ಪೈಪ್ ಕಳವು ಯತ್ನ ವಿಫಲ
ಬೆಳ್ತಂಗಡಿ: ಬೆಳ್ತಂಗಡಿ ಗ್ರಾ.ಪಂ. ಅಳವಡಿಸಿದ್ದ ನೀರಿನ ಪೈಪುಗಳನ್ನು ಕಿತ್ತು ಸಾಗಿಸಲು ಯತ್ನಿಸುತ್ತಿದ್ದ ಸ್ಥಳೀಯ ಯುವಕರಿಬ್ಬರನ್ನು ಪಂಚಾಯಿತಿ ಸದಸ್ಯರ ಹಾಗೂ ಸಾರ್ವಜನಿಕರ ಸಹಾಯದಿಂದ ಹಿಡಿದ ಘಟನೆ ಮಂಗಳವಾರ ಕೊಯ್ಯೂರು ಗ್ರಾಮದಲ್ಲಿ ನಡೆದಿದೆ. ಕೊಯ್ಯೂರು ಗ್ರಾ.ಪಂ. ವ್ಯಾಪ್ತಿಯ ಉಣ್ಣಾಲು- ಬರಾಯದಡ್ಡ ಪರಿಸರದಲ್ಲಿ ಸಾರ್ವಜನಿಕ ಕುಡಿಯುವ ನೀರು ಸರಬರಾಜಿಗಾಗಿ ಗ್ರಾ.ಪಂ. ಅಳವಡಿಸಿದ್ದ ಪೈಪ್ಲೈನ್ನ ಪೈಪ್ಗಳನ್ನು ಸ್ಥಳೀಯ ಯುವಕರಿಬ್ಬರು ತುಂಡರಿಸಿ ಅಪಹರಿಸುತ್ತಿದ್ದಾಗ ಗ್ರಾ.ಪಂ. ಸದಸ್ಯರು ಗಮನಿಸಿದ್ದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಯುವಕರಿಬ್ಬರು ಗ್ರಾ.ಪಂ. ಆಡಳಿತ ನೀರು ಸರಬರಾಜಿಗೆ ಅಳವಡಿಸಲಾಗಿದ್ದ ಪೈಪ್ಗಳನ್ನು ಅಗೆದು 2.5 ಅಡಿಯಷ್ಟು ಉದ್ದಕ್ಕೆ ಅಂದರೆ ಗೋಣಿ ಚೀಲಕ್ಕೆ ತುಂಬಿಸಲು ಅನುಕೂಲವಾಗುವಂತೆ ಕತ್ತರಿಸಿ 2 ಗೋಣಿ ಚೀಲಗಳಲ್ಲಿ ತುಂಬಿಸುತ್ತಿದ್ದರು. ಹೆತ್ತವರು ಆಕ್ಷೇಪಿಸಿದ್ದರೂ ಯುವಕರು ಕೆಟ್ಟು ಹೋದ ಪೈಪ್ ಎಂದು ಸಮಜಾಯಿಷಿ ನೀಡಿ ಪೈಪ್ ಅಗೆಯುತ್ತಿದ್ದರು. ಇದನ್ನು ನೋಡಿದ ಗ್ರಾಪಂ ಸದಸ್ಯ ಗ್ರಾ.ಪಂ.ಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪಿಡಿಒ ಹಾಗೂ ಗ್ರಾಮಸ್ಥರು ಯುವಕರನ್ನು ಹಿಡಿದು ಪೈಪ್ಗಳನ್ನು ವಶಕ್ಕೆ ತೆಗೆದುಕೊಂಡರು. ಯುವಕರನ್ನು ಗ್ರಾಪಂ ಕಚೇರಿಗೆ ಕರೆತಂದು ಅಧ್ಯಕ್ಷ ದಾಮೋದರ ಗೌಡ, ಉಪಾಧ್ಯಕ್ಷ ಯಶವಂತ ಗೌಡ ಅವರ ಸಮ್ಮುಖದಲ್ಲಿ ವಿಚಾರಿಸಲಾಯಿತು. ಯುವಕರು ತಮ್ಮ ತಪ್ಪು ಒಪ್ಪಿಕೊಂಡಿದ್ದು, ಗ್ರಾ.ಪಂ.ಗೆ ಬಂದ ಇವರ ಹೆತ್ತವರು ಗ್ರಾ.ಪಂ. ಸೂಚನೆಯಂತೆ ತಮ್ಮ ಮಕ್ಕಳು ಮಾಡಿದ ಕೃತ್ಯಕ್ಕೆ ತಗುಲುವ ನಷ್ಟವನ್ನು ಭರಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಯುವಕರಿಂದ ಮುಚ್ಚಳಿಕೆ ಪಡೆದು ಪೈಪ್ ನಾಶಗೊಳಿಸಿದ ಬಾಬ್ತು 2,500ನ್ನು ವಸೂಲಿ ಮಾಡಿಕೊಂಡು ಪ್ರಕರಣ ಇತ್ಯರ್ಥಗೊಳಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

