ದಕ್ಷಿಣ ಕನ್ನಡ

ಜಿಲ್ಲಾದ್ಯಂತ ಬಂದ್ ಗೊಂದಲ...

Published On :

ಬಂಟ್ವಾಳ: ತಾಲೂಕಿನಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನಲೆಯಲ್ಲಿ ಬುಧವಾರ ಕೆಎಸ್‌ಆರ್‌ಟಿಸಿ ಸೇರಿದಂತೆ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಹುತೇಕ ರಿಕ್ಷಾ, ಕಾರುಗಳು ಎಂದಿನಂತೆ ಓಡಾಟ ನಡೆಸಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ವಾಹನಗಳ ಸಂಚಾರ ಸುಗಮವಾಗಿತ್ತು. ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಂದ್ ಆಚರಿಸಿವೆ.  ಬಸ್ ಸಂಚಾರ ಇಲ್ಲದ ಕಾರಣ ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು, ಮದುವೆ ಸಮಾರಂಭಗಳಿಗೆ ತೆರಳುವವರು ತೊಂದರೆ ಪಡುವಂತಾಯಿತು. ಗ್ರಾಮೀಣ ಪ್ರದೇಶದಲ್ಲಿ ಬಸ್ ಹೊರತು ಪಡಿಸಿ ಇತರ ವಾಹನಗಳ ಸಂಚಾರ ಸುಗಮವಾಗಿತ್ತು.  ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದರೆ ಸರ್ಕಾರಿ ಶಾಲೆಗಳು ತೆರೆದಿದ್ದರೂ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಂಖ್ಯೆ ಕಡಿಮೆ ಇತ್ತು. ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳು ತೆರೆದಿದ್ದರೂ ನೌಕರರ ಸಂಖ್ಯೆ ಕಡಿಮೆಯಿತ್ತು. ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪುದು ಗ್ರಾ.ಪಂ. ಮತ ಎಣಿಕೆ ನಡೆದಿದ್ದು, ಇದಕ್ಕೆ ಮುಷ್ಕರದ ಬಿಸಿ ತಟ್ಟಿರಲಿಲ್ಲ. ಸಂಜೆ 4ರ ಬಳಿಕ ಕೆಲ ಖಾಸಗಿ ಬಸ್‌ಗಳು ಸಂಚರಿಸಿದವು.
ವಿಟ್ಲದಲ್ಲಿ ವಾಹನ ಸಂಚಾರ ಸ್ಥಗಿತ
ವಿಟ್ಲ: ಭಾರತ ಬಂದ್ ಹಿನ್ನೆಲೆಯಲ್ಲಿ ಬುಧವಾರ ಸಂಚಾರಿ ವಾಹನಗಳು  ಸಂಚಾರ ಸ್ಥಗಿತಗೊಳಿಸಿದ್ದವು. ಖಾಸಗಿ ಬಸ್ಸು, ಕಾರು, ಅಟೋಗಳು ರಸ್ತೆಗೆ ಇಳಿಯಲಿಲ್ಲ. ಸಾರಿಗೆ ಸಂಸ್ಥೆಯ ಕೆಲವು ಬಸ್ಸುಗಳೂ ಸಂಚರಿಸಲಿಲ್ಲ. ಆದರೆ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್‌ಗೆ ಪ್ರತಿಕ್ರಿಯಿಸದೇ ತೆರೆದಿದ್ದವು. ಅಲ್ಲೊಂದು ಇಲ್ಲೊಂದು ಮಾತ್ರ ಮುಚ್ಚಿದ್ದವು. ಅವಶ್ಯಕ ಸೇವೆಗಳಿಗೆ ಬಂದ್‌ನ ಪರಿಣಾಮ ತೊಡಕಾಗಲಿಲ್ಲ. ವಿಟ್ಲದ ಎಲ್ಲಾ ಶಾಲಾ- ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆಯಿಲ್ಲದ ಪರಿಣಾಮ ತರಗತಿಗಳು ನಡೆಯಲಿಲ್ಲ. ಬೆರಳೆಣಿಕೆಯಷ್ಟು ಸ್ಥಳೀಯ ವಿದ್ಯಾರ್ಥಿಗಳು ಶಾಲೆಗೆ ಬಂದರೂ ಅವರಿಗೆ ಪಾಠ ಪ್ರವಚನ ನಡೆದರೂ ಮಧ್ಯಾಹ್ನ ಹೊತ್ತಿಗೆ ರಜೆ ನೀಡಲಾಗಿದೆ.
ಬೆಳ್ತಂಗಡಿ: ಖಾಸಗಿ ಕಾರುಬಾರು...
ಬೆಳ್ತಂಗಡಿ: ಮುಷ್ಕರದ ಬಿಸಿ ಬುಧವಾರ ಬೆಳ್ತಂಗಡಿ ತಾಲೂಕಿನಾದ್ಯಂತ ಇತ್ತು.  ಚಾರ್ಮಾಡಿ, ಉಜಿರೆ, ಬೆಳ್ತಂಗಡಿ, ಗುರುವಾಯನಕರೆ,ನಾರಾವಿ, ವೇಣೂರು, ಮಡಂತ್ಯಾರು, ಗೇರುಕಟ್ಟೆ,ಪುಂಜಾಲಕಟ್ಟೆ ಪೇಟೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು.  ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸಂಚಾರವಿರದಿದ್ದರೂ ಖಾಸಗಿ ವಾಹನಗಳ ಓಡಾಟ ಜೋರಾಗಿಯೇ ಇತ್ತು. ಬುಧವಾರ ಮದುವೆ ಇತ್ಯಾದಿ ಸಮಾರಂಭಗಳೂ ಹೆಚ್ಚಿನ ಪ್ರಮಾಣದಲ್ಲಿ ಇದ್ದುದರಿಂದ ಖಾಸಗಿ ವಾಹನಗಳೇ ರಸ್ತೆಯಲ್ಲಿ ಕಾಣುತ್ತಿದ್ದವು. ಹೀಗಾಗಿ ಸಂಚಾರದ ಮಟ್ಟಿಗೆ ಬಂದ್‌ಗೆ ಸೂಕ್ತ ಬೆಂಬಲ ಸಿಗಲಿಲ್ಲ. ಬಸ್‌ಗಳು ರಸ್ತೆಗಿಳಿಯದಿದ್ದುದರಿಂದ ಮದುವೆ, ಗೃಹಪ್ರವೇಶ ಮುಂತಾದ ಕಾರ್ಯಕ್ಕೆ ಹೋಗುವವರಿಗೆ ಅಡಚಣೆ ಉಂಟಾಯಿತು.  ಬೆಳ್ತಂಗಡಿಯಿಂದ ಉಜಿರೆಗೆ ಮಧ್ಯಾಹ್ನದ ಬಳಿಕ ಕೆಲ ರಿಕ್ಷಾಗಳು ಪ್ರಯಾಣಿಕರನ್ನು ಹೇರಿಕೊಂಡು ಹೋಗುತ್ತಿರುವುದು ಕಂಡು ಬಂತು.
ಪುತ್ತೂರಿನಲ್ಲಿ ವಿರಳ ಜನಸಂಚಾರ
ಪುತ್ತೂರು: ಕಾರ್ಮಿಕರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ಬೆಲೆ ಏರಿಕೆಯ ವಿರುದ್ದ ಕಾರ್ಮಿಕ ಸಂಘಟನೆಯು ಬುಧವಾರ ಕರೆ ನೀಡಿದ್ದ ದೇಶವ್ಯಾಪಿ ಬಂದ್‌ಗೆ ಪುತ್ತೂರಿನಲ್ಲಿ ಆಂಶಿಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುತ್ತೂರಿನಲ್ಲಿ ಕೆಎಸ್‌ಆರ್ಟಿಸಿ ಮತ್ತು ಖಾಸಗಿ ಬಸ್ಸುಗಳು ಓಡಾಟವನ್ನು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದೆ. ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿತ್ತು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಬಸ್ಸುಗಳು ಓಡಾಟ ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಶಾಲಾ ಕಾಲೇಜುಗಳು ಎಂದಿನಂತೆ ಬೆಳಗ್ಗಿನ ವೇಳೆ ಆರಂಭಗೊಂಡಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಕೆಲ ಕಾಲೇಜುಗಳಿಗೆ ಬಳಿಕ ರಜೆ ಸಾರಲಾಯಿತು.
ಟೆಂಪೊ, ಜೀಪು ಸಂಚಾರ ನಿರಾತಂಕ
ಉಪ್ಪಿನಂಗಡಿ:  ಉಪ್ಪಿನಂಗಡಿ , ಕಡಬ ಪ್ರದೇಶದಲ್ಲಿ  ಸಂಚಾರ ವ್ಯವಸ್ಥೆಯ ತೊಂದರೆ ಹಾಗೂ ಬ್ಯಾಂಕಿಂಗ್ ವ್ಯವಹಾರಗಳು ನಡೆಯದೆ ನಾಗರಿಕರು ಸಮಸ್ಯೆಗೆ ತುತ್ತಾದರು.
ಟೆಂಪೊ, ಜೀಪು ಸಂಚಾರ: ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ರಸ್ತೆಗಿಳಿಯದ ಪರಿಣಾಮ ಸಾರ್ವಜನಿಕರು, ಮುಖ್ಯವಾಗಿ ವಿದ್ಯಾರ್ಥಿಗಳು ಸಕಾಲದಲ್ಲಿ ತರಗತಿ ತಲುಪಲು ಅಸಾಧ್ಯವಾಯಿತು. ಟೆಂಪೊ, ಜೀಪುಗಳ ಸೇವೆ ನಿರಾತಂಕವಾಗಿ ಲಭಿಸಿ, ಪರ್ಯಾಯ ಸಂಚಾರ ವ್ಯವಸ್ಥೆಗೆ ಜನತೆ ಒಳಗಾದರು.
ಬಸ್ ಸ್ಥಗಿತ, ವಿದ್ಯಾರ್ಥಿಗಳ ಪರದಾಟ
ಸುಳ್ಯ: 48 ತಾಸುಗಳ ಮುಷ್ಕರ ಕರೆಗೆ ಸುಳ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಸರ್ಕಾರಿ ಬಸ್ ಸಂಚಾರ ಪೂರ್ಣ ಸ್ಥಗಿತಗೊಂಡಿದ್ದು, ಸಂಜೆ ವೇಳೆಗೆ ಪುನರಾರಂಭಗೊಂಡಿತು. ವ್ಯಾನ್, ಆಟೋ ರಿಕ್ಷಾ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳು ಓಡಾಡಿದವು.  ಶಾಲಾ ಕಾಲೇಜುಗಳಿಗೆ ರಜೆ ಘೋಷಿಸದ ಕಾರಣ ವಿದ್ಯಾರ್ಥಿಗಳು ಬಸ್ ಸಂಚಾರವಿಲ್ಲದೆ ಪರದಾಡಿದರು. ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನಲೆಯಲ್ಲಿ ವಹಿವಾಟು ಸ್ಥಗಿತಗೊಂಡಿತು.
ಸುಬ್ರಹ್ಮಣ್ಯಕ್ಕೂ ತಟ್ಟಿದ ಮುಷ್ಕರ ಬಿಸಿ
ಸುಬ್ರಹ್ಮಣ್ಯ:  ಮುಷ್ಕರದ ಬಗ್ಗೆ ಮೊದಲೇ ಸುಳಿವು ಸಿಕ್ಕಿದ್ದರಿಂದ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಮಂಗಳವಾರ ರಾತ್ರಿಯೇ ದೇವರ ದರ್ಶನ ಮಾಡಿ ತಂತಮ್ಮ ಊರುಗಳಿಗೆ ವಾಪಾಸಾಗಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ನಿಲ್ದಾಣದಲ್ಲಿ ತಮ್ಮ ಊರಿಗೆ ತೆರಳಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಖಾಸಗಿ ವಾಹನ, ಆಟೋಗಳು ಎಂದಿನಂತೆ ಕಾರ್ಯಾಚರಿಸಿದವು. ಅಂಗಡಿ ಮುಂಗಟ್ಟುಗಳು ಮಾಮೂಲಿಯಂತೆ ತೆರೆದಿದ್ದವು.
ಶಾಲೆಗಳಿಗೆ ರಜೆ, ಕಚೇರಿಗಳು ಬಂದ್
ಮೂಲ್ಕಿ: ಎರಡು ದಿನಗಳ ಭಾರತ್ ಬಂದ್‌ಗೆ ಪೂರಕವಾಗಿ ಮೂಲ್ಕಿ ಪರಿಸರದಲ್ಲಿ ಬುಧವಾರ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಮೂಲ್ಕಿ, ಕಿನ್ನಿಗೋಳಿ, ಹಳೆಯಂಗಡಿ, ಕಟೀಲು ಪರಿಸರದಲ್ಲಿ ಜನಸಂಚಾರ ವಿರಳವಾಗಿದ್ದು ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಾಗಿತ್ತು.  ಬ್ಯಾಂಕ್, ಅಂಚೆ ಕಚೇರಿ, ಸರ್ಕಾರಿ ಕಚೇರಿಗಳು ಬಂದ್ ಆಗಿದ್ದು, ಶಾಲಾ ಕಾಲೇಜ್‌ಗಳು ರಜೆ ಘೋಷಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.