ದಕ್ಷಿಣ ಕನ್ನಡ

ಕೊಡಗು, ತುಳುನಾಡು ರಾಜ್ಯ ಬೇಡ

Published On :

ಪುತ್ತೂರು: ಕೊಡಗು ರಾಜ್ಯ, ತುಳುನಾಡು ರಾಜ್ಯ ಎಂದು ಕರ್ನಾಟಕವನ್ನು ವಿಭಜಿಸುವ ಚಿಂತನೆ ಸರಿಯಲ್ಲ. ಅಖಂಡ ಕರ್ನಾಟಕದ ಕಲ್ಪನೆ ಎಲ್ಲರಲ್ಲಿ ಮೂಡಬೇಕಾಗಿದೆ ಎಂದು ಸಾಹಿತಿ ಕಮಲಾ ಹಂಪನಾ ಅಭಿಪ್ರಾಯಪಟ್ಟರು.
 ಉಪ್ಪಿನಂಗಡಿಯಲ್ಲಿ ನಡೆದ 18ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ  ಉದ್ಘಾಟಿಸಿ ಅವರು ಮಾತನಾಡಿದರು.  
 ಕರ್ನಾಟಕದ ವಿಭಜನೆಯ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಬೆಳಗಾವಿ ವಿಚಾರದಲ್ಲಿ ಕರ್ನಾಟಕವನ್ನು ಒಡೆಯುವ ಬಗ್ಗೆ ಪ್ರಸ್ತಾಪವಾಗುತ್ತಿದೆ. ಇದು ಸರಿಯಲ್ಲ. ಕರ್ನಾಟಕದ ವಿಭಜನೆಗೆ ಯಾವ ಕನ್ನಡಿಗನೂ ಅವಕಾಶ ನೀಡಬಾರದು ಎಂದು ಹೇಳಿದರು.
ಕನ್ನಡಪರ ಚಿಂತನೆ: ಕನ್ನಡ ನಾಡನ್ನು ಕಟ್ಟಿದರೆ ಇಡೀ ಭಾರತವನ್ನು ಕಟ್ಟಿದಂತೆ. ಈ ನಿಟ್ಟಿನಲ್ಲಿ ಚಿಂತನೆಗಳು ಸಾಗಬೇಕು ಎಂದ ಅವರು ಬೆಳಗಾವಿ ವಿಚಾರದಲ್ಲಿ ನಮ್ಮ ಜನಪ್ರತಿನಿಧಿಗಳು ಒಡಕಿನ ವಿಚಾರಗಳನ್ನು ಮಾಡುತ್ತಿದ್ದಾರೆ. ಬೆಳಗಾವಿಯನ್ನು ಉಳಿಸಿಕೊಳ್ಳುವ ಬಗ್ಗೆ ಒತ್ತು ನೀಡುವ ಕೆಲಸವಾಬೇಕು. ಕನ್ನಡಿಗ ಬಾಳಿ ಬದುಕಲು ಇರುವುದು ಒಂದೇ ಕರ್ನಾಟಕ ಮಾತ್ರ ಎಂಬ ಸತ್ಯ ನಮ್ಮಲ್ಲಿ ಉಳಿಯಬೇಕು ಎಂದರು.
 ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಪದೇ ಪದೇ ಆಗ್ರಹಿಸಿದ ಅವರು ನಮ್ಮ ಆಡಳಿತಾತ್ಮಕ ಮನಸ್ಸು ಈ ವಿಚಾರದಲ್ಲಿ ಆಸ್ಥೆ ವಹಿಸಬೇಕಿದೆ ಎಂದರು. ಕನ್ನಡ ಭಾಷೆಯ ಶಿಕ್ಷಣಕ್ಕೆ ಈಗಿನ ಶಿಕ್ಷಣ ನೀತಿ ಹೆಚ್ಚಿನ ಒತ್ತು ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಬಾರದವರನ್ನು ಆರಿಸಬೇಡಿ: ಸಮ್ಮೇಳನದಲ್ಲಿ ಕಲಾಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಮೂಲಗನ್ನಡದ ಸಾರ ಸತ್ವವನ್ನು ಉಳಿಸಿಕೊಂಡ ನಾಡು ಕರಾವಳಿ ಕರ್ನಾಟಕ ಎಂದು ಕೊಂಡಾಡಿದರು. ಕರ್ನಾಟಕದಲ್ಲಿ ಬೇರೆ ಬೇರೆ ಸ್ವರೂಪದ ಕನ್ನಡ ಭಾಷೆಗಳಿವೆ. ಆದರೆ ಒಟ್ಟಾರೆಯಾಗಿ ಕನ್ನಡದ ಸವಿ ಒಂದೇ ಆಗಿದೆ. ಕರ್ನಾಟಕದಲ್ಲಿ ಪ್ರಸ್ತುತ ಕನ್ನಡದ ಸೊಗಡು ಉಳಿದಿದ್ದರೆ ಅದಕ್ಕೆ ಕರ್ನಾಟಕದ ರೈತರು, ಮನೆ ಹೆಣ್ಮಕ್ಕಳು ಕಾರಣವೇ ಹೊರತು ಪಟ್ಟಣ ಅಥವಾ ನಗರದ ಕನ್ನಡಿಗರಲ್ಲ. ಕನ್ನಡವನ್ನು ಉಳಿಸುವಲ್ಲಿ ಗ್ರಾಮೀಣ ಕರ್ನಾಟಕದ ಕೊಡುಗೆ ಸದಾ ಕಾಲ ಅಪಾರವಾಗಿದೆ. ಆಡುನುಡಿಯ ರೂಪದಲ್ಲಿ ಕನ್ನಡ ಭಾಷೆಯ ಸೊಗಡನ್ನು ನೂರಾರು ಶಬ್ದಗಳಲ್ಲಿ ಉಲ್ಲೇಖಿಸಿದ ಮುಖ್ಯಮಂತ್ರಿ ಚಂದ್ರು ಅವರು ರಾಜಕಾರಣಿಗಳು ಕನ್ನಡ ಭಾಷೆಯನ್ನು ಕೇವಲ ಚುನಾವಣಾ ಲಾಭಕ್ಕೆ ಸೀಮಿತಗೊಳಿಸುವ ಬಗ್ಗೆ ತಮ್ಮ ಖೇದ ವ್ಯಕ್ತಪಡಿಸಿದರು.  ಚುನಾವಣೆಯಲ್ಲಿ ಕನ್ನಡ ಭಾಷಾ ಜ್ಞಾನವಿಲ್ಲದ ರಾಜಕಾರಣಿಯನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಬಾರದು ಎಂದು ವಿನಂತಿಸಿದ ಮುಖ್ಯಮಂತ್ರಿ ಚಂದ್ರು, ಕನ್ನಡ ಬಾರದ ಅಧಿಕಾರಿಗಳಿಗೂ ಕನ್ನಡ ನಾಡಿನಲ್ಲಿ ಅಧಿಕಾರದ ಅವಕಾಶ ನೀಡಬಾರದು ಎಂದರು. ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರು ವಿದ್ವಾಂಸರಾದ ಕೈತಂಜೆ ನರಸಿಂಹ ಭಟ್, ಡಾ.ಎನ್. ಸುಕುಮಾರ ಗೌಡ, ಡಾ. ಡಿ. ಸದಾಶಿವ ಭಟ್, ಎಸ್.ಡಿ.ಪೆಜತ್ತಾಯ, ಡಾ.ಫಾ. ವಿಲಿಯಂ ರಾಬರ್ಟ್ ಡಿಸಿಲ್ವ, ಪ್ರೊ. ವಿ.ಬಿ. ಅರ್ತಿಕಜೆ, ವೇ.ಮೂ. ಕೇಶವ ಜೋಗಿತ್ತಾಯ ಅವರನ್ನು ಸನ್ಮಾನಿಸಿ ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.