ನಾಮಪತ್ರ ಸಲ್ಲಿಕೆ ಪ್ರಾರಂಭ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತಕ್ಕೆ ಮಾರ್ಚ್ 7ಕ್ಕೆ ನಡೆಯುವ ಚುನಾವಣೆಗೆ ಫೆ.16ರಿಂದ ಅಧಿಸೂಚನೆ ಹೊರಡಿಸಲಾಗಿದೆ.
ಫೆ.23ರಂದು ನಾಮಪತ್ರ ಸಲ್ಲಿಕೆಗೆ ಕೊನೆದಿನ, 25ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 27ರಂದು ನಾಮಪತ್ರ ಹಿಂತೆಗೆತಕ್ಕೆ ಅವಕಾಶ. ಮಾ.7ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಚುನಾವಣೆ ನಡೆಯಲಿದೆ. ಮಾ.11ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಕಾಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
2007ರ ಸಾರ್ವತ್ರಿಕ ಚುನಾವಣೆ ಸಮಯ ನಿಗದಿಪಡಿಸಲಾದ ವಾರ್ಡ್ವಾರು ಮೀಸಲಾತಿಯನ್ವಯ ಚುನಾವಣೆ ನಡೆಸುವಂತೆ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಪಾಲಿಕೆಗೆ ಸಂಬಂಧಿಸಿ 1ರಿಂದ 10 ವಾರ್ಡ್ಗೆ ಪಾಲಿಕೆ ಉಪಕಚೇರಿ ಸುರತ್ಕಲ್, 21ರಿಂದ 25, 31ರಿಂದ 35 ವಾರ್ಡ್ಗೆ ಪಾಲಿಕೆ ಉಪಕಚೇರಿ ಕದ್ರಿ, 11ರಿಂದ 20, 26ರಿಂದ 30, 36ರಿಂದ 60 ವಾರ್ಡ್ಗೆ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ಮೂಡುಬಿದ್ರೆ ಪುರಸಭೆ, ಉಳ್ಳಾಲ ಪುರಸಭೆ, ಬಂಟ್ವಾಳ ಪುರಸಭೆ, ಪುತ್ತೂರು ಪುರಸಭೆ, ಬೆಳ್ತಂಗಡಿ ಪಟ್ಟಣ ಪಂಚಾಯ್ತಿ, ಸುಳ್ಯ ಪಟ್ಟಣ ಪಂಚಾಯ್ತಿಗೆ ಆಯಾ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಸಬಹುದು.
ಚುನಾವಣೆ ಘೋಷಣೆಯಾಗಿರುವುದರಿಂದ ಫೆ.15ರಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಮಾ.11ರ ವರೆಗೆ ಜಾರಿಯಲ್ಲಿರುತ್ತದೆ.
ಒಟ್ಟು 539 ಮತಗಟ್ಟೆ: ಮಂಗಳೂರು ಪಾಲಿಕೆಯ 60 ವಾರ್ಡ್ಗೆ 379 ಮತಗಟ್ಟೆ, ಮೂಡುಬಿದ್ರೆ ಪುರಸಭೆಯ 23 ವಾರ್ಡ್ಗಳಿಗೆ 23 ಮತಗಟ್ಟೆ, ಉಳ್ಳಾಲ ಪುರಸಭೆಯ 27 ವಾರ್ಡ್ಗೆ 35 ಮತಗಟ್ಟೆ, ಬಂಟ್ವಾಳ ಪುರಸಭೆಯ 23 ವಾರ್ಡ್ಗೆ 31 ಮತಗಟ್ಟೆ, ಪುತ್ತೂರು ಪುರಸಭೆಯ 27 ವಾರ್ಡ್ಗೆ 42 ಮತಗಟ್ಟೆ, ಬೆಳ್ತಂಗಡಿ ಪಟ್ಟಣ ಪಂಚಾಯ್ತಿಯ 11 ವಾರ್ಡ್ಗೆ 11 ಮತಗಟ್ಟೆ ಹಾಗೂ ಸುಳ್ಯ ಪಟ್ಟಣ ಪಂಚಾಯ್ತಿಯ 18 ವಾರ್ಡ್ಗೆ 18 ಮತಗಟ್ಟೆ ಸೇರಿ ಒಟ್ಟು 539 ಮತಗಟ್ಟೆ ಇರಲಿದೆ. ಮತದಾರರ ಪಟ್ಟಿಗೆ ನೋಂದಣಿಗೆ ಫೆಬ್ರವರಿ ಕೊನೆವರೆಗೆ ಅವಕಾಶವಿದೆ.
ವೆಚ್ಚ ಎಷ್ಟೆಷ್ಟು?: ಪಾಲಿಕೆ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅಭ್ಯರ್ಥಿಗಳು ರು. 3 ಲಕ್ಷ, ಪುರಸಭಾ ಚುನಾವಣೆಗೆ ರು. 1.50 ಲಕ್ಷ ಹಾಗೂ ಪಟ್ಟಣ ಪಂಚಾಯ್ತಿ ಚುನಾವಣೆಗೆ ರು. 1 ಲಕ್ಷ ಖರ್ಚು ಮಾಡಬಹುದು. ಸ್ಪರ್ಧಿಸುವ ಉಮೇದುವಾರರು ಪಾಲಿಕೆ ಚುನಾವಣೆಗೆ ಸಾಮಾನ್ಯ ವರ್ಗ ರು. 3 ಸಾವಿರ, ಇತರೆ ವರ್ಗ ರು. 1.50 ಸಾವಿರ, ಪುರಸಭೆಗೆ ಸಾಮಾನ್ಯ ವರ್ಗ ರು. 2 ಸಾವಿರ, ಇತರೆ ವರ್ಗ ರು. 1 ಸಾವಿರ, ಪಟ್ಟಣ ಪಂಚಾಯ್ತಿಗೆ ಸಾಮಾನ್ಯ ವರ್ಗ ರು. 1 ಸಾವಿರ, ಇತರೆ ವರ್ಗ ರು. 500 ಠೇವಣಿ ಚುನಾವಣಾ ಆಯೋಗಕ್ಕೆ ಪಾವತಿಸಬೇಕು.
ಈ ಬಾರಿ ಎಲೆಕ್ಟ್ರಾನಿಕ್ ಮತಯಂತ್ರ: ಇದೇ ಮೊದಲ ಬಾರಿಗೆ ಸ್ಥಳೀಯಾಡಳಿತ ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರ ಬಳಕೆಯಾಗಲಿದೆ. ಪ್ರತಿ ಮತದಾನ ಕೇಂದ್ರದಲ್ಲಿ ಹೆಚ್ಚುವರಿಯಾಗಿಯೂ ಎಲೆಕ್ಟ್ರಾನಿಕ್ ಮತಯಂತ್ರ ಇರಲಿದೆ.
ಅಪರ ಜಿಲ್ಲಾಧಿಕಾರಿ ದಯಾನಂದ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಹಾಜರಿದ್ದರು.
ಪೇಯ್ಡ್ ನ್ಯೂಸ್ಗೆ ಆಯೋಗ ಹದ್ದುಗಣ್ಣು
ಚುನಾವಣೆ ವೇಳೆ ಮಾಧ್ಯಮಗಳಲ್ಲಿ ಪೇಯ್ಡ್ ನ್ಯೂಸ್ ವ್ಯಾಪಕವಾಗಿ ಪ್ರಕಟವಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಈ ಬಾರಿ ಮಾಧ್ಯಮದತ್ತ ಚುನಾವಣಾ ಆಯೋಗ ಹದ್ದುಗಣ್ಣು ಇರಿಸಿದೆ. ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಕುರಿತು ನಿಯಂತ್ರಣ ಹೇರಲು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸುವಂತೆ ಆಯೋಗ ನಿರ್ದೇಶನ ನೀಡಿದೆ. ಈ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಪೊಲೀಸ್ ಆಯುಕ್ತರು, ಜಿಲ್ಲಾ ಎಸ್ಪಿ, ಸಹಾಯಕ ಕಮಿಷನರ್ಗಳು, ಜಿಲ್ಲಾ ವಾರ್ತಾಧಿಕಾರಿ, ತಹಸೀಲ್ದಾರ್ಗಳು ಸದಸ್ಯರು. ಅಪರ ಜಿಲ್ಲಾಧಿಕಾರಿ ಸಂಚಾಲಕರು. ಚುನಾವಣೆ ಸಂದರ್ಭ ಮುದ್ರಣ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಯು ಪ್ರಚಾರ ಸಾಮಗ್ರಿಯನ್ನು ಜಿಲ್ಲಾ ಸಮಿತಿಗೆ ಅಗತ್ಯ ನಮೂನೆ ಭರ್ತಿ ಮಾಡಿ ಒಪ್ಪಿಸಬೇಕು. ಇದನ್ನು ಸಮಿತಿ ಪರಿಶೀಲಿಸಿ/ವೀಕ್ಷಿಸಿ ಪ್ರಚಾರಕ್ಕೆ ಯೋಗ್ಯವಾಗಿರುವುದನ್ನು ಹಾಗೂ ಪ್ರಚಾರ ಸಾಧನಗಳಿಂದ ನೀತಿಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅನುಮತಿ ನೀಡುತ್ತದೆ. ಇದು ಪೇಯ್ಡ್ ನ್ಯೂಸ್, ಎಸ್ಎಂಎಸ್ ಹಾಗೂ ಫೇಸ್ಬುಕ್ ಮುಂತಾದ ಸಾಮಾಜಿತ ಜಾಲತಾಣಗಳ ಮುಖೇನ ಚುನಾವಣಾ ಪ್ರಚಾರಕ್ಕೂ ಅನ್ವಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

