ದಕ್ಷಿಣ ಕನ್ನಡ

'ಹಾಲಿನ ಪ್ರೋತ್ಸಾಹಧನ ಬಿಡುಗಡೆ'

Published On :

ಬೆಳ್ತಂಗಡಿ: ಫೆಬ್ರವರಿಯಿಂದ ಮೂರು ತಿಂಗಳ ರು. 2 ಹಾಲಿನ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಕೆಲವೇ ದಿನಗಳಲ್ಲಿ ಹಾಲು ಒಕ್ಕೂಟಗಳ ಕೈ ಸೇರಲಿದೆ ಎಂದು ದ.ಕ. ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.
ಇಲ್ಲಿನ ಡಿಸಿಸಿ ಬ್ಯಾಂಕ್‌ನ ಉತ್ಕೃಷ್ಟ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕಿನ ಹಾಲೂ ಉತ್ಪಾದಕರ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   
ಪ್ರಕೃತ ಹಾಲು ಉತ್ಪಾದನೆ ಹೆಚ್ಚಾಗಿದ್ದು ಮಾರುಕಟ್ಟೆ ಕುಸಿತವಾಗಿದೆ. ನೆರೆಯ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳಕ್ಕೆ ಕರ್ನಾಟಕದ ಹಾಲು ಸರಬರಾಜು ಆಗುತ್ತಿದೆ. ಕೆಎಂಎಫ್ ಮೂಲ ಸೌಲಭ್ಯಗಳ ಅನುಷ್ಠಾನಕ್ಕಾಗಿ ಸರ್ಕಾರದಿಂದ ರು. 1100 ಕೋಟಿ ಬೇಡಿಕೆ ಇಟ್ಟಿದೆ. ಈ ಪೈಕಿ ದ.ಕ. ಒಕ್ಕೂಟ ರು. 25 ಕೋಟಿ ವೆಚ್ಚದಲ್ಲಿ ಉತ್ಪಾದನಾ ಘಟಕ ಮಾಡಲಾಗುತ್ತಿದೆ ಎಂದರು.
ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಲು ಉತ್ಪಾದಕ ಸದಸ್ಯ ಮಕ್ಕಳಿಗೆ ಸಹಾಯಧನ ನೀಡಲಾಯಿತು. ನಿಡ್ಲೆಯ ರಕ್ಷಿತಾ, ಮುಂಡಾಜೆಯ ಅನುಷಾ ಮಚ್ಚಿಮಲೆ, ಗೇರುಕಟ್ಟೆಯ ವಿನ್ಯಾಸ ಜಿ. ವಿ., ನಿಡ್ಲೆಯ ಪ್ರಾರ್ಥನಾ ಅವರಿಗೆ ನಗದು ಪುರಸ್ಕಾರ ನೀಡಲಾಯಿತು.
ಡೈರಿ ರೈತರ ಕಲ್ಯಾಣ ಟ್ರಸ್ಟ್ ವತಿಯಿಂದ, ಕ್ಯಾನ್ಸರ್‌ನಿಂದ ಮೃತರಾದ ಕೊಯ್ಯೂರಿನ ವೀರಪ್ಪ ಗೌಡ ಮನೆಯವರಿಗೆ, ಮೃತರಾದ ಪಡಂಗಡಿಯ ನಾರಾಯಣ ಪೂಜಾರಿ ಅವರ ಮನೆಯವರಿಗೆ, ತಣ್ಣೀರುಪಂತ ಸೊಸೈಟಿ ವ್ಯಾಪ್ತಿಯ ಇಳಂತಿಲದ ನೇಜಿಕಾರಿನ ಸುರೇಶ್ ಗೌಡ ಅವರ ಹಸು ಮರಣ ಹೊಂದಿದ ಬಾಬ್ತು, ಗುಂಡೂರಿ ಉಗ್ಗಪ್ಪ ಪೂಜಾರಿ ಅವರು ಹಾಲು ತರುವಾಗ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸಾಂತ್ವನ ಧನ ನೀಡಲಾಯಿತು.
ಹಾಲು ಒಕ್ಕೂಟಗಳ ಕಟ್ಟಡಗಳಿಗೆ ನೀಡುವ ರು. 2 ಲಕ್ಷಗಳ ಅನುದಾನದ ಮೊದಲ ಕಂತು ರು. 75 ಸಾವಿರಗಳನ್ನು ಕಾಶಿಪಟ್ಣ ಹಾ.ಉ. ಸಂಘ ಹಾಗೂ ಮೇಲಂತಬೆಟ್ಟು ಹಾ.ಉ. ಸಂಘಗಳಿಗೆ ನೀಡಲಾಯಿತು.
ನಿರ್ದೇಶಕರಾದ ಬಿ. ನಿರಂಜನ, ಪದ್ಮನಾಭ ಶೆಟ್ಟಿ ಅರ್ಕಜೆ, ವೀಣಾ ರೈ, ವ್ಯವಸ್ಥಾಪಕ ನಿರ್ದೇಶಕ ಜಯರಾಮ ರೈ, ವ್ಯವಸ್ಥಾಪಕ ಜಿ. ವಿ. ಹೆಗ್ಡೆ, ಉಪವ್ಯವಸ್ಥಾಪಕ ಡಿ. ಎಸ್. ಹೆಗ್ಡೆ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.