ದಕ್ಷಿಣ ಕನ್ನಡ

ಕಾರು-ಬೈಕ್ ಡಿಕ್ಕಿ; ಸವಾರ ಗಾಯ

Published On :

ಉಪ್ಪಿನಂಗಡಿ: ರಾಜ್ಯ ಹೆದ್ದಾರಿಯ ಆಲಂಕಾರು ಬಸ್ ನಿಲ್ದಾಣದ ಬಳಿ ಕಾರು-ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ, ಆಲಂಕಾರು ಗ್ರಾಮದ ಶರವೂರು ರಘುನಾಥ್ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.  ಬೈಕ್ ಆಲಂಕಾರು ಪೇಟೆಯಿಂದ ಶರವೂರು ದ್ವಾರದ ಮೂಲಕ ಶರವೂರು ರಸ್ತೆಗೆ ತಿರುವು ಪಡೆದುಕೊಳ್ಳುತ್ತಿದ್ದಾಗ ಕಡಬದಿಂದ ಉಪ್ಪಿನಂಗಡಿಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಗಾಯಗೊಂಡ  ಬೈಕ್ ಸವಾರನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದನ ಕಳವು; ದೂರು
ಬಂಟ್ವಾಳ: ಮನೆಯ ಪಕ್ಕ ಕಟ್ಟಿ ಹಾಕಿದ ದನವನ್ನು ಕದ್ದ ಘಟನೆ ಅಪ್ಪೆರಿಪಾದೆಯಲ್ಲಿ ನಡೆದಿದೆ. ಅಪ್ಪೆರಿಪಾದೆ ನಿವಾಸಿ ಗೋವಿಂದ ನಾಯ್ಕಗೆ ಸೇರಿದ ಕರು ಹಾಕಿದ ದನವನ್ನು ಮನೆಯ ಪಕ್ಕದ ರಸ್ತೆ ಬದಿಯಲ್ಲಿ ಮೇಯಲೆಂದು ಹಗ್ಗದಲ್ಲಿ ಕಟ್ಟಿ ಹಾಕಿದ್ದರು. 3-4 ಗಂಟೆ ಸಮಯಕ್ಕೆ ದನವನ್ನು ಯಾರೋ ದುಷ್ಕರ್ಮಿಗಳು ಹಗ್ಗ ತುಂಡರಿಸಿ ದನವನ್ನು ಕದ್ದೊಯ್ದಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ದಾಳಿ; ಒರ್ವನ ಬಂಧನ
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಸ್.ರಾವ್ ನಗರದ ಬಿಜಾಪುರ ಕಾಲನಿಯ ನಾಗ ಬನ ಬಳಿ ಮಟ್ಕಾ ನಡೆಯುತ್ತಿರುವ ಜಾಗಕ್ಕೆ ಪೊಲೀಸ್ ದಾಳಿ ನಡೆದಿದ್ದು ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಮೂಲ್ಕಿ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಮಟ್ಕಾಕ್ಕೆ ಹಣ ಸಂಗ್ರಹಿಸುತ್ತಿದ್ದ ಸ್ಥಳೀಯ ನಿವಾಸಿ ಬಸವರಾಜ್‌ನನ್ನು ದಸ್ತಗಿರಿ ಮಾಡಿದ್ದಾರೆ. ಮಟ್ಕಾಕ್ಕೆ ಸಂಗ್ರಹಿಸಿದ ರು. 1040 ವಶಪಡಿಸಿಕೊಂಡಿದ್ದು ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಅಪಘಾತ ಗಾಯಾಳು ಸಾವು
ಬೆಳ್ತಂಗಡಿ: ಉಜಿರೆಯಲ್ಲಿ ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳು ಬುಧವಾರ ಮೃತಪಟ್ಟಿದ್ದಾರೆ. ಧಾರವಾಡದ ರಾಮನಗರ ನಿವಾಸಿ ಉಜಿರೆ ಎಸ್‌ಡಿಎಂ ಕಾಲೇಜಿನ ಸಾಫ್ಟ್‌ವೇರ್ ಡೆವಲಪರ್ ಪ್ರವೀಣ್ ಎಸ್.ಗವಿಮಠ್ (38) ಮೃತರು.
ಇವರು ಕೆಲವು ದಿನಗಳ ಹಿಂದೆ ಉಜಿರೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿದ್ದವು. ಗಂಭೀರ ಗಾಯಗೊಂಡ ಪ್ರವೀಣ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಪ್ರವೀಣ್ ಬುಧವಾರ ಕೊನೆಯುಸಿರೆಳೆದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ಮಾನಹಾನಿ ಯತ್ನ
ಬೆಳ್ತಂಗಡಿ: ಬಾಲಕಿಯೊಬ್ಬಳನ್ನು ಮಾನಹಾನಿ ಮಾಡಲು ಯತ್ನಿಸಿದ ಘಟನೆ ಮುಂಡಾಜೆ ಬಳಿ ನಡೆದಿದೆ. ಡಿ.2ರಂದು ಮುಂಡಾಜೆಯ ಕಟ್ಟೆ ರಕ್ಷಿತಾರಣ್ಯ ನರ್ಸರಿ ಬಳಿ ನೆರಿಯದ ಅನ್ಯಮತೀಯ ಬಾಲಕಿ(16) ತನ್ನ ತಂದೆಯ ಜತೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಈ ಸಂದರ್ಭ 10-15 ಮಂದಿಯ ತಂಡ ಕಾರು ಮತ್ತು ಬೈಕ್‌ನಲ್ಲಿ ಹಿಂಬಾಲಿಸಿದೆಯಲ್ಲದೆ ಇವರನ್ನು ತಡೆದು ನಿಲ್ಲಿಸಿದೆ. ಬಾಲಕಿಯ ಮೈಗೆ ಕೈ ಹಾಕಿ ಎಳೆದಾಡಿದೆ. ಬಾಲಕಿ ಕೊಸರಾಡಿಕೊಂಡು ಹೇಗೋ ತಪ್ಪಿಸಿಕೊಂಡಿದ್ದಾಳೆ. ಅದರೂ ತಂಡ ದುಷ್ಕೃತ್ಯಕ್ಕೆ ಮುಂದಾಗಿದೆ. ಆಕೆಯ ಬಟ್ಟೆ ಹರಿದು ಹಾಕಿದ ತಂಡ ಆಸಿಡ್ ಹಾಕಿ ಕೊಲ್ಲುವ ಬೆದರಿಕೆಯೊಡ್ಡಿದೆ. ಪ್ರಾಣಭಯದಿಂದ ಬಾಲಕಿಯ ತಂದೆ ಎರಡು ದಿನ ಕಳೆದ ಬಳಿಕ ಗುರುವಾರ ರಾತ್ರಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಎದೆನೋವಿನಿಂದ ಬಸ್‌ನಲ್ಲಿ ಬೆಂಗಳೂರು ನಿವಾಸಿ ಸಾವು
ಬಂಟ್ವಾಳ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಪರಿಣಾಮ ಬೆಂಗಳೂರು ನಿವಾಸಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಬೆಂಗಳೂರು ವಿಜಯನಗರ ನಿವಾಸಿ ನರಸಿಂಹಯ್ಯ ಎಂಬವರ ಪುತ್ರ ಗಜೇಂದ್ರ (45) ಮೃತರು.
ಕಾರ್ಯನಿಮಿತ್ತ ಗುರುವಾರ ಮಂಗಳೂರಿಗೆ ಬಂದಿದ್ದ ಇವರು, ಮರಳಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬಸ್ ಬಿ.ಸಿ.ರೋಡು ತಲಪುತ್ತಿದ್ದಂತೆಯೇ ಗಜೇಂದ್ರಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಇವರನ್ನು ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.