ರಾಜಾರೋಷವಾಗಿ ಗೋವು ಅಪಹರಣ
ಉಪ್ಪಿನಂಗಡಿ: ಭಯ ಮೂಡಿಸಿ, ದನಕರುಗಳನ್ನು ಅಪಹರಿಸಿದ ಘಟನೆ ಮಂಗಳವಾರ ರಾತ್ರಿ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ನಡೆದಿದೆ.
ತಡ ರಾತ್ರಿ 1.30ರ ಸುಮಾರಿಗೆ ಏಕಾಏಕಿ ದನಕರುಗಳ ಆಕ್ರಂದನ ಕೇಳಿ ಬಂತು. ಏನಾಯಿತೆಂದು ತಿಳಿಯಲು ದೇವಾಲಯದ ಹೊರ ಪೌಳಿಯ ಬಾಗಿಲು ತೆಗೆದು ಹೊರಬರುವಷ್ಟರಲ್ಲಿ ತಲುವಾರು ಝಳಪಳಿಸುತ್ತಾ ಬಂದ ದುಷ್ಕರ್ಮಿಯೊಬ್ಬ ಹೊರಗೆ ಬಂದರೆ ತಲೆ ಕಡಿದುಹಾಕುವೆನೆಂದು ಬೆದರಿಸಿದ. ಸುಮಾರು ಏಳೆಂಟು ಜನರಿದ್ದ ಈ ತಂಡ ಆಯುಧಧಾರಿಗಳಾಗಿದ್ದು, ದೇವಸ್ಥಾನದ ಬಳಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗೋವುಗಳನ್ನು ಅಮಾನುಷವಾಗಿ ವಾಹನದೊಳಕ್ಕೆ ಎಸೆದು ಸಾಗಿಸುತ್ತಿದ್ದರು ಎಂದು ದೇವಾಲಯದ ಕಾವಲು ಸಿಬ್ಬಂದಿ ತಿಳಿಸಿದ್ದಾರೆ.
ಇತ್ತ ಗೋ ಹಂತಕರಿಂದ ತಪ್ಪಿಸಿಕೊಂಡಿದ್ದ ದನವೊಂದು ಜೀವ ರಕ್ಷಣೆಗಾಗಿ ಮನೆಯೊಂದರ ಬಳಿ ಓಡಿ ತಪ್ಪಿಸಿಕೊಂಡಿತ್ತಾದರೂ, ಬೆನ್ನಟ್ಟಿಕೊಂಡು ಬಂದ ಗೋ ಹಂತಕರು ದನದ ಬಾಲ ಹಿಡಿದು ಎಳೆದೊಯ್ಯುತ್ತಿದ್ದಾಗ ದನದ ಚೀರಾಟಕ್ಕೆ ಎಚ್ಚರಗೊಂಡ ಮನೆ ಮಂದಿ, ಸಹಾಯಕ್ಕಾಗಿ ಬೊಬ್ಬೆ ಹಾಕಿದರು. ಯಾವ ಮನೆಗಳಿಂದ ಬೊಬ್ಬೆ ಕೇಳಿ ಬಂತೋ ಅಂತಹ ಮನೆಗಳಿಗೆ ಕಲ್ಲೆಸೆದು, ಜೀವ ಬೆದರಿಕೆಯೊಡ್ಡಿದ ಗುಂಪು, ವಠಾರದಲ್ಲಿದ್ದ ದನ ಕರುಗಳನ್ನೆಲ್ಲಾ ವಾಹನದಲ್ಲಿ ತುಂಬಿ ರಾಜಾರೋಷವಾಗಿ ಸಾಗಿಸಿತ್ತು.
ಸಾಲದೆಂಬಂತೆ ರಾತ್ರಿ 2.30 ರ ಸುಮಾರಿಗೆ ಮತ್ತೆ ದೌಡಾಯಿಸಿದ ಗುಂಪು ಮನೆ ಬಾಗಿಲು ಬಡಿದು ಅಸಭ್ಯ ಮಾತುಗಳಿಂದ ಬೆದರಿಕೆಯೊಡ್ಡಿ ಹಿಂತಿರುಗಿದೆ ಎಂದು ತಿಳಿದು ಬಂದಿದೆ.
ಮೂರು ವಾಹನಗಳಲ್ಲಿ ಬಂದಿರುವ ಗೋ ಕಳ್ಳರು ಒಂದು ವಾಹನವನ್ನು ಮಾತ್ರ ದೇವಾಲಯದ ವಠಾರದೊಳಕ್ಕೆ ತಂದಿದ್ದು, ಇನ್ನೆರಡನ್ನು ರಸ್ತೆಯಲ್ಲೇ ನಿಲ್ಲಿಸಿ ಬಂದಿದ್ದರೆನ್ನಲಾಗಿದೆ.
ಸಿನಿಮಾ ಶೈಲಿಯಲ್ಲಿ ಜನ ವಸತಿ ಇರುವ, ಕಾವಲುಗಾರನೂ ಇರುವ ದೇವಾಲಯದ ವಠಾರದಿಂದ ದನಕರುಗಳನ್ನು ಕದಿಯಲು ಮುಂದಾದ ಕಟುಕರ ದನ ಕದಿಯುವ ತಂತ್ರ ಜನತೆಯನ್ನು ಬೆಚ್ಚಿ ಬೀಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

