ದಕ್ಷಿಣ ಕನ್ನಡ

ಅಣ್ಣನಿಂದ ತಮ್ಮನ ಕೊಲೆ

Published On :

ಬಂಟ್ವಾಳ: ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಅಣ್ಣ ತಮ್ಮಂದಿರ ಮಧ್ಯೆ ಆಸ್ತಿ ವಿಚಾರದಲ್ಲಿ ನಡೆಯುತ್ತಿದ್ದ ಜಗಳ, ತಮ್ಮನ ಕೊಲೆಯೊಂದಿಗೆ ಅಂತ್ಯ ಕಂಡ ಘಟನೆ ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಾಮದಪದವಿನಲ್ಲಿ ನಡೆದಿದೆ.
ನಾರಾಯಣ ಭಟ್ (61) ಮೃತರು. ಪದ್ಮನಾಭ ಭಟ್, ಗೋಪಿ ದಂಪತಿ ಆರೋಪಿಗಳು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಾರಾಯಣ ಭಟ್ ಅವರು ಅಣ್ಣನಿಗೆ ಹಾಗೂ ಅವರ ಕುಟುಂಬಕ್ಕೆ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದ್ದು, ಶನಿವಾರ ತಡರಾತ್ರಿ ಮತ್ತೆ ಕಿರುಕುಳ ನೀಡಿದಾಗ ಅಣ್ಣ ತಡೆಯಲಾರದೆ ದೊಣ್ಣೆಯಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ವಿವರ: ನಾರಾಯಣ ಭಟ್ ಅವಿವಾಹಿತರಾಗಿದ್ದು, ಅದಕ್ಕಾಗಿ 1991ರಲ್ಲಿ ತನ್ನ ಆಸ್ತಿಯನ್ನು ಅಣ್ಣ ಪದ್ಮನಾಭ ಭಟ್ ಅವರಿಗೆ ಬರೆದು ಕೊಟ್ಟಿದ್ದರು. ಅಲ್ಲದೆ, ಇವರಿಗೆ ಮನೆಗೆ ಬಂದು ಹೋಗಬಹುದು, ಮನೆಯ ಒಂದು ಕೊಠಡಿಯನ್ನು ಇವರು ಉಪಯೋಗಿಸಬಹುದು ಎಂದು ವಿಲೇವಾರು ಮಾಡಿಕೊಡಲಾಗಿತ್ತು. ಅದರಂತೆ ಮನೆಯ ಒಂದು ಕೊಠಡಿಯಲ್ಲಿ ನಾರಾಯಣ ಭಟ್ ವಾಸ ಮಾಡುತ್ತಿದ್ದರು. ಇತ್ತೀಚೆಗೆ, ಕೆಲವು ವರ್ಷಗಳ ಹಿಂದೆ ಬರೆದು ಕೊಟ್ಟ ಆಸ್ತಿಯನ್ನು ಹಿಂದೆ ಕೊಡಬೇಕು ಎಂದು ಅಣ್ಣನಲ್ಲಿ ತಗಾದೆ ಎತ್ತುತ್ತಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು. ಅಲ್ಲದೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದರು. ಇದನ್ನು ಪ್ರಶ್ನಿಸಿ ಅಣ್ಣ ಪದ್ಮನಾಭ ಭಟ್ ನ್ಯಾಯಾಲಯದ ಮೊರೆ ಹೋಗಿ ಅದರಲ್ಲಿ ಜಯ ಸಾಧಿಸಿದ್ದರು. ಆದರೂ ಕೇಳದ ನಾರಾಯಣ ಭಟ್, ಮನೆಯ ಎಲ್ಲ ಕೋಣೆಗಳಿಗೆ ಬೀಗ ಹಾಕುವುದು, ಶೌಚಾಲಯಕ್ಕೆ ಹಾನಿ ಮಾಡುವುದು ಮುಂತಾದ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಶನಿವಾರ ಪದ್ಮನಾಭ ಭಟ್ ಅವರ ಪತ್ನಿ ಗೋಪಿ ಅಡುಗೆ ಮಾಡಲು ಅಡುಗೆ ಕೋಣೆಗೆ ಹೋದಾಗ ಕೋಣೆಗೆ ಅಡ್ಡವಾಗಿ ಕಲ್ಲು, ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆಗೆಯುತ್ತಿರುವ ವೇಳೆ ನಾರಾಯಣ ಭಟ್ ಬಂದು ಗೋಪಿ ಅವರನ್ನು ಹಿಡಿದುಕೊಂಡಿದ್ದು, ಆಗ ಆಕೆಯ ಪತಿ ಪದ್ಮನಾಭ ಭಟ್ ಹಿಂದಿನಿಂದ ಬಂದು ಸಲಾಕೆಯಿಂದ ಹೊಡೆದರು. ಇದರಿಂದ ತೀವ್ರ ರಕ್ತಸ್ರಾವವಾಗಿ ನಾರಾಯಣ ಭಟ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ತಡರಾತ್ರಿ ಪದ್ಮನಾಭ ಭಟ್ ಅವರ ಹಿರಿಯ ಸಹೋದರ ಇವರ ಮನೆಗೆ ಬಂದಾಗ ಘಟನೆಯ ಅರಿವಾಗಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸರ್ಕಲ್ ಇನ್ಸ್‌ಪೆಕ್ಟರ್ ಭಾಸ್ಕರ ರೈ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.