ದಕ್ಷಿಣ ಕನ್ನಡ

ಹಲವೆಡೆ ಗಾಳಿ, ಮಳೆ

Published On :

ಮಂಗಳೂರು/ಸುಬ್ರಹ್ಮಣ್ಯ: ಮಂಗಳೂರಿನಲ್ಲಿ ಗುರುವಾರ ಸಾಧಾರಣ ಮಳೆ ಸುರಿದಿದ್ದು, ಹಗಲಿಡೀ ಬಿಸಿಲು, ಮಳೆ ಕಾಣಿಸಿದ್ದು, ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಕೆಲಹೊತ್ತು ಗಾಳಿ ಮಳೆಯ ಅಬ್ಬರ ಕಂಡುಬಂತು.
ಪಡೀಲು ಜಂಕ್ಷನ್ ಬಳಿ ಮರ ಬಿದ್ದು ಮನೆಯೊಂದು ಹಾನಿಗೀಡಾಗಿದೆ.
ಪುತ್ತೂರಿನಲ್ಲಿ ಈ ದಿನ 29.3 ಮಿ.ಮೀ. ಅಧಿಕ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ದಿನ 4.9 ಮಿ.ಮೀ. ಮಳೆ ಸುರಿದಿದೆ. ಜನವರಿಯಿಂದ ಜುಲೈವರೆಗೆ ಜಿಲ್ಲೆಯಲ್ಲಿ ಈ ಬಾರಿ ಸರಾಸರಿ 2239.5 ಮೀ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ 1222.5 ಮಿ.ಮೀ. ಮಳೆ ಸುರಿದಿತ್ತು.
ಕಳೆದ ನಾಲ್ಕೈದು ದಿನದಿಂದ ಮಳೆ ಕಡಿಮೆಯಾದ ಪರಿಣಾಮ ಸಮುದ್ರದ ಕೊರೆತ ಕಡಿಮೆಯಾಗಿದೆ.
ಮಳೆ ವಿವರ: ಪುತ್ತೂರು- 29.3 ಮಿ.ಮೀ., ಕಡಬ- 26.4 ಮಿ.ಮೀ., ಮೂಡುಬಿದಿರೆ- 23.2 ಮಿ.ಮೀ., ಸುಳ್ಯ- 23.8 ಮಿ.ಮೀ., ಬೆಳ್ತಂಗಡಿ- 21.6 ಮಿ.ಮೀ., ಬಂಟ್ವಾಳ- 20.6 ಮಿ.ಮೀ., ಉಪ್ಪಿನಂಗಡಿ- 10.3 ಮಿ.ಮೀ., ಮಂಗಳೂರು- 9.4 ಮಿ.ಮೀ. ಮಳೆ ದಾಖಲಾಗಿದೆ.
ಮುಳುಗುವ ಭೀತಿ: ಕಳೆದ 4 ದಿನಗಳಿಂದ ಸುಬ್ರಹ್ಮಣ್ಯ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ. ಗುರುವಾರ ಬೆಳಗ್ಗಿನಿಂದ ಮಳೆ ಸ್ವಲ್ಪ ಮಟ್ಟಿಗೆ ಬಿರುಸುಗೊಂಡಿದೆ. ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಸೇತುವೆ ಮುಳುಗುವ ಸ್ಥಿತಿಯಲ್ಲಿದೆ.
ಸುಬ್ರಹ್ಮಣ್ಯ ಸುತ್ತಮುತ್ತಲ ಪರಿಸರದಲ್ಲೂ ಮಳೆಯಾಗುತ್ತಿದ್ದು, ಐನೆಕಿದು ಕೆದಿಲ ಎಂಬಲ್ಲಿ ರಸ್ತೆಗೆ ಮರ ಉರುಳಿ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ಭಾಗದಲ್ಲಿ ವಿದ್ಯುತ್ ಅಸ್ತವ್ಯಸ್ತಗೊಂಡಿದೆ.
ಉಡುಪಿ ವರದಿ: ಕಳೆದೊಂದು ವಾರದಂತೆ ಗುರುವಾರವೂ ಮಳೆಯ ಕಣ್ಣುಮುಚ್ಚಾಲೆ ಆಟ ಮುಂದುವರಿಯಿತು. ಬುಧವಾರ ರಾತ್ರಿ ಅಲ್ಲಲ್ಲಿ ಗಾಳಿ ಸಹಿತ ಮಳೆ ಸುರಿದಿದೆ. ಗುರುವಾರ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದ್ದು, ಜೊತೆಗೆ ಬಿಸಿಲಿನ ವಾತವರಣವಿತ್ತು.
ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಉಡುಪಿ ತಾಲೂಕಿನ ಪಡುಕೆರೆಯ ಪ್ರಭಾಕರ ಮೆಂಡನ್ ಅವರು ಸಿಗಡಿ ಮೀನು ಕೃಷಿ ಕೆರೆಯ ಕಟ್ಟೆ ಒಡೆದು ಸಿಗಡಿ ಮೀನುಗಳು ಕೊಚ್ಚಿ ಹೋಗಿ ರು. 75 ಸಾವಿರ ನಷ್ಟ ಉಂಟಾಗಿದೆ. ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಸಬೀರಾಬಿ ಅವರ ಮನೆಯ ಗೋಡೆ ಕುಸಿದು ರು. 1 ಲಕ್ಷ ಮತ್ತು ಸೇಡಿಮನೆ ಗ್ರಾಮದ ಗಣಪ ಅವರ ಮನೆಯ ಮೇಲ್ಛಾವಣಿ ಕುಸಿದು ರು. 20 ಸಾವಿರ ನಷ್ಟ ಸಂಭವಿಸಿದೆ.
ಜಿಲ್ಲೆಯ ಮಳೆ ವಿವರ: ಜಿಲ್ಲೆಯಲ್ಲಿ ಗುರುವಾರ ಮುಂಜಾನೆವರೆಗೂ 24 ಗಂಟೆಗಳಲ್ಲಿ ಸರಾಸರಿ 22.93 ಮಿ.ಮೀ. ಮಳೆ ದಾಖಲಾಗಿದೆ. ಅದರಲ್ಲಿ ಉಡುಪಿ ತಾಲೂಕಿನಲ್ಲಿ 5 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 30.20 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 33.6 ಮಿ.ಮೀ. ಮಳೆ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.