ದಕ್ಷಿಣ ಕನ್ನಡ

ಮನಪಾ ಅಧಿಕಾರ ಮರಳಿ ಕೈವಶ

Published On :

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ 2ನೇ ಬಾರಿ ಅಧಿಕಾರಕ್ಕೇರುವ ಬಿಜೆಪಿ ಕನಸನ್ನು ನುಚ್ಚುನೂರು ಮಾಡಿರುವ ಕಾಂಗ್ರೆಸ್ ಮರಳಿ ಅಧಿಕಾರ ಪಡೆದಿದೆ.
 ಸೋಮವಾರ ನಗರದ ರೊಸಾರಿಯೊ ಶಾಲೆಯಲ್ಲಿ ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್-35, ಬಿಜೆಪಿ-20, ಜೆಡಿಎಸ್-2, ಸಿಪಿಐಎಂ, ಪಕ್ಷೇತರ ಹಾಗೂ ಎಸ್‌ಡಿಪಿಐ ತಲಾ ಒಂದು ಸ್ಥಾನ ಗೆದ್ದುಕೊಂಡಿದೆ. ಕೋಟಿಗಟ್ಟಲೆ ಹಣ ಸುರಿದು ಅಭಿವೃದ್ಧಿ ಕಾಮಗಾರಿ ನಡೆಸಿದರೂ ಬಿಜೆಪಿಗೆ ಅಧಿಕಾರ ಗದ್ದುಗೆ ಹತ್ತಿರ ಬರಲೂ ಸಾಧ್ಯವಾಗಿಲ್ಲ.
 2007ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-35, ಕಾಂಗ್ರೆಸ್ 20 ಸ್ಥಾನ ಪಡೆದಿತ್ತು. ಅದೇ ಫಲಿತಾಂಶ ಈ ಬಾರಿ ವ್ಯತಿರಿಕ್ತವಾಗಿ ಬಂದಿದೆ. ಉಳಿದಂತೆ ಜೆಡಿಎಸ್ ಒಂದು ಸ್ಥಾನ ವೃದ್ಧಿಸಿದೆ. ಸಿಪಿಐಎಂ, ಪಕ್ಷೇತರ ತಲಾ ಒಂದು ಸ್ಥಾನ ಉಳಿಸಿದ್ದರೆ, ಎಸ್‌ಡಿಪಿಐ ಮೊದಲ ಪ್ರವೇಶ ಪಡೆದಿದೆ.
ಪ್ರಮುಖರ ಬಂಡಾಯ, ಸೋಲು, ಗೆಲವು: ಸುರತ್ಕಲ್ ಪಶ್ಚಿಮ ವಾರ್ಡ್ ಬಿಜೆಪಿ ಬಂಡಾಯ ಅಭ್ಯರ್ಥಿ ರೇವತಿ ಪುತ್ರನ್ ಬಿಜೆಪಿ ಎದುರು ಗೆದ್ದಿದ್ದಾರೆ. ಆದರೆ ಬೆಂಗ್ರೆಯಲ್ಲಿ ಬಿಜೆಪಿ ಬಂಡಾಯವಿದ್ದರೂ ಬಿಜೆಪಿ ಅಭ್ಯರ್ಥಿ ಮೀರಾ ಕರ್ಕೇರ ಜಯಿಸಿದ್ದಾರೆ. ಕಾಟಿಪಳ್ಳ ಉತ್ತರದಲ್ಲಿ ಮಾಜಿ ಮೇಯರ್ ಗುಲ್ಜಾರ್‌ಬಾನು, ಪಂಜಿಮೊಗರಲ್ಲಿ ಮಾಜಿ ಸದಸ್ಯೆ ಬಿಜೆಪಿಯ ಶಾಂತ ಸೋತಿದ್ದಾರೆ. ಪದವು ಪಶ್ಚಿಮದಲ್ಲಿ ಉಪಮೇಯರ್ ಆಗಿದ್ದ ಬಿಜೆಪಿಯ ಶಕೀಲ ಕಾವ, ಪದವು ಸೆಂಟ್ರಲ್‌ನಲ್ಲಿ ಕೆಜೆಪಿಯ ಮರಿಯಮ್ಮ ಥಾಮಸ್, ಮರೋಳಿಯಲ್ಲಿ ಕಾಂಗ್ರೆಸ್ ಬಂಡಾಯ ಜೇಮ್ಸ್ ಡಿಸೋಜ, ಕೋರ್ಟ್ ವಾರ್ಡ್‌ನಲ್ಲಿ ಬಿಜೆಪಿಯ ರಂಗನಾಥ ಕಿಣಿ, ಕಂಕನಾಡಿಯಲ್ಲಿ ಬಿಜೆಪಿಯ ಭಾಸ್ಕರಚಂದ್ರ ಶೆಟ್ಟಿ, ಅಳಪೆಯಲ್ಲಿ ಮೋಹನ ಪಡೀಲ್, ಬಜಾಲ್‌ನಲ್ಲಿ ಸಿಪಿಐಎಂ ಸದಸ್ಯೆಯಾಗಿದ್ದ ಜಯಂತಿ ಶೆಟ್ಟಿ ಸೋತ ಪ್ರಮುಖರು.
 ಕಾಂಗ್ರೆಸ್ ಕಾನೂನು ವಿಭಾಗ ಅಧ್ಯಕ್ಷ ಎ.ಸಿ.ವಿನಯರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ ಬಿಜೆಪಿ ಮಣಿಸಿ ಪಾಲಿಕೆಗೆ ಕಾಲಿಟ್ಟಿದ್ದಾರೆ. ಪದವು ಪೂರ್ವದ ಭಾಸ್ಕರ ಮೈಲಿ 2053 ಗರಿಷ್ಠ ಮತ ಪಡೆದರೆ, ಕುದ್ರೋಳಿಯ ಅಬ್ಜುಲ್ ಅಜೀಜ್ ಮತ್ತು ಬಂಗ್ರಕೂಳೂರಿನ ಹರೀಶ್ ತಲಾ 10 ಕನಿಷ್ಠ ಮತ ಪಡೆದವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.