ದಕ್ಷಿಣ ಕನ್ನಡ

ಅಪಘಾತ: ಓರ್ವನಿಗೆ ಗಾಯ

Published On :

ಮೂಲ್ಕಿ: ಮೂಲ್ಕಿಯ ಕಾರ್ನಾಡಿನ ಗಾಂಧಿ ಮೈದಾನದ ಬಳಿ ರಾಜ್ಯ ಹೆದ್ದಾರಿಯಲ್ಲಿ ಸೈಕಲ್‌ನಲ್ಲಿ ಹೋಗುತ್ತದ್ದ ವ್ಯಕ್ತಿಗೆ ಮೋಟಾರು ಸೈಕಲ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸೂರು ಬಂಗೇರ (80) ಗಾಯಗೊಂಡವರು. ಮೂಲ್ಕಿಯ ಕಾರ್ನಾಡಿನಿಂದ ಕೆ.ಎಸ್. ರಾವ್ ನಗರದ ಕಡೆಗೆ ಬರುತ್ತಿದ್ದ ಮಂಜು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಡಿಕ್ಕಿಯಾಗಿದೆ. ಸೂರು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಪುತ್ತೂರು: ವ್ಯಕ್ತಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕೆಯ್ಯೂರು ಶಾಲಾ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಕೆಯ್ಯೂರು ಶಾಲಾ ಬಳಿಯ ನಿವಾಸಿ ವಸಂತ ನಾಯ್ಕ (33) ಆತ್ಮಹತ್ಯೆ ಮಾಡಿಕೊಂಡವರು. ವಸಂತ ನಾಯ್ಕ ಶುಕ್ರವಾರ ಸಂಜೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜೀವನದಲ್ಲಿನ ಜಿಗುಪ್ಸೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಮೃತರ ತಾಯಿ ಜಾನಕಿ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಲ್ಲೆ ಆರೋಪಿಗಳ ಬಂಧನ
ಪುತ್ತೂರು: ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಈಶ ಶಿಕ್ಷಣ ಸಂಸ್ಥೆಯ ಕಂಪ್ಯೂಟರ್ ವಿದ್ಯಾರ್ಥಿ ಜುಬೈರ್ ಎಂಬವರ ಮೇಲೆ ಹಲ್ಲೆ ನಡೆಸಿದ ತಂಡದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಶುಕ್ರವಾರ ಬಂಧಿಸಿ, ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೆಯ್ಯೂರು ಗ್ರಾಮದ ನೂಜಿ ನಿವಾಸಿ ನರ್ಮೇಶ್ ಮತ್ತು ಆರ್ಯಾಪು ಗ್ರಾಮದ ಕಂಜೂರುಪಂಜ ನಿವಾಸಿ ಜಯಂತ ಬಂಧಿತರು. ಆರೋಪಿಗಳನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಜುಗಾರಿ: 7 ಮಂದಿಯ ಬಂಧನ
ಉಪ್ಪಿನಂಗಡಿ: ಇಲ್ಲಿನ ಸಮೀಪದ ನೆಲ್ಯಾಡಿಯ ಖಾಸಗಿ ಶಾಲಾ ಬಳಿ ಜುಗಾರಿ ಆಟದಲ್ಲಿ ನಿರತರಾಗಿದ್ದ ತಂಡವೊಂದರ ಮೇಲೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿ, ರು. 12,710 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಶನಿವಾರ ಸಾಯಂಕಾಲ ನೆಲ್ಯಾಡಿ ಶ್ರೀ ರಾಮ ಶಾಲೆಯ ಬಳಿ ಅಕ್ರಮವಾಗಿ ಜುಗಾರಿ ಆಟದಲ್ಲಿ ತೊಡಗಿದ್ದವರನ್ನು ದಸ್ತಗಿರಿ ಮಾಡಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಕಾರ್ಯಾಚರಣೆಯನ್ನು ಉಪ್ಪಿನಂಗಡಿ ಎಸ್‌ಐ ರವಿ .ಬಿ.ಎಸ್. ಅವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು.

ಹಲ್ಲೆ- ದೂರು
ಉಪ್ಪಿನಂಗಡಿ: ಇಲ್ಲಿನ ಸಮೀಪದ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ಅಬ್ದುಲ್ ಇಸಾಕ್ ಎಂಬವರಿಗೆ ಅಬ್ದುಲ್ಲಾ ಮತ್ತು ನಾಸೀರ್ ಎಂಬವರು ದೊಣ್ಣೆ ಮತ್ತು ಕೈಯಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಜಾಗದ ತಕರಾರು ಈ ಕೃತ್ಯಕ್ಕೆ ಕಾರಣವೆಂದು ತಿಳಿಯಲಾಗಿದೆ. ಗಾಯಾಳು ಇಸಾಕ್ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲುಗೊಂಡಿದ್ದಾರೆ.

ರಸ್ತೆಗೆ ಅಡ್ಡವಾಗಿ ಬಿದ್ದ ಮರ
ಉಪ್ಪಿನಂಗಡಿ: ಇಲ್ಲಿನ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಉಪ್ಪಿನಂಗಡಿ  - ಬೆಳ್ತಂಗಡಿ ರಾಜ್ಯ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾದ ಘಟನೆ ಶನಿವಾರ ಸಂಭವಿಸಿದೆ. ಕುಪ್ಪೆಟ್ಟಿಯ ಪ್ರಧಾನ ಬಾಗದಲ್ಲಿದ್ದ ಧೂಪದ ಮರವೊಂದು ಹಠಾತ್ ರಸ್ತೆಗೆ ಅಡ್ಡವಾಗಿ ಬಿದ್ದಾಗ ಮೂರು ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟು ಅಬ್ದುಲ್ ರಹಿಮಾನ್ ಎಂಬವರ ಅಂಗಡಿ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆಯಿಂದ ರಸ್ತೆ ಸಂಚಾರ ತಡೆ ಹಿಡಿಯಲ್ಪಟ್ಟು, ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸಾಯಂಕಾಲದ ಸುಮಾರಿಗೆ ರಸ್ತೆ ಸಂಚಾರ ಮುಕ್ತವಾಯಿತು.

ಅಪಘಾತ: ಸೈಕಲ್ ಸವಾರ ಸಾವು
ಬೈಂದೂರು: ಇಲ್ಲಿನ ಉಪ್ಪುಂದ ಗ್ರಾಮದ ತಾರಾಪತಿ ಎಂಬಲ್ಲಿನ ರಾ.ಹೆ. 66ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸೈಕಲ್ ಸವಾರ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರು ಲಕ್ಷ್ಮಣ ಪೂಜಾರಿ. ಅವರು ಸಂಜೆ 5 ಗಂಟೆಗೆ ಉಪ್ಪುಂದದಿಂದ ಬೈಂದೂರು ಕಡೆಗೆ ಸೈಕಲಿನಲ್ಲಿ ಹೋಗುತ್ತಿದ್ದಾಗ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಮುಂಭಾಗದಿಂದ ಅತೀವೇಗದಲ್ಲಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಲಕ್ಷ್ಮಣ ಪೂಜಾರಿ ಅವರ ತಲೆ ಮತ್ತು ಕಾಲಿಗೆ ತೀವ್ರ ಸ್ವರೂಪದ ಗಾಯಗಳಾದವು. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಖಾಸಗಿ ದಾಖಲಿಸಲಾಯಿತು. ಅಲ್ಲಿ ಅವರು ಮೃತ ಪಟ್ಟಿದ್ದಾರೆ. ಈ ಬಗ್ಗೆ ಶೇಖರ ಪೂಜಾರಿ ಎಂಬವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಡಿಯಿಂದ ಬಿದ್ದು ಬಾಲಕ ಸಾವು
ಕೊಲ್ಲೂರು: ಇಲ್ಲಿನ ಮದೂರು ಗ್ರಾಮದ ಉದಯನಗರ ಎಂಬಲ್ಲಿ ಮಹಡಿಯಿಂದ ಬಿದ್ದು ಹುಡುಗನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಹುಡುಗ ಜೆರೋಮ್ (16) ಈತ ಇಲ್ಲಿನ ನಿವಾಸಿ ಫ್ರಾನ್ಸಿಸ್ ಎಂಬವರ ಮಗ. ಈತ ಸಹೋದರ ಅನೀಷ್ ಜೊತೆಗೆ ಏ. 9ರಂದು ಸಂಜೆ ಮಹಡಿಯ ಮೇಲುಗಡೆ ಹೋಗಿ ಸೀಲಿಂಗ್ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಸೀಲಿಂಗ್ ಮುರಿದು ಇಬ್ಬರು ಕೆಳಗೆ ಬಿದ್ದರು. ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಜೆರೊಮ್‌ನನ್ನು ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಶನಿವಾರ ಮೃತ ಪಟ್ಟಿದ್ದಾನೆ. ಈ ಬಗ್ಗೆ ಫ್ರಾನ್ಸಿಸ್ ಅವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು
ಪಡುಬಿದ್ರಿ: ಇಲ್ಲಿನ ಪಲಿಮಾರು ಗ್ರಾಮದ ನಂದಿಕೂರು ರೈಲು ನಿಲ್ದಾಣದ ಬಳಿ ಚಲಿಸುತ್ತಿರುವ ರೈಲಿನಿಂದ ಹೊರಗೆ ಎಸೆಯಲ್ಪಟ್ಟು ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಹಳಿಯ ಸುರಕ್ಷಾಕರ್ಮಿಯಾಗಿ ಕೆಲಸ ಮಾಡುವ ಲಿಂಗಪ್ಪ ಗೌಡ ಅವರು ಶನಿವಾರ ಬೆಳಗ್ಗೆ 7 ಗಂಟೆಗೆ ನಂದಿಕೂರುನಲ್ಲಿ ರೈಲ್ವೆ ಟ್ರಾಕನ್ನು ಪರಿಶೀಲಿಸುವಾಗ ಹಳಿಯ ಮೇಲೆ ಸುಮಾರು 25 - 28 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಕಂಡುಬಂತು, ಈ ವ್ಯಕ್ತಿ ಬೆಳಗ್ಗೆ 3.00 ಗಂಟೆಗೆ ಕೇರಳಕ್ಕೆ ಹೋಗುವ ಅಥವಾ ಕೇರಳದಿಂದ ಮುಂಬಯಿಗೆ ಹೋಗುವ ರೈಲಿನ ಬೋಗಿಯಿಂದ ಹೊರಗಡೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ಮೃತಪಟ್ಟಿರಬಹುದು ಎನ್ನಲಾಗಿದೆ. ಲಿಂಗಪ್ಪ ಗೌಡ ಅವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯುವತಿ ನಾಪತ್ತೆ
ಕುಂದಾಪುರ: ಇಲ್ಲಿನ ಗಂಗೊಳ್ಳಿ ಗ್ರಾಮದಲ್ಲಿ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ಏ. 10ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಣೆಯಾದವರು ಶಕುಫಾ (20), ಈಕೆ  ಇಲ್ಲಿನ ನಾಕುಡಾ ಮೊಹಲ್ಲಾದ ನಿವಾಸಿ ಮಹಮ್ಮದ್ ಗೌಸ್ ಎಂಬವರ ಮಗಳು. ಸುಮಾರು ಒಂದುವರೆ ತಿಂಗಳ ಹಿಂದೆ ಅಜ್ಜಿ ಮನೆಗೆ ಬಂದಿದ್ದು, ಅಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಧರಿಸಿದ್ದ ನೈಟಿಯಲ್ಲಿ ಮನೆಯ ಕೋಣೆಯಲ್ಲಿ ಮಲಗಿದ್ದವಳು ಕಾಣೆಯಾಗಿರುತ್ತಾಳೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗದು, ಚಿನ್ನಾಭರಣ ಕಳವು
ಮಣಿಪಾಲ: ಇಲ್ಲಿನ ಇಂದ್ರಾಳಿ ರೇಲ್ವೆ ಗೋದಾಮ್‌ಯ ಬಳಿ ಮನೆಯೊಂದರಲ್ಲಿ ನಗದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಇಲ್ಲಿನ ನಿವಾಸಿ ಸಂಜೀವ ಭಾಗವತ್ ಅವರ ಮನೆಯ ಬೀಗ ಮುರಿದು ಶುಕ್ರವಾರ ರಾತ್ರಿ ಒಳಪ್ರವೇಶಿಸಿರುವ ಕಳ್ಳರು, ಕಪಾಟಿನಲ್ಲಿಟ್ಟಿದ್ದ ರು. 15 ಸಾವಿರ ನಗದು, ಮೂರುವರೆ ಪವನ್‌ನ ಮುತ್ತಿನ ಸರ, 3 ಪವನ್‌ನ ಕರಿಮಣಿ ಬಳೆ, ಒಂದು ಪವನ್‌ನ ಡಿಸ್ಕೋ ಸರ, ಒಂದುಕಾಲು ಪವನ್‌ನ ರೋಪ್ ಸರ, 8 ಗ್ರಾಂ ತೂಕದ 3 ಉಂಗುರಗಳನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರು. 2.30 ಲಕ್ಷ ಎಂದು ಸಂಜೀವ ಭಾಗವತ್ ಅವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡಿತರ ಸಾಮಾಗ್ರಿ ಬಿಡುಗಡೆ
ಮಂಗಳೂರು: 2013ನೇ ಸಾಲಿನ ಏಪ್ರಿಲ್ ತಿಂಗಳ ಪಡಿತರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಲಾಗಿದೆ. ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತು ಗೋಧಿ ವಿತರಣೆ ಇರುವುದಿಲ್ಲ. ಅರ್ಹ ಪಡಿತರ ಚೀಟಿದಾರರು ಏ. 25ರೊಳಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯುವಂತೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೂರು ಕುರಿತು ಸಂದೇಶ ಕಳಿಸಿ
ಮಂಗಳೂರು: ಜಿಲ್ಲಾಡಳಿತ ಚುನಾವಣಾ ಸಂಬಂಧ ದೂರು ದಾಖಲಿಸಲು ಎಸ್‌ಎಂಎಸ್ ಸೇವೆ ಆರಂಭಿಸಿದೆ. ದೂರು ದಾಖಲಿಸಲು 8123666266 ಸಂಪರ್ಕಿಸಬಹುದು. ಸಂದೇಶವು ಕ್ಷೇತ್ರದ ಸಂಖ್ಯೆ, ಕಾನೂನು ಉಲ್ಲಂಘಿಸಲ್ಪಟ್ಟ ಸ್ಥಳ, ದೂರಿನ ಸಂಕ್ಷಿಪ್ತ ವಿವರ ಒಳಗೊಂಡಿರಬೇಕು ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

ಸೈನಿಕ ನೇಮಕಾತಿ ಮುಂದೂಡಿಕೆ
ಮಂಗಳೂರು: ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಾಗಿರುವುದರಿಂದ ಚಿಕ್ಕಮಗಳೂರಿನ ಜ್ಯೋತಿನಗರ ಮೈದಾನದಲ್ಲಿ ಏ. 16 ರಿಂದ 23ರವರೆಗೆ ಆಯೋಜಿಸಿದ್ದ ಸೈನಿಕ ನೇಮಕಾತಿ ರ್ಯಾಲಿಯನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಕೂಡಲೇ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.