ಬೆಳ್ತಂಗಡಿಗೆ ಬರ ಬಂದಿಲ್ಲ
ಬೆಳ್ತಂಗಡಿ: ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದುದ್ದಕ್ಕೂ ಇರುವ ಬೆಳ್ತಂಗಡಿ ತಾಲೂಕು ಇದುವರೆಗೆ ಬರಗಾಲ ಕಂಡದ್ದು ಇಲ್ಲವೆಂದೇ ಹೇಳಬಹುದು. ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಸೋಮಾವತಿ, ನೆರಿಯಾ ಹೊಳೆ ಎಂಬ ಪ್ರಮುಖ ನದಿಗಳ ಸಹಿತ ಸಣ್ಣಪುಟ್ಟ ಹಳ್ಳ ತೊರೆಗಳು ತಾಲೂಕಿನ ಅಲ್ಲಲ್ಲಿ ಹರಿಯುತ್ತವೆ.
ಹೆಚ್ಚಾಗಿ ಡಿಸೆಂಬರ್ ಕೊನೆ ತನಕ ಇವುಗಳಲ್ಲಿ ಹರಿವು ಇರುತ್ತದೆ. ಹೀಗಾಗಿ ನೀರಿನ ಬವಣೆ ಅಲ್ಲಿ ತನಕ ಕಂಡುಬರುವುದಿಲ್ಲ. ಹೀಗಾಗಿ ಸದ್ಯದ ಚಿತ್ರಣದಂತೆ ಎಲ್ಲ ನದಿಗಳು ತನ್ನ ಹರಿವನ್ನು ನಿಲ್ಲಿಸುತ್ತಾ ಬಂದಿವೆ.
ಅಂತರ್ಜಲವೂ ಯಥೇಚ್ಛ: ತಾಲೂಕಿನಾದ್ಯಂತ ಪ್ರಮುಖ ನದಿಗಳಿಗೆ, ತೊರೆಗಳಿಗೆ ಕಿಂಡಿ ಅಣೆಕಟ್ಟುಗಳು ಇರುವುದರಿಂದ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಕಿಂಡಿ ಅಣೆಕಟ್ಟುಗಳಿಂದ ಅಡಕೆ ಬೆಳೆಗಾರರಿಗೆ ಸಾಧಾರಣವಾಗಿ ಮಾರ್ಚ್ ಮಧ್ಯಭಾಗದವರಿಗೆ ನೀರು ಸಿಗುತ್ತದೆ. ಅಂತರ್ಜಲವೂ ಹೆಚ್ಚುವುದರಿಂದ ಕುಡಿಯುವ ನೀರಿಗೆ ಫೆಬ್ರವರಿ ಕೊನೆ ತನಕ ಸಮಸ್ಯೆ ಆಗುವುದಿಲ್ಲ. ಅಡಕೆ ಮತ್ತು ಬತ್ತದ ಕೃಷಿಯೇ ತಾಲೂಕಿನಾದ್ಯಂತ ಇರುವುದರಿಂದ ಅವಕ್ಕೂ ಫೆಬ್ರವರಿ ಕೊನೆ ತನಕ ನೀರಿನ ಅಭಾವ ತಟ್ಟುವುದಿಲ್ಲ.
ಮಾರ್ಚ್ ಮಳೆ ಮಹತ್ವದ್ದು: ಹಳ್ಳಿಗಳಲ್ಲಿ ಕೊಳವೆ ಬಾವಿಗಳು ಸಾಕಷ್ಟು ಇವೆ. ಅಧಿಕಾಂಶ ಕಡೆ ಪ್ರತಿಮನೆಗೆ ಬಾವಿ ಸೌಲಭ್ಯವಿದೆ. ಅಲ್ಲದೆ ಹಲವು ಗ್ರಾಮಗಳಲ್ಲಿ ಬೃಹತ್ ನೀರಿನ ಟ್ಯಾಂಕಿಗಳೂ ಇವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮಳೆ ಸುರಿಯುವ ಕಾರಣ ನೀರಿನ ಪ್ರಖರ ಅಭಾವ ತಟ್ಟುವುದಿಲ್ಲ. ಅಕಸ್ಮಾತ್ ಮಳೆ ಬಾರದೇ ಇದ್ದರೆ ಸಮಸ್ಯೆ ಉಲ್ಬಣವಾಗುವುದು ನಿಶ್ಚಿತ.
ಬೆಳ್ತಂಗಡಿ ನಗರದವರಿಗೆ ಸನಿಹದ ಸೋಮಾವತಿ ನದಿಗೆ ಅಡ್ಡಲಾಗಿ ಪ್ರತಿವರ್ಷ ತಾತ್ಕಾಲಿಕ ಒಡ್ಡನ್ನು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದರ ಲಭ್ಯತೆ ಕೂಡ ಫೆಬ್ರುವರಿ ಕೊನೆ ತನಕ ಮಾತ್ರ.
ಧರ್ಮಸ್ಥಳ ಕ್ಷೇತ್ರಕ್ಕೆ ಅಪಾರ ನೀರು ಬೇಕಾಗುತ್ತದೆ. ಇಲ್ಲಿಯೂ ಸ್ನಾನಘಟ್ಟದ ಬಳಿ ನೇತ್ರಾವತಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದ್ದು ಭಕ್ತರಿಗೆ ನೀರಿನ ಅಭಾವ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ. ನೆರಿಯ, ಚಾರ್ಮಾಡಿ ಸನಿಹದ ಅರಣ್ಯ ಪ್ರದೇಶದಲ್ಲಿ ಮಾರ್ಚ್‌ವೇಳೆಗೆ ಮೊದಲ ಮಳೆ ಸುರಿಯುವುದರಿಂದ ಅದುವರೆಗೆ ಹರಿವು ಕಳೆದುಕೊಂಡಿರುವ ನೇತ್ರಾವತಿಗೆ ಜೀವಕಳೆ ಬಂದಿರುತ್ತದೆ. ನೀರ ಸಮಸ್ಯೆಯ ಗಂಭೀರತೆ ಬರುವುದು ಮೇ ಮುಗಿದರೂ ಮಳೆ ಬರದಿದ್ದರೆ ಮಾತ್ರ.
ತಾಲೂಕಿನಲ್ಲಿ ನದಿಮೂಲಗಳೇ ನೀರಿಗೆ ಆಧಾರ. ನದಿಗಳು ಬತ್ತಿದಲ್ಲಿ ಮಳೆಯೇ ಗತಿ. ಆದರೂ ಜಿ.ಪಂ. ಎಂಜಿನಿಯರಿಂಗ್ ಇಲಾಖೆ ನೇತ್ರಾವತಿ ಮತ್ತು ನೆರಿಯಾ ಹೊಳೆಗಳನ್ನು ಆಧಾರವಾಗಿಟ್ಟುಕೊಂಡು ಬೆಳ್ತಂಗಡಿ ತಾಲೂಕಿಗೆ ರು. 97.50 ಲಕ್ಷ ವೆಚ್ಚದಲ್ಲಿ 17 ಕಾಮಗಾರಿಗಳನ್ನು ನಿರ್ವಹಿಸುವ ಯೋಜನೆ ಇಟ್ಟುಕೊಂಡಿದೆ. ಒಟ್ಟು 9 ಗ್ರಾ.ಪಂ.ಗಳ 131 ಜನವಸತಿ ಪ್ರದೇಶಗಳನ್ನು ಒಳಗೊಂಡಂತೆ 48,110 ಜನ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

