ತಂದೆಯ ಕಡಿದು ಕೊಂದ ಮಗ!
ಮಂಗಳೂರು: ಕುಡಿತದ ಚಟ ಹೊಂದಿದ್ದ ಕಾರಣಕ್ಕೆ ತಂದೆಯನ್ನೇ ಮಗನೇ ಕತ್ತಿಯಿಂದ ಕಡಿದು ಕೊಂದು ಹಾಕಿದ್ದಾನೆ. ಮುಚ್ಚೂರು ಕೊಂಪದವು ತರೋಳಿಕಾಡು ಮೀನ ಗೌಡ (53) ಕೊಲೆಯಾದವರು. ತಂದೆಯನ್ನು ಕೊಂದ ರಾಜೇಶ್ (20)ನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ರಾಜೇಶ ಗುರುವಾರ ಬೆಳಗ್ಗೆ ಎಡಪದವು ಸಾರಾಯಿ ಅಂಗಡಿಗೆ ಹೋಗಿ ಸಾರಾಯಿ ಸೇವಿಸಿ, ಒಂದು , ಬಾಟಲಿ ಮನೆಗ ತಂದಿದ್ದ. ಮಧ್ಯಾಹ್ನ ಮೀನು ಪದಾರ್ಥ ಮಾಡಿ ತಿಂದು ಜತೆಯಲ್ಲಿ ಸರಾಯಿ ಸೇವಿಸಿದ್ದ. ಮೀನ ಗೌಡ ಎಂದಿನಂತೆ ಎಲ್ಲರಿಗೂ ಬೈಯುತ್ತಿದ್ದ. ಮಗ ಬಯ್ಯಬೇಡ ಎಂದು ಹೇಳುತಲೇ ಇದ್ದ. ಕೊನೆಗೆ ಸಿಟ್ಟಿನಿಂದ ಕತ್ತಿಯಿಂದ ಒಂದೇಟು ಹೊಡೆದಿದ್ದಾನೆ. ಮಧ್ಯಾಹ್ನ 2.30ರಿಂದ 4 ಗಂಟೆ ನಡುವೆ ನಡೆದಿದೆ. ತಂದೆ ಕುಡಿದು ಬಂದು ತಾಯಿಗೆ, ಅಣ್ಣನಿಗೆ ಉಪದ್ರವ ಮಾಡುತ್ತಿದ್ದ. ಉಪಟಳ ತಾಳಲಾರದೆ ಕೊಲೆ ಮಾಡಿದೆ ಎಂದು ರಾಜೇಶ್ ಪೊಲೀಸರ ಬಳಿ ಹೇಳಿದ್ದಾನೆ. ಮೀನಗೌಡನಿಗೆ ಕಿರಿಮಗ ರಾಜೇಶ ಸಹಿತ ಮೂರು ಮಂದಿ ಗಂಡುಮಕ್ಕಳು.
ಲಾರಿ ಹರಿದು 4 ವರ್ಷದ ಮಗು ಸಾವು
ಕುಂದಾಪುರ: ತಾಯಿಯೊಂದಿಗೆ ರಸ್ತೆ ದಾಟುತ್ತಿದ್ದ 4ರ ಹರೆಯದ ಮಗುವಿಗೆ ಲಾರಿ ಡಿಕ್ಕಿಯಾಗಿ ಮಗು ಮೃತಪಟ್ಟ ಘಟನೆ ಗುರುವಾರ ಹೆಮ್ಮಾಡಿ ಗ್ರಾಮದ ಜಾಲಾಡಿ ಕ್ರಾಸ್ ಬಳಿಯ ರಾ.ಹೆ.ಯಲ್ಲಿ ನಡೆದಿದೆ. ಸದಾಶಿವ ಆಚಾರ್ಯ ಎಂಬವರ ಪುತ್ರ ಧನುಷ್ (4) ಮೃತ ಮಗು. ಆರೋಪಿ ಲಾರಿ ಚಾಲಕ ಪ್ರಕಾಶ್ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದ ಲಾರಿ ಧನುಷ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದ ಮಗುವಿನ ತಲೆಯ ಮೇಲೆ ಲಾರಿ ಚಕ್ರ ಹಾದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಸಾವು ಸಂಭವಿಸಿದೆ. ಈ ಬಗ್ಗೆ ರವಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಗಾಯಾಳು ಸಾವು
ಪುತ್ತೂರು: ಕಾರು ಮತ್ತು ಬೈಕ್ ನಡುವೆ ಬುಧವಾರ ರಾತ್ರಿ ಡಿಕ್ಕಿ ಸಂಭವಿಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾನೆ. ಪುತ್ತೂರಿನ ಕ್ಯಾಂಪ್ಕೋದಲ್ಲಿ ಕಾರ್ಮಿಕನಾಗಿರುವ ನವೀನ್ ನಾಯ್ಕ್ (28) ಮೃತರು ಪುತ್ತೂರು ನಗರದ ದರ್ಬೆ ಬೈಪಾಸ್ ಬಳಿ ಬುಧವಾರ ರಾತ್ರಿ ಮಾರುತಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ನಿಂದ ಎಸೆಯಲ್ಪಟ್ಟ ನವೀನ್ ನಾಯ್ಕ್ ಗಂಭೀರವಾಗಿ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾನೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರನಾರಾಯಣ ಸಮೀಪದ ಸಿದ್ದಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಗೋಪಾಲ ಪೂಜಾರಿ ಮೃತರು. ಇವರು 12 ವರ್ಷಗಳ ಹಿಂದೆ ಶಾರದಾ ಎಂಬವರೊಂದಿಗೆ ಮದುವೆಯಾಗಿದ್ದು, ಮಕ್ಕಳಾಗದೇ ನೋವಿನಿಂದ ಸಿದ್ದಾಪುರದ ಗೇರು ತೋಟದಲ್ಲಿ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಬ್ರಹ್ಮಾವರ: ಇಲ್ಲಿನ ಹೇರಾಡಿ ಗ್ರಾಮದ ರಂಗನಕೆರೆ ಎಂಬಲ್ಲಿ ವ್ಯಕ್ತಿ ಅನಾರೋಗ್ಯದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಾರಾಯಣ ಪೂಜಾರಿ (65) ಮೃತರು. ಇವರು, ಕಳೆದ 3 ವರ್ಷಗಳಿಂದ ಎದೆನೋವಿನಿಂದ ನರಳುತ್ತಿದ್ದು ಚಿಕಿತ್ಸೆ ಮಾಡಿದರೂ ಫಲಕಾರಿಯಾಗಿರಲಿಲ್ಲ, ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾವುದೋ ವಿಷ ಸೇವಿಸಿದ್ದರು, ತಕ್ಷಣ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೇ ಸಾವು ಸಂಭವಿಸಿದೆ. ಈ ಬಗ್ಗೆ ಅವರ ಮಗ ಮಂಜುನಾಥ ಪೂಜಾರಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಉರುಳಿ ಇಬ್ಬರಿಗೆ ಗಾಯ
ಪಡುಬಿದ್ರಿ: ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಗೆ ಬಿದ್ದು ಚಾಲಕ ಹಾಗೂ ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿ ಗಾಯಗೊಂಡ ಘಟನೆ ಇಲ್ಲಿನ ತೆಂಕ ಎರ್ಮಾಳ್ ಗ್ರಾಮದ ಗರಡಿ ಬಳಿಯ ರಾ.ಹೆ.ಯಲ್ಲಿ ಬುಧವಾರ ನಡೆದಿದೆ. ಗಾಯಗೊಂಡವರನ್ನು ಬಸವರಾಜ್ ಮತ್ತು ಮಂಜುನಾಥ ಎಂದು ಗುರುತಿಸಲಾಗಿದೆ. ಬಸವರಾಜ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ ತೆಂಕ ಎರ್ಮಾಳ್ ಗ್ರಾಮದ ಗರಡಿ ಬಳಿಯಲ್ಲಿ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ಬಗ್ಗೆ ಮಂಜುನಾಥ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿ; ಪಾದಚಾರಿ ಮಹಿಳೆ ಗಾಯ
ಕಾರ್ಕಳ: ಸಾಣೂರು ಗ್ರಾಮದ ಕರಿಯಕಲ್ಲು ಲಕ್ಷ್ಮಿ ಕಲ್ಯಾಣ ಮಂಟಪದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಗಾಯಗೊಂಡವರನ್ನು ಸವಿತಾ ಎಂದು ಗುರುತಿಸಲಾಗಿದೆ. ಚಾಲಕ ಅಬ್ದುಲ್ ರಹೀಂ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದೀರುವುದೇ ಈ ಅಪಘಾತಕ್ಕೆ ಕಾರಣ ಎಂದು ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು- ಬಸ್ ಡಿಕ್ಕಿ; ಚಾಲಕ ಗಂಭೀರ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಕೊಡೆಕಲ್ಲು ಎಂಬಲ್ಲಿ ಕಾರು ಮತ್ತು ರಾಜ್ಯ ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ, ಬೆಂಗಳೂರು ಬನ್ನೇರುಘಟ್ಟ ನಿವಾಸಿ ಸುರೇಶ್ ಕುಮಾರ್ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಗಾಯಾಳು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಸುರೆಶ್ ಕುಮಾರ್ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಸುಬ್ರಹ್ಮಣ್ಯದಿಂದ ಧರ್ಮಸ್ಥಳದತ್ತ ಬರುತ್ತಿದ್ದ ಬಸ್ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಡು ಪ್ರಾಣಿಗೆ ಕಾರ್ಮಿಕ ಬಲಿ
ಉಡುಪಿ: ಅಜೆಕಾರಿನ ಕೆರ್ವಾಶೆ ಗ್ರಾಮದ ಹಣಿಕುಮೇರು ಎಂಬಲ್ಲಿ ಇರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಸಸ್ಯಕ್ಷೇತ್ರದ ಶೆಡ್ನಲ್ಲಿ ಕಾಡು ಪ್ರಾಣಿಗಳಿಗೆ ಕಾರ್ಮಿಕ ಬಲಿಯಾಗಿದ್ದಾನೆ. ಪ್ರಕಾಶ ನಂಬೂದಿರಿ (65) ಮೃತರು. ಇವರು ಕೆ.ಸಿ.ಡಿ.ಸಿ. ನಿಗಮಕ್ಕೆ ಸೇರಿದ ಗೇರು ಸಸ್ಯಕ್ಷೇತ್ರದ ಶೆಡ್ನಲ್ಲಿ ಕಳೆದ 15 ವರ್ಷಗಳಿಂದ ಒಂಟಿಯಾಗಿ ವಾಸವಾಗಿದ್ದರು. ಗುರುವಾರ ಬೆಳಗ್ಗೆ ಸಹಕಾರ್ಮಿಕ ಪ್ರಶಾಂತ ಶೆಡ್ ಬಳಿ ಬಂದು ನೋಡಿದಾಗ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ನಂಬೂದಿರಿ ಪತ್ತೆಯಾಗಿದೆ. ಶವದ ಮೈಮೇಲೆ ಕಂಡು ಬಂದ ಗಾಯಗಳಿಂದ ಕಾಡುಪ್ರಾಣಿಗಳು ದಾಳಿಮಾಡಿ ಕಚ್ಚಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿ ಮಾರಾಟ: ಮೂವರ ಸೆರೆ
ಸುಬ್ರಹ್ಮಣ್ಯ: ಗುತ್ತಿಗಾರು ಪೇಟೆಯ ಅಂಗಡಿಯೊಂದರ ಎದುರು ಅಕ್ರಮವಾಗಿ ಕೋವಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ದಿವಾಕರ ಆಚಾರ್ಯ ಚತ್ರಪ್ಪಾಡಿ, ಸುರೇಶ್ ಗೌಡ ಮಲ್ಲಾರ, ನಾಗೇಶ್ ಮಾವಿನಕಟ್ಟೆ ಬಂಧಿತರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪರವಾನಗಿ ಇಲ್ಲದೆ ಕೋವಿ ಹೊಂದಿರುವುದು ಬೆಳಕಿಗೆ ಬಂತು. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

