ದಕ್ಷಿಣ ಕನ್ನಡ

ಪರ್ಯಾಯಕ್ಕೆ ಬತ್ತ ಮಹೂರ್ತ

Published On :

ಉಡುಪಿ: ಮುಂದಿನ 2 ವರ್ಷಗಳ ಕಾಲ ಉಡುಪಿ ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರ ಸ್ವೀಕರಿಸಲು ಸಿದ್ಧವಾಗುತ್ತಿರುವ ಕಾಣಿಯೂರು ಮಠದ ವತಿಯಿಂದ ಗುರುವಾರ ಸಂಪ್ರದಾಯದಂತೆ ಬತ್ತದ ಮುಹೂರ್ತ ನಡೆಸಲಾಯಿತು.
ಜ.18ರಂದು ನಡೆಯಲಿರುವ ಪರ್ಯಾಯ ಉತ್ಸವಕ್ಕೆ ಮೊದಲು ಸಂಪ್ರದಾಯದಂತೆ ಪೂಜೆಯ ಅಧಿಕಾರ ಸ್ವೀಕರಿಸುವ ಮಠದ ವತಿಯಿಂದ 4 ಮುಹೂರ್ತಗಳು ನಡೆಯುತ್ತವೆ. ಅವುಗಳ ಪೈಕಿ ಬಾಳೆ, ಅಕ್ಕಿ ಮತ್ತು ಕಟ್ಟಿಗೆ ಮುಹೂರ್ತಗಳು ಈಗಾಗಲೇ ಸಂಪನ್ನಗೊಂಡಿದ್ದು, ಕೊನೆಯ ಬತ್ತದ ಮುಹೂರ್ತ ಗುರುವಾರ ನಡೆಯಿತು.
ಆರಂಭದಲ್ಲಿ ಮಠದ ದಿವಾನರಾದ ರಘುಪತಿ ಆಚಾರ್ಯ, ವ್ಯವಸ್ಥಾಪಕ ನಾಗರಾಜ ಆಚಾರ್ಯ, ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ ರ ನೇತೃತ್ವದಲ್ಲಿ ಕಾಣಿಯೂರು ಮಠದ ಆರಾಧ್ಯ ದೇವರಾದ ಯೋಗಾನರಸಿಂಹ ದೇವರಿಗೆ, ರಥಬೀದಿಯಲ್ಲಿ ಚಂದ್ರಮೌಳೇಶ್ವರ- ಅನಂತೇಶ್ವರ ದೇವಸ್ಥಾನಗಳಲ್ಲಿ ಪೂಜೆ, ಕೃಷ್ಣಮಠದ ಮಧ್ವ ಸರೋವರದಲ್ಲಿರುವ ಭಾಗಿರಥಿ ಗುಡಿ, ಕೃಷ್ಣಮಠದಲ್ಲಿ ನವಗ್ರಹ ಕಿಂಡಿಯ ಮುಂಭಾಗದಲ್ಲಿ ಕೃಷ್ಣ ದೇವರಿಗೆ, ಮುಖ್ಯಪ್ರಾಣ ದೇವರಿಗೆ, ಶ್ರೀಮಧ್ವಾಚಾರ್ಯರಿಗೆ, ವಾದಿರಾಜ ಗುರುಸಾರ್ವಭೌಮರಿಗೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಭೋಜನ ಶಾಲೆ ಮುಖ್ಯಪ್ರಾಣ, ಸುಬ್ರಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನ ಸನ್ನಿಧಾನ, ಗೋಶಾಲೆಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ 8.30ಕ್ಕೆ ಬತ್ತದ ಮುಡಿಗಳನ್ನು ಕಾಣಿಯೂರು ಮಠದಿಂದ ರಥಬೀದಿಯಲ್ಲಿ ಆನೆ, ವಾದ್ಯ, ಬಿರುದಾವಳಿ, ಚಿನ್ನ ಪಲ್ಲಕ್ಕಿ ಸಹಿತ ಮೆರವಣಿಗೆಯಲ್ಲಿ ತಲೆಯ ಮೇಲೆ ಹೊತ್ತುಕೊಂಡು ಕೃಷ್ಣಮಠಕ್ಕೆ ತರಲಾಯಿತು.
ಅಲ್ಲಿ ಬಡಗುಮಾಳಿಗೆಯಲ್ಲಿ ಈ ಬತ್ತದ ಮುಡಿಗಳನ್ನು ಇಟ್ಟು ಪೂಜೆ, ಆರತಿ ಇತ್ಯಾದಿ ವೈದಿಕ ಕ್ರಮಗಳನ್ನು ನಡೆಸಲಾಯಿತು. ನಂತರ ಕಾಣಿಯೂರು ಮಠದ ವತಿಯಿಂದ ಉಡುಪಿ ಕೃಷ್ಣಮಠಕ್ಕೆ ಸಂಬಧಿಸಿದ ಅಷ್ಟಮಠಗಳು, ಇತರ ಮಠಗಳಿಗೆ ನವಗ್ರಹ ದಾನಗಳನ್ನು ನೀಡಲಾಯಿತು.
ನಂತರ ಈ ಹಿಂದೆ ನಡೆದ ಕಟ್ಟಿಗೆ ಮುಹೂರ್ತದ ನಂತರ ಮಧ್ವ ಸರೋವರದ ಪಕ್ಕದಲ್ಲಿ ಸಂಪ್ರದಾಯದಂತೆ  ರಥದಾಕಾರದಲ್ಲಿ ಸಂಗ್ರಹಿಸಲಾಗಿರುವ ಕಟ್ಟಿಗೆಯ ರಾಶಿ (ರಥಕ್ಕೆ) ಶಿಖರ ಪ್ರತಿಷ್ಠಾಪಿಸಲಾಯಿತು.
ಕೊನೆಗೆ ಜ.18ರಂದು ನಡೆಯುವ ಪರ್ಯಾಯೋತ್ಸವ ಕಾರ್ಯಕ್ರಮದ ಪ್ರಯುಕ್ತ ನಿರ್ಮಿಸಲಾಗುವ ಚಪ್ಪರದ ಕಾಮಗಾರಿಯನ್ನು ಗುತ್ತಿಗೆದಾರ ರಾಜೇಶ್ ಅವರಿಗೆ ವಿಧ್ಯುಕ್ತವಾಗಿ ಹಸ್ತಾಂತರಿಸಲಾಯಿತು.  
ಈ ಕಾರ್ಯಕ್ರಮಗಳಲ್ಲಿ ಪರ್ಯಾಯ ಸ್ವಾಗತ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ, ಕೋಶಾಧಿಕಾರಿ ರಮೇಶ್ ರಾವ್ ಬೀಡು, ಸಮಿತಿಯ ಇತರ ಪದಾಧಿಕಾರಿಗಳು, ಮಠದ ಗಣ್ಯ ಭಕ್ತರಾದ ಕಟೀಲಿನ ಶ್ರೀಲಕ್ಷ್ಮೀನಾರಾಯಣ ಆಸ್ರಣ್ಣ, ದೇರೇಬೈಲು ಹರಿಕೃಷ್ಣ ತಂತ್ರಿ, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ವಿದ್ವಾಂಸರು, ಅಷ್ಟ ಮಠಗಳ ಪ್ರತಿನಿಧಿಗಳು ಮತ್ತು ಕಾಣಿಯೂರು ಮಠದ ಶಿಷ್ಯ ವರ್ಗದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.