಂಗಡಿ: ರಾ.ಹೆ. 75 ರ ಪೆರ್ನೆಯಲ್ಲಿ ಮಂಗಳವಾರ ನಡೆದ ಮಾಹಾ ದುರಂತದಲ್ಲಿ ಸಾವನ್ನಪ್ಪಿದ ಮಂದಿಯ ಮೃತದೇಹ ಹೊರ ತೆಗೆಯುವಲ್ಲಿ, ಅರೆಬೆಂದು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಎದೆಗಾರಿಕೆ, ಮಾನವೀಯತೆ ಮೆರೆದವರು ಹಲವರು. ಆದರೆ ಸಭ್ಯತೆಯ ಕರ್ತವ್ಯ ಪ್ರಜ್ಞೆ ಮೆರೆಯುವವರೆಂಬ ಹೆಗ್ಗಳಿಕೆ ಪಡೆದ ದ.ಕ. ಜಿಲ್ಲೆಯ ಜನ ನಾಚುವಂತಹ ಅಮಾನುಷ ಕಾರ್ಯವೊಂದು ಇಲ್ಲಿ ನಡೆದಿದೆ.
ತನ್ನ ಮಾರುತಿ ಓಮ್ನಿ ಕಾರನ್ನು ಅಗ್ನಿಗಾಹುತಿಯಾಗುವುದನ್ನು ತಪ್ಪಿಸಲು ಯತ್ನಿಸಿದ ವಸಂತ ಸ್ವತಹ ಬೆಂಕಿ ತಗುಲಿಸಿಕೊಂಡು ಅಸಹಾಯಕತೆಯಿಂದ ಹೆದ್ದಾರಿಗೆ ಬಂದು ತನ್ನನ್ನು ರಕ್ಷಿಸಿ ಎಂದು ಗೋಗರೆಯುತ್ತಿದ್ದರೆ ಬಳಿಯಲ್ಲಿದ್ದ ಜನತೆ ಆತನ ಮೇಲೆ ಯಾವುದಾದರೂ ಬಟ್ಟೆಯನ್ನೋ ಅಥವಾ ಬೆಂಕಿ ನಂದಿಸಲು ಬಳಸುವ ವಸ್ತುವನ್ನೂ ಅಥವ ಅವನನ್ನು ನೆಲದಲ್ಲಿ ಹೊರಳಾಡುವಂತೆಯೂ ಮಾಡಬೇಕಾಗಿತ್ತು. ಆದರೆ ಅದ್ಯಾವುದನ್ನೂ ಮಾಡದೇ ಆತ ಬೆಂಕಿಗಾಹುತಿಯಾಗುವ ಸಹಾಯಕ್ಕಾಗಿ ಯತ್ನಿಸುವ ದೃಶ್ಯಾವಳಿಯನ್ನು ಅನತಿ ದೂರದಲ್ಲಿ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿದ ಹಾಗೂ ಅದನ್ನು ಅನ್ಯರಿಗೆ ವಿನಿಮಯ ಮಾಡಿಕೊಳ್ಳುತ್ತಿರುವ ಕಾರ್ಯ ಮಾತ್ರ ಅಮಾನವೀಯವಾದುದ್ದು.
ಸ್ವತಹ ತನ್ನ ಒಡಹುಟ್ಟಿದವರೋ, ಮಕ್ಕಳೋ ಇದೇ ರೀತಿಯಲ್ಲಿ ಬೆಂಕಿಯಲಿ ಬೆಂದೆಳುತ್ತಿದ್ದರೆ ನಾವು ವಿಡಿಯೋ ಶೂಟಿಂಗ್ ಮಾಡಿಕೊಂಡು ಸುಮ್ಮನಿರುತ್ತಿದ್ದೇವೆಯೇ ಎಂಬ ಸಹಜ ಪ್ರಶ್ನೆಯೂ ಅವರ ಮನಸ್ಸಿಗೆ  ತೋಚದೇ ಮಾನವೀಯ ಕರ್ತವ್ಯದಿಂದ ವಿಮುಖರಾಗಿದುದ್ದು, ಯುವ ಜನಾಂಗ ತನ್ನ ಕರ್ತವ್ಯ ಪ್ರಜ್ಞೆಯಿಂದ ವಿಮುಖವಾಗುತ್ತಿದೆ ಎನ್ನುವುದನ್ನು ಸಾದರಪಡಿಸಿದೆ. ಇದೀಗ ಎಲ್ಲರ ಮೊಬೈಲ್‌ನಲ್ಲಿಯೂ ವಸಂತ ಸಾಯುವ ಮುನ್ನ ಪಡುವ ಹೃದಯವಿದ್ರಾವಕ ನರಳಾಟದ ದೃಶ್ಯಗಳೇ ಹರಿದಾಡುತ್ತಿದೆ.
ಪೊಲೀಸರ ತಡೆಯ ನಡುವೆಯೂ ಉರಿಯುತ್ತಿದ್ದ ಬೆಂಕಿಯನ್ನೂ ಲೆಕ್ಕಿಸದೇ, ಅನಿಲ ಟ್ಯಾಂಕರ್ ಸ್ಫೋಟಗೊಳ್ಳುವ ಸಂಭಾವ್ಯತೆಯ ಅಪಾಯದ ನಡುವೆಯೂ ಗಾಯಾಳುಗಳ ರಕ್ಷಣೆಗೆ ಧಾವಿಸಿದ ಇಸ್ಮಾಯಿಲ್ ತಂಗಳ್,  ಇಕ್ಬಾಲ್, ನೌಫಾಲ್, ನಝೀರ್, ಶಿವಪ್ಪ ನಾಯ್ಕ್, ಕಿರಣ್ ಶೆಟ್ಟಿಯ ಶ್ಲಾಘನಾತ್ಮಕ ಕಾರ್ಯ ಈ ವಿಡಿಯೋ ಗ್ರಾಫರನಿಗೆ ಪ್ರೇರಣೆಯಾಗದೇ ಹೋಯಿತೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.