ಅಪಘಾತ: ಬೈಕ್ ಸವಾರ ಸಾವು
ಕಾಪು: ಇಲ್ಲಿನ ರಾ.ಹೆ. 66ರ ಪಾಂಗಾಳದಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತರು ಶಿವಣ್ಣ ಯಾನೆ ಶಿವರಾಮ. ಅವರು ತಮ್ಮ ಬೈಕ್ನಲ್ಲಿ ರಾತ್ರಿ 9.30 ಗಂಟೆಗೆ ಕಾಪುವಿನಿಂದ ಉಡುಪಿಗೆ ಬರುತ್ತಿದ್ದರು. ಆಗ ಪಾಂಗಾಳ ಗ್ರಾಮದ ವಿದ್ಯಾವರ್ಧಕ ಶಾಲೆಯ ಬಳಿ ಮುಂಭಾಗದಿಂದ ಅತೀ ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆಯಿತು. ಆಗ ಶಿವರಾಮ ಮತ್ತು ಸಹಸವಾರ ಪ್ರಶಾಂತ್ ಅವರು ರಸ್ತೆಗೆ ಎಸೆಯಲ್ಪಟ್ಟು, ತೀವ್ರವಾಗಿ ಗಾಯಗೊಂಡರು. ಅವರಲ್ಲಿ ಶಿವರಾಮ ಸ್ಥಳದಲ್ಲಿಯೇ ಮೃತಪಟ್ಟರು. ಪ್ರಶಾಂತ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಭರತ್ ಅವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಪಲ್ಟಿ: ಓರ್ವ ಸಾವು
ಗಂಗೊಳ್ಳಿ: ಇಲ್ಲಿನ ರಾ.ಹೆ. 66ರ ಮರವಂತೆ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಕಾರು ಸವಾರ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತರು ನಾವುಂದದ ನಿವಾಸಿ ರಾಯಿದ್ ರಫೀಕ್ (18). ಅವರು ತಮ್ಮ ಗೆಳೆಯರೊಂದಿಗೆ ಕಾರಿನಲ್ಲಿ ನಾವುಂದ ಕಡೆಯಿಂದ ಕುಂದಾಪುರಕ್ಕೆ ಅತೀ ವೇಗದಲ್ಲಿ ತೆರಳುತ್ತಿದ್ದರು. ಆಗ ಮರವಂತೆ ರಾ.ಹೆ.ಯಲ್ಲಿ ಮುಂಭಾಗದಿಂದ ಬರುತ್ತಿದ್ದ ವಾಹನವು ಡಿಕ್ಕಿಯಾಗುವುದನ್ನು ತಪ್ಪಿಸಲು ಕಾರಿಗೆ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಕಾರು ಬಲಗಡೆ ತಿರುಗಿ ರಸ್ತೆ ಪಕ್ಕದ ಚರಂಡಿಗೆ ಪಲ್ಟಿಯಾಗಿ ಉರುಳಿ ಬಿತ್ತು. ಪರಿಣಾಮ ಕಾರಿನಲ್ಲಿದ್ದ ರಾಯಿದ್ ರಫೀಕ್, ಜಿ.ಎಂ. ರಯೀಸ್ (22), ಅಮೀರ್ (18), ಅನ್ಸಾರ್ (19) ಮತ್ತು ಸಬಾನ್ (20) ತೀವ್ರವಾಗಿ ಗಾಯಗೊಂಡಿದ್ದರು. ಕಾರನ್ನು ಜಿ.ಎಂ ರಯೀಸ್ ಅವರು ಚಲಾಯಿಸುತ್ತಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಅಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ರಾಯಿದ್ ರಫೀಕ್ ಅವರು ತಲೆಗೆ ಪೆಟ್ಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ವಿಟ್ಲ: ಜೀವನದಲ್ಲಿ ಜಿಗುಪ್ಸೆಗೊಂಡ ವಿವಾಹಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಪುಚ್ಚಗುತ್ತು ಎಂಬಲ್ಲಿ ಭಾನುವಾರ ನಡೆದಿದೆ. ವಿಟ್ಲ ಕಸಬಾ ಗ್ರಾಮದ ಪಡೀಲು ಪುಚ್ಚಗುತ್ತು ನಿವಾಸಿ ಬಾಬು ನಾಯ್ಕ ಅವರ ಪುತ್ರ ಪದ್ಮನಾಭ (30) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ಮಧ್ಯಾಹ್ನ ಎರಡು ಗಂಟೆಯೊಳಗೆ ಅವರ ಮೃತದೇಹ ತನ್ನ ವಾಸದ ಮನೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪದ್ಮನಾಭ ಅವರಿಗೆ ಇತ್ತೀಚೆಗೆ ವಿವಾಹವಾಗಿದ್ದು, ಅವರ ಪತ್ನಿಗೆ ಸೀಮಂತ ಕಾರ್ಯಕ್ರಮಕ್ಕೆ ದಿನ ಕೂಡಾ ನಿಗದಿಯಾಗಿತ್ತು. ಮದುವೆ ಸಂದರ್ಭ ಅವರು ಸಾಲ ಪಡೆದಿದ್ದರು. ಅದನ್ನು ತೀರಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತ: ಸ್ಕೂಟರ್ ಸವಾರ ಸಾವು
ಕಾಪು: ಇಲ್ಲಿನ ರಾ.ಹೆ. 66ರ ಮೂಳೂರು ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲಿಯ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮೃತರು ಮೊಹಮ್ಮದ್ ಷರೀಪ್ (45), ಇಲ್ಲಿನ ಕೊಪ್ಪಲಂಗಡಿ ಗ್ರಾಮದ ನಿವಾಸಿ. ಬೆಳಗ್ಗೆ 8.30ಕ್ಕೆ ತಮ್ಮ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ, ಮೂಳೂರು ಗ್ರಾಮದ ಕಮ್ಯೂನಿಟಿ ಹಾಲ್ನ ಎದುರು ಒಮ್ಮೆಲೇ ವಿಭಾಜಕದ ಆಚೆಯ ರಸ್ತೆಯಿಂದ ನಿರ್ಲಕ್ಷ್ಯದಿಂದ ಚಾಲಕನು ಬಸ್ಸನ್ನು ಈಚೆಯ ರಸ್ತೆಗೆ ತಿರುಗಿಸಿದಾಗ ಮುಖಾಮುಖಿ ಡಿಕ್ಕಿಯಾಯಿತು. ಈ ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಮೊಹಮ್ಮದ್ ಶರೀಫ್ ರಸ್ತೆಗೆ ಎಸೆಯಲ್ಪಟ್ಟು, ಬಸ್ಸಿನಡಿಗೆ ಸಿಕ್ಕಿ ಬಿದ್ದು, ತೀವ್ರವಾದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ತಮ್ಮ ಮೊಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸಿಡ್ ಎರಚಿ ಗಾಯ: ದೂರು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯ ಕೊಪ್ಪ ಮಾದೇರಿ ಎಂಬಲ್ಲಿ ಜೋಜೋ ಟಿ.ಕೆ. ಎಂಬವರ ಮೇಲೆ ದೇವಸ್ಯ ಎಂಬಾತ ಅಸಿಡ್ ಎರಚಿ ಗಾಯಗೊಳಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ರವೀಂದ್ರ ಎಂಬವರ ಮಗನಾದ ಜೋಜೋ ಟಿ.ಕೆ. ತನ್ನ ತಾಯಿಗೆ ಬೈದಿದ್ದರೆಂಬ ಕಾರಣಕ್ಕೆ ದೇವಸ್ಯನನ್ನು ತರಾಟೆಗೆ ತೆಗೆದುಕೊಂಡಾಗ ಆಕ್ರೋಶಗೊಂಡ ದೇವಸ್ಯ ಮನೆಯೊಳಗಿದ್ದ ರಬ್ಬರ್ ಶೀಟ್ಗೆ ಬಳಸಲೆಂದು ತಂದಿರಿಸಿದ್ದ ಆಸಿಡ್ ಎರಚಿ ಗಾಯಗೊಳಿಸಿದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಗಾಯಾಳು ಜೋಜೋ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಮೇಲೆ ತಂಡ ಹಲ್ಲೆ: ದೂರು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕರಾಯ ಎಂಬಲ್ಲಿ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ದಲಿತ ಯುವಕರ ಮೇಲೆ ಹತ್ತು ಜನರ ತಂಡ ಹಲ್ಲೆ ನಡೆಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಸುಬ್ರಹ್ಮಣ್ಯ ನಿವಾಸಿಗಳಾದ ಪ್ರಶಾಂತ ಮತ್ತು ವಸಂತ ಎಂಬಿಬ್ಬರು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಸ್ಸನ್ನೇರುವ ಸಂದರ್ಭ ಯುವತಿಯೋರ್ವಳು ಮುಂಭಾಗದ ಬಾಗಿಲ ಮೂಲಕ ಬಸ್ಸನ್ನು ಏರಬಾರದೆಂದು ತಾಕೀತು ಮಾಡಿ ಗದ್ದಲವನ್ನುಂಟು ಮಾಡಿದ್ದಳು. ಯುವತಿಯ ಹಠಕ್ಕೆ ಸೋತು ಯುವಕರಿಬ್ಬರೂ ಹಿಂಬಾಗಿಲ ಮೂಲಕವೇ ಬಸ್ಸನೇರಿದರೂ, ಬಸ್ಸು ಕರಾಯ ತಲುಪುವ ವೇಳೆಗೆ ಯುವತಿಯ ಪೋನ್ ಕರೆಯನ್ನಾಧರಿಸಿ ಆಗಮಿಸಿದ ಹತ್ತು ಮಂದಿಯ ತಂಡ ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ. ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

