ಮಾಜಿ ಶಾಸಕ, ದುರಂತ ಜನನಾಯಕ
ದುರ್ಗಾಕುಮಾರ್ ನಾಯರ್ಕೆರೆ
ಸುಳ್ಯ: ಇದು ಸುಳ್ಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಾಕಿಲ ಹುಕ್ರಪ್ಪನವರ ರಾಜಕೀಯ ಕಥನ. ದುರಂತ ಕಥನ ಎಂದು ಹೇಳಬಹುದು.
ರಾಜಕೀಯ ಮತ್ತು ಅವರ ವೈಯಕ್ತಕ ಬದುಕಿನ ಅನೇಕ ಸಂಗತಿಗಳು ರಾಜಕಾರಣದ ಮಟ್ಟಿಗೆ ಇಂದಿನ ಸಂದರ್ಭದಲ್ಲಿ ದಾಖಲೆಗಳೇ ಎನ್ನಬಹುದು. ವಿಪರ್ಯಾಸವೆಂದರೆ ಯಾವ ದಾಖಲೆಗಳೂ ಅವರ ಬದುಕನ್ನು ಎತ್ತರಿಸಲೇ ಇಲ್ಲ.
ಹೀಗಾಗಿ ಬಾಕಿಲ ಹುಕ್ರಪ್ಪ ಎಂಬ ಮಾಜಿ ಜನ ನಾಯಕ, ರಾಜಕೀಯ ಕ್ಷೇತ್ರದ ದುರಂತ ನಾಯಕನೂ ಹೌದು.
ಮೊದಲ ಪ್ರಯತ್ನದಲ್ಲೇ ಶಾಸಕ: 1983ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಸ್ಪರ್ಧಿಸಿದ ಬಾಕಿಲ ಹುಕ್ರಪ್ಪ ಭಾರೀ ಅಂತರದ ವಿಜಯ ಸಾಧಿಸಿದರು. 21,975 ಮತಗಳು ಅವರಿಗೆ ದೊರೆತಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎನ್. ಶೀನಾರವರಿಗೆ 15426 ಮತಗಳು ದೊರೆತಿತ್ತು. ಹಾಗೆ ವಿಜಯ ಪತಾಕೆ ಹಾರಿಸಿ ಸುಳ್ಯ ಶಾಸಕರಾದ ಬಾಕಿಲ ಹುಕ್ರಪ್ಪ ಎರಡು ವರ್ಷಗಳ ಕಾಲ ಶಾಸನ ಸಭೆಯಲ್ಲಿ ಸುಳ್ಯವನ್ನು ಪ್ರತಿನಿಧಿಸಿದ್ದರು. ಆಗ ನಡೆದ ಚೀನಾ ಒಲಿಂಪಿಕ್ಸ್ಗೂ ಹೋಗಿ ಬಂದರು. ಕ್ಷೇತ್ರದಲ್ಲೂ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದರು.
ಪಕ್ಷಾಂತರ ಪರ್ವ: ಆದರೂ ಪಕ್ಷವನ್ನು ಓವರ್ಟೇಕ್ ಮಾಡುತ್ತಿದ್ದಾರೆ ಎಂದು ಅನಿಸಿದ್ದೇ ತಡ, 1985ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಅಲ್ಲಿಂದ ಬಾಕಿಲ ಹುಕ್ರಪ್ಪರ ಪಕ್ಷಾಂತರ ಪರ್ವ ಆರಂಭಗೊಂಡಿತು. 1985ರ ಚುನಾವಣೆಯಲ್ಲಿ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲುಂಡರು. ಆಗ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ 25542 ಮತ ಪಡೆದು ವಿಜಯಿಯಾಗಿದ್ದರೆ, ಬಾಕಿಲ ಹುಕ್ರಪ್ಪ 24749 ಮತ ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ ಅಗ್ರಹಾರ ದುಗ್ಗಪ್ಪ 11391 ಮತ ಪಡೆದರು.
1989ರ ಚುನಾವಣೆಯಲ್ಲಿ ಹುಕ್ರಪ್ಪರು ಜನತಾ ದಳ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರು. ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೂ 22,836 ಮತ ಪಡೆದಿದ್ದರು. ಆ ಚುನಾವಣೆಯಲ್ಲಿ 33560 ಮತ ಪಡೆದ ಕೆ. ಕುಶಲ ಪುನರಾಯ್ಕೆಗೊಂಡಿದ್ದರೆ, ಪ್ರಥಮವಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್. ಅಂಗಾರ 27720 ಮತ ಪಡೆದಿದ್ದರು.
ಬಂಗಾರಪ್ಪ ಸಂಗ: 1994ರ ಚುನಾವಣೆಯ ವೇಳೆಗೆ ಮತ್ತೆ ಪಕ್ಷ ಬದಲಿಸಿದ ಬಾಕಿಲ ಹುಕ್ರಪ್ಪ ಎಸ್. ಬಂಗಾರಪ್ಪ ನೇತೃತ್ವದ ಕೆ.ಸಿ.ಪಿ. ಸೇರಿ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಎಸ್. ಅಂಗಾರ ಕುಶಲರನ್ನು ಸೋಲಿಸಿ ಪ್ರಥಮವಾಗಿ ಸುಳ್ಯದ ಶಾಸಕರಾದರು. ಬಾಕಿಲ ಹುಕ್ರಪ್ಪರಿಗೆ ದೊರೆತದ್ದು 2510 ಮತಗಳು.
ಕೆಸಿಪಿಯಿಂದ ಬಿಜೆಪಿಗೆ, ಅಲ್ಲಿಂದ ಕಾಂಗ್ರೆಸ್ಗೆ, ಮತ್ತೆ ಜೆಡಿಎಸ್ಗೆ... ಹೀಗೆ ವಿವಿಧ ಚುನಾವಣೆಗಳ ಸಂದರ್ಭಗಳಲ್ಲೆಲ್ಲಾ ಪಕ್ಷ ಬದಲಿಸುತ್ತಲೇ ಹೋದರು. ಕಳೆದ ಅಕ್ಟೋಬರ್ನಿಂದ ಮತ್ತೆ ಬಿಜೆಪಿ ತೆಕ್ಕೆಯಲ್ಲಿದ್ದಾರೆ.
ಮೊದಲು ಶಾಸಕ, ನಂತರ ಪಂಚಾಯ್ತಿ ಸದಸ್ಯ: ಈ ಮಧ್ಯೆ ಗುತ್ತಿಗಾರು ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ವಿಜೇತರಾಗಿ ಗ್ರಾ.ಪಂ. ಸದಸ್ಯರಾಗಿದ್ದರಲ್ಲದೆ, ಎರಡೂವರೆ ವರ್ಷ ಅಧ್ಯಕ್ಷರೂ ಆಗಿದ್ದರು.
ಕಾರ್ಮಿಕನಾದ ಮಾಜಿ ಶಾಸಕ: ಹಾಗೆ ಒಂದೊಮ್ಮೆ ಕರ್ನಾಟಕದ ಶಾಸನ ಸಭೆಯಲ್ಲಿ ಕುಳಿತಿದ್ದ ಅದೇ ಬಾಕಿಲ ಹುಕ್ರಪ್ಪರು ದಶಕದ ಹಿಂದಿನಿಂದ ಬೇರೆಯವರ ರಬ್ಬರ್ ತೋಟದಲ್ಲಿ ಕಾರ್ಮಿಕರಾಗಿಯೂ ದುಡಿದಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ಚಲಾವಣೆಯಲ್ಲಿಲ್ಲದ ನಾಣ್ಯವಾಗಿದ್ದ ಬಾಕಿಲ ಹುಕ್ರಪ್ಪರು ವೈಯಕ್ತಿಕ ಬದುಕಲ್ಲೂ ಸಂಕಷ್ಟದ ಸರಮಾಲೆಯನ್ನೇ ಹೊತ್ತಿದ್ದರು.
ಗುತ್ತಿಗಾರು ಸಮೀಪದ ಮೆಟ್ಟಿನಡ್ಕದಲ್ಲಿ ವಾಸವಾಗಿದ್ದ ಅವರಿಗೆ ಆದಾಯ ಎಂದಿದ್ದುದು ಸರ್ಕಾರದಿಂದ ಬರುತ್ತಿದ್ದ ಅಲ್ಪ ಮೊತ್ತದ ಪಿಂಚಣಿ ಹಣ ಮಾತ್ರ. ಹೀಗಾಗಿ ಮನೆಯವರ ತುತ್ತಿನ ಚೀಲ ತುಂಬಿಸಲು ಕಾರ್ಮಿಕರಾಗಿ ದುಡಿಯುವುದು ಅನಿವಾರ್ಯವೇ ಆಗಿತ್ತು.
ಕಾಲದ ವ್ಯಂಗ್ಯ: ಕೆಲವು ವರ್ಷಗಳ ಹಿಂದೆ ಅಸೌಖ್ಯ ಬಾಧಿಸಿ ಸುಳ್ಯದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಬಾಕಿಲ ಹುಕ್ರಪ್ಪರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಹಣ ಹೊಂದಿಕೆಯಾಗದ ಸಂದರ್ಭ ಗುತ್ತಿಗಾರು ಪರಿಸರದ ನಾಯಕರು ಸಹಾಯ ಹಸ್ತ ಚಾಚಿದ್ದರು.
ಒಂದು ಬಾರಿ ಶಾಸಕರಾಗುತ್ತಲೇ ತನಗಾಗಿ, ತಮ್ಮವರಿಗಾಗಿ ಎಲ್ಲವನ್ನೂ ಮಾಡಿಕೊಂಡು ಮೆರೆಯುತ್ತಿರುವ ಜನಪ್ರತಿನಿಧಿಗಳಿರುವ ಇಂದಿನ ಕಾಲದಲ್ಲಿ ಬಾಕಿಲ ಹುಕ್ರಪ್ಪ ಎಂಬ ರಾಜಕಾರಣಿ ಇನ್ನೂ ದಯನೀಯ ಬದುಕು ಸಾಗಿಸುತ್ತಿದ್ದಾರೆಂಬುದು ಕಾಲದ ವ್ಯಂಗ್ಯ, ರಾಜಕಾರಣದ ವ್ಯಂಗ್ಯವೂ ಇರಬಹುದೇನೋ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

