ಇಂದಿನಿಂದ ಗುರುಸ್ಪಂದನಾ
ಮಂಗಳೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ಉತ್ತರ ವಲಯ ವತಿಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ಉತ್ತರ ವಲಯ ಸಹಯೋಗದಲ್ಲಿ ಜು.19 ಮತ್ತು 25ರಂದು ಜಾಮಿಯಾ ಪ್ರೌಢಶಾಲೆ ಚೊಕ್ಕಬೆಟ್ಟು ಸುರತ್ಕಲ್, ಸ.ಹಿ.ಪ್ರಾ.ಶಾಲೆ ಮಣ್ಣಗುಡ್ಡೆ ಮತ್ತು ಪದವಿಪೂರ್ವ ಕಾಲೇಜು ಮೂಲ್ಕಿಯಲ್ಲಿ ಗುರುಸ್ಪಂದನಾ ಕಾರ್ಯಕ್ರಮ ಜರುಗಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ಉತ್ತರ ವಲಯ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಆರೋಗ್ಯ ಉಚಿತ ತಪಾಸಣೆ
ಬೆಳ್ತಂಗಡಿ: ಮಂಗಳೂರು ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ 19ರಂದು ಬೆಳ್ತಂಗಡಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ್ ಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ವಿಶೇಷವಾಗಿ ಬಿಪಿಎಲ್ ಕಾರ್ಡ್ದಾರರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಹೃದಯ ರೋಗ, ಮೂತ್ರಪಿಂಡ ರೋಗ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು. ಉಚಿತವಾಗಿ ಚಿಕಿತ್ಸೆ ಸೌಲಭ್ಯವನ್ನೂ ಒದಗಿಸಲಾಗುತ್ತದೆ, ಸರ್ಕಾರ ಖರ್ಚು ಭರಿಸುತ್ತದೆ ಎಂದರು. ಸಾರ್ವಜನಿಕರು ಪೋಟೊ ಇರುವ ಬಿಪಿಎಲ್ ಪಡಿತರ ಚೀಟಿಯನ್ನು ಮತ್ತು ವೈದ್ಯರ ಚೀಟಿ ತಪ್ಪದೆ ತರಬೇಕು. ಶಿಬಿರವು ಬೆಳಗ್ಗೆ 9ರಿಂದ ಅಪರಾಹ್ನ 1ರ ತನಕ ನಡೆಯಲಿದೆ ಎಂದು ಉಮೇಶ್ ಗೌಡ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ದಯಾನಂದ- 9964246567, ಶಶಿಧರ್- 9844995911, ಕುಸುಮಾಕರ್- 7259003497 ಅವರನ್ನು ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ರಾಹುಲ್, ಜಗನ್ನಾಥ ಶಿರ್ಲಾಲು, ಸುಶ್ಮಾ ಇದ್ದರು.
ಖಾತೆ ತೆರೆಯಲು ಅರ್ಜಿ ಕೊರತೆ
ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಒಂದರ ಶಾಖೆಯಲ್ಲಿ ಖಾತೆ ತೆರೆಯಲು ಸಲ್ಲಿಸುವ ಅರ್ಜಿ ಫಾರಂ ಕೊರತೆ ಉಂಟಾಗಿದ್ದು, ಗ್ರಾಹಕರು ಕಿರಿಕಿರಿ ಅನುಭವಿಸುವಂತಾಗಿದೆ. ಅರ್ಜಿ ಫಾರಂ ಕೇಳಿದರೆ, ನಮ್ಮಲ್ಲಿರುವುದು ಒಂದೇ ಪ್ರತಿ. ಬೇಕಿದ್ದರೆ, ಜೆರಾಕ್ಸ್ ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಹಕರು ಕೇಂದ್ರ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಗ್ರಾಹಕರೊಬ್ಬರು ಬ್ಯಾಂಕಿನ ಕೇಂದ್ರ ಕಚೇರಿಗೆ ಪೋನಾಯಿಸಿ ಗ್ರಾಹಕರಲ್ಲಿ ಅರ್ಜಿ ಫಾರಂಗಳನ್ನು ಜೆರಾಕ್ಸ್ ಮಾಡಿಸುವ ಬಗ್ಗೆ ಬ್ಯಾಂಕ್ ನಿಯಮಾವಳಿ ಇದೆಯಾ ಎಂದು ಪ್ರಶ್ನಿಸಿದಾಗ, ಕೊರತೆಯಲ್ಲಿರುವ ಅರ್ಜಿಗಳನ್ನು ಬ್ಯಾಂಕಿನವರೇ ಜೆರಾಕ್ಸ್ ಮಾಡಿಕೊಂಡು ಬರಬೇಕೆ ವಿನಃ ಗ್ರಾಹಕರನ್ನು ಅದಕ್ಕಾಗಿ ಅಲೆದಾಅಡಿಸುವಂತಿಲ್ಲ ಎಂಬ ಉತ್ತರ ದೊರಕಿದೆ.
ನಾಳೆಯಿಂದ ಫುಟ್ಬಾಲ್ ಪಂದ್ಯಾವಳಿ
ಮಂಗಳೂರು: ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ 27 ದಿನಗಳ ಕಾಲ ನಡೆಯುವ '17ನೇ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿ' ಜು. 20 ರಂದು ನೆಹರೂ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದೆ. ಪಂದ್ಯಾವಳಿಯನ್ನು ಬೆಳಗ್ಗೆ 10ಕ್ಕೆ ಯುವಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸುವರು. ಕಾರ್ಪೊರೇಶನ್ ಬ್ಯಾಂಕಿನ ಡೆಪ್ಯುಟಿ ಜನರಲ್ ಮ್ಯಾನೇಜರ್ ಡಿ.ಎಂ. ಮಜುಂದಾರ್, ರೋಸಾರಿಯೋ ಕಾಲೇಜಿನ ಪ್ರಾಂಶುಪಾಲ ಫಾ. ಆಲ್ವಿನ್ ಸೆರಾವೋ, ಮಹಾನಗರ ಪಾಲಿಕೆ ಸದಸ್ಯರಾದ ದಿವಾಕರ್, ಅಬ್ದುಲ್ ಲತೀಫ್ ಪಾಲ್ಗೊಳ್ಳುವರು ಎಂದು ರಾಜ್ಯ ಫುಟ್ಬಾಲ್ ಸಂಸ್ಥೆ ಸದಸ್ಯ ವಿಜಯ ಸುವರ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಒಟ್ಟು 27 ದಿನಗಳ ಕಾಲ ನಡೆಯುವ ಪಂದ್ಯಾಟದಲ್ಲಿ ಪ್ರೌಢಶಾಲೆ, ಪಿಯುಸಿ, ಪದವಿ ವಿಭಾಗಗಳಿಗೆ ಆ. 15 ರಂದು ಅಂತಿಮ ಪಂದ್ಯಾಟ ನಡೆಯಲಿದೆ. ಈ ಪಂದ್ಯಾಟವು ಒಟ್ಟು 6 ವಿಭಾಗಗಳಲ್ಲಿ ನಡೆಯಲಿದೆ. ಪ್ರಾಥಮಿಕ ಶಾಲೆಯ ಬಾಲಕರು- ಬಾಲಕಿಯರು, ಪ್ರೌಢಶಾಲೆಯ ಬಾಲಕರು-ಬಾಲಕಿಯರು, ಪಿಯುಸಿ ಬಾಲಕ-ಬಾಲಕಿಯರು, ಪದವಿ ಯುವಕ-ಯುವತಿಯರು ಪಾಲ್ಗೊಳ್ಳುತ್ತಾರೆ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಂ ತಿಳಿಸಿದರು.
22 ರಂದು ಗುರುಪೂರ್ಣಿಮೆ
ಮಂಗಳೂರು: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜು. 22 ರಂದು ಎಸ್ಡಿಎಂ ಕಾಲೇಜಿನ ಸಭಾಂಗಣದಲ್ಲಿ ಸಂಜೆ 4ಕ್ಕೆ 'ಗುರುಪೂರ್ಣಿಮಾ ಮಹೋತ್ಸವ' ನಡೆಯಲಿದೆ. ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ, ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾಪೂಜೆ, ರಾಷ್ಟ್ರ ಧರ್ಮ ಮತ್ತು ಆಧ್ಯಾತ್ಮಿಕ ಸಂಶೋಧನೆಗಳ ಭವ್ಯ ಪ್ರದರ್ಶನ ಮೆರವಣಿಗೆ, ಗ್ರಂಥ ಮತ್ತು ಸಾತ್ವಿಕ ಉತ್ಪಾದನೆಗಳ ಪ್ರದರ್ಶನ, ಸ್ವರಕ್ಷಣೆಯ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಸನಾತನ ಸಂಸ್ಥೆಯ ವಿಜಯಲಕ್ಷ್ಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆಸಕ್ತರು ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 07204082649 ಸಂಪರ್ಕಿಸಬಹುದು ಎಂದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

