ದಕ್ಷಿಣ ಕನ್ನಡ

ಅರೆ ಸೇನಾಪಡೆ ಪಥಸಂಚಲನ

Published On :

ಉಪ್ಪಿನಂಗಡಿ: ವಿಧಾನ ಸಭಾ ಚುನಾವಣಾ ಭದ್ರತೆಗಾಗಿ ನಿಯೋಜಿಸಿರುವ ಅರೆ ಸೇನಾಪಡೆಯ ಸಿಬ್ಬಂದಿ ಪಥ ಸಂಚಲನವು ಉಪ್ಪಿನಂಗಡಿ ಪೇಟೆಯಲ್ಲಿ ಶನಿವಾರ ಸಾಯಂಕಾಲ ನಡೆಯಿತು.
ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿಯೊಡಗೂಡಿ ಸಾಗಿದ ಪಥ ಸಂಚಲನವು ಉಪ್ಪಿನಂಗಡಿಯ ಪ್ರಮುಖ ಬೀದಿಯಲ್ಲಿ ಸಾಗಿ ನಿರ್ಭಯ ಮತದಾನದ ಭರವಸೆಯನ್ನು ಮೂಡಿಸಿತು.
ಉಪ್ಪಿನಂಗಡಿ ವೃತ್ತ ನಿರೀಕ್ಷಕ ಸುರೇಶ್ ಮತ್ತು ಉಪ ನಿರೀಕ್ಷಕ ರವಿ ಬಿ.ಎಸ್ ಅವರ ಉಪಸ್ಥಿತಿಯಲ್ಲಿ ನಿಯೋಜಿತ ಸೇನಾಪಡೆಯ ತುಕುಡಿಯ ಮುಖ್ಯಸ್ಥರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. ನಕ್ಸಲ್ ಪ್ರಭಾವ ಕಂಡು ಬಂದಿರುವ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿನ ಸುರಕ್ಷತೆಯ ಹಿನ್ನೆಲೆಯಲ್ಲಿ ಹಾಗೂ ಸಂಭಾವ್ಯ ಅಕ್ರಮಣವನ್ನು ಎದುರಿಸಲು ಸನ್ನದ್ಧರಾಗಿರುವ ಭದ್ರತಾ ವ್ಯವಸ್ಥೆಗೆ ಪೂರಕವಾಗಿ ಭದ್ರತಾ ಪಡೆಗಳು ಠಿಕಾಣಿ ಹೂಡಿರುವ ಪ್ರದೇಶವೂ ಸೇನಾ ಭದ್ರತೆಗೆ ಒಳಗಾಗಿದೆ.
ಕಡಬದಲ್ಲಿ: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಭದ್ರತೆಗಾಗಿ ಆಗಮಿಸಿದ ಆರ್.ಪಿ.ಎಸ್.ಎಫ್. ಸಿಬ್ಬಂದಿ ಹಾಗೂ ಕಡಬ ಪೊಲೀಸ್ ಮತ್ತು ಅಧಿಕಾರಿಗಳು ಕಡಬ ಪೇಟೆಯಲ್ಲಿ ಶನಿವಾರ ಸಂಜೆ  ಪಥ ಸಂಚಲನ ನಡೆಸಿದರು.
  ಕಡಬ ಠಾಣೆಯ ಎಸ್.ಐ. ನಾಗರಾಜ್ ಹಾಗೂ ಸಿಬ್ಬಂದಿ, ರೇಲ್ವೆ ಪ್ರೋಟೆಕ್ಷನ್ ಸೆಕ್ಯೂರಿಟಿ ಫೋರ್ಸ್ (ಆರ್.ಪಿ.ಎಸ್.ಎಫ್.)ನ ಸುಮಾರು 87 ಸಿಬ್ಬಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
--
ಮಕ್ಕಳ ಜತೆ ಸೇರಿ ಮತ ಯಾಚಿಸಿ: ಆಸ್ಕರ್
ಬಂಟ್ವಾಳ: ಚುನಾವಣೆಯ ಪ್ರಚಾರದ ನಡುವೆ ಮಕ್ಕಳನ್ನು ಮರೆಯಬೇಡಿ ಅವರ ಕೈಗೂ ಕಾಂಗ್ರೆಸ್ ಪಕ್ಷದ ಧ್ವಜ ಮತ್ತು ಬ್ಯಾಡ್ಜ್ ಕೊಡಿ, ಮಕ್ಕಳನ್ನು ನಮ್ಮ ಜೊತೆ ಸೇರಿಸಿಕೊಂಡೆ ಮತಯಾಚನೆ ಮಾಡಿ ಎಂದು ಕಾರ್ಯಕರ್ತರಿಗೆ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
 ರಮಾನಾಥ ರೈ ಪರ ಚುನಾವಣಾ ಪ್ರಚಾರಕ್ಕೆಂದು ಭಾನುವಾರ ಬಿ.ಸಿ. ರೋಡಿಗೆ ಆಗಮಿಸಿದ ಅವರು ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ಕಾಂಗ್ರೆಸ್ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದ ಬಳಿಕ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
 ಮನೆ ಬಾಗಿಲಿಗೆ ಹೋಗಿ ಯಜಮಾನರಲ್ಲಿ ಮಾತ್ರ ಮತ ಕೇಳುವುದಲ್ಲ. ಆ ಮನೆಯ ಅಡುಗೆ ಕೋಣೆಯವರೆಗೆ ಹೋಗಿ ಮನೆಯ ಮಹಿಳೆಯರಲ್ಲಿ ಅಮ್ಮಾ ಎಂದು ಮಾತನಾಡಿಸಿ ಮತಯಾಚಿಸಿ. ತಂದೆ ತಾಯಿಗಳು ಮಕ್ಕಳ ಮಾತು ಕೇಳುತ್ತಾರೆ. ಹಾಗಾಗಿ ಮಕ್ಕಳನ್ನು ನಮ್ಮ ಜೊತೆ ಸೇರಿಸಿ ಅವರ ಮೂಲಕ ಮಕ್ಕಳ ಪಕ್ಷವಾದ ಕಾಂಗ್ರೆಸ್‌ಗೆ ಮತವನ್ನು ನೀಡುವಂತೆ ಮನೆಯವರ ಮನಸ್ಸನ್ನು ಒಲಿಸಿ ಎಂದರು.
ಮಕ್ಕಳ ಕೈಗೆ ಫ್ಲ್ಯಾಗ್ ಮತ್ತು ಬ್ಯಾಡ್ಜ್ ಕೊಟ್ಟರೆ ಆ ಮನೆ ಕಾಂಗ್ರೆಸ್‌ಗೆ ಸೇರುತ್ತದೆ ಎನ್ನುವುದು ಲೆಕ್ಕಚಾರ. ಮಕ್ಕಳನ್ನು ಕಡೆಗಣಿಸದೆ ಅವರನ್ನು ಮುಂದಿಟ್ಟುಕೊಂಡು ನಮ್ಮ ಕೆಲಸ ಮಾಡಿಕೊಳ್ಳೋಣ ಎಂದರು.
  ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಐವನ್ ಡಿ' ಸೋಜಾ ಮಾತನಾಡಿ, ಮುಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರೈ ಓರ್ವ ಪವರ್‌ಫುಲ್ ಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.