ದಕ್ಷಿಣ ಕನ್ನಡ

ಮತದಾನ ಅವಧಿ 1 ಗಂಟೆ ಹೆಚ್ಚಳ

Published On :

ಮಂಗಳೂರು: ಭಾರತದ ಚುನಾವಣಾ ಆಯೋಗ ಮೇ 5ರಂದು ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆ ವೇಳೆಯನ್ನು ಒಂದು ಗಂಟೆ ಕಾಲ ಹೆಚ್ಚುವರಿಯಾಗಿ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಆದೇಶದಂತೆ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ಅವಧಿ ಇರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.
163 ಅತೀ ಸೂಕ್ಷ್ಮ ಮತಗಟ್ಟೆ: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 88 ಅಕ್ಸಿಲರಿ ಮತಗಟ್ಟೆ ಸೇರಿದಂತೆ ಒಟ್ಟು 1715 ಮತಗಟ್ಟೆ ಇರುತ್ತದೆ. ಇವುಗಳಲ್ಲಿ 325 ಸೂಕ್ಷ್ಮ ಮತಗಟ್ಟೆ, 163 ಅತೀ ಸೂಕ್ಷ್ಮ ಮತಗಟ್ಟೆ ಹಾಗೂ 61 ನಕ್ಸಲ್ ಬಾಧಿತ ಪ್ರದೇಶದಲ್ಲಿ ಮತಗಟ್ಟೆ ಇದೆ. 1166 ಸಾಮಾನ್ಯ ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳಲ್ಲಿ ಮುಕ್ತ ಮತ್ತು ನಿರ್ಭೀತ ಮತದಾನಕ್ಕೆ ಸರ್ವ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ನಗರದಲ್ಲಿ ಅತೀ ಹೆಚ್ಚು ಎಂದರೆ 53 ಸೂಕ್ಷ್ಮ ಮತಗಟ್ಟೆ ಮತ್ತು 38 ಅತೀ ಸೂಕ್ಷ್ಮ ಮತಗಟ್ಟೆ ಇದೆ. ಅತೀ ಕಡಿಮೆ ಎಂದರೆ 28 ಸೂಕ್ಷ್ಮ ಮತ್ತು 7 ಅತೀ ಸೂಕ್ಷ್ಮ ಮತಗಟ್ಟೆ ಮೂಡುಬಿದಿರೆ ಕ್ಷೇತ್ರದಲ್ಲಿದೆ.
9261 ಮತಗಟ್ಟೆ ಸಿಬ್ಬಂದಿ: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 1715 ಮತಗಟ್ಟೆಗೆ 9261 ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ 4 ಮಂದಿ ಅಧಿಕಾರಿ/ ಸಿಬ್ಬಂದಿಗಳು ಹಾಗೂ ಒಬ್ಬ ಡಿ ದರ್ಜೆ ನೌಕರರನ್ನು ನಿಯೋಜಿಸಲಾಗಿದೆ. ಶೇ.10 ಮೀಸಲು ಸಿಬ್ಬಂದಿ ಒಟ್ಟು 686 ಮಂದಿ ಇದ್ದಾರೆ.
ಕಳೆದ ಬಾರಿ 1627 ಮತಗಟ್ಟೆಗಳಿದ್ದು, ಈ ಬಾರಿ ಹೆಚ್ಚುವರಿಯಾಗಿ 88 ಮತಗಟ್ಟೆ ಸೇರ್ಪಡೆಗೊಂಡಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸಹಕಾರದಲ್ಲಿ 402 ವೆಬ್‌ಕ್ಯಾಸ್ಟಿಂಗ್ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಭಾವಚಿತ್ರವಿರುವ ಚೀಟಿ ವಿತರಿಸುವ ವ್ಯವಸ್ಥೆ ಮಾಡಲಾಗಿದ್ದು, ಮೇ 3ರೊಳಗೆ ಶೇ.65.33 ಪ್ರಗತಿ ಸಾಧಿಸಲಾಗಿದೆ.
ಸೇವಾದಾರರಿಗೆ ಅಂಚೆ ಮತಪತ್ರ: ಅಂಚೆ ಮತಪತ್ರ ವಿತರಿಸುವ ವ್ಯವಸ್ಥೆ ಮಾಡಲಾಗಿದ್ದು, 8209 ಮತಗಟ್ಟೆ ಸಿಬ್ಬಂದಿ, 824 ಪೊಲೀಸ್ ಸಿಬ್ಬಂದಿ, 520 ವಾಹನ ಚಾಲಕರು, ನಿರ್ವಾಹಕರಿಗೆ ನಮೂನೆ 12ನ್ನು ವಿತರಿಸಲಾಗಿದ್ದು, ಒಟ್ಟು 5907 ಅಂಚೆ ಮತಪತ್ರಮತ ಚಲಾವಣೆಯಲ್ಲಿ ಸ್ವೀಕೃತವಾಗಿದೆ. ಇದಲ್ಲದೆ 1027 ಸೇವಾ ಮತದಾರರಿಗೆ ಅಂಚೆ ಮತಪತ್ರಗಳನ್ನು ತ್ವರಿತ ಅಂಚೆ ಮೂಲಕ ರವಾನಿಸಿದ್ದು, ಮೇ 8ರಂದು ಬೆಳಗ್ಗೆ 8 ಗಂಟೆವರೆಗೆ ಸ್ವೀಕರಿಸಲು ಅವಕಾಶವಿರುತ್ತದೆ. ಮತಗಟ್ಟೆ ಭದ್ರತಾ ವ್ಯವಸ್ಥೆ ಬಗ್ಗೆ ಜಿಲ್ಲೆಯಲ್ಲಿ 967 ಕಟ್ಟಡಗಳಲ್ಲಿನ 1715 ಮತಗಟ್ಟೆಗಳಲ್ಲಿ 1180 ಕೇಂದ್ರೀಯ ಪೊಲೀಸ್ ಬಲ ಕಮಾಂಡೋಗಳು 1475 ಕರ್ನಾಟಕ ಪೊಲೀಸರು ಹಾಗೂ 257 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ.
173 ದೂರು ಸ್ವೀಕಾರ: ಜಿಲ್ಲೆಯಲ್ಲಿ ಇಲ್ಲಿವರೆಗೆ 173 ಚುನಾವಣಾ ದೂರುಗಳನ್ನು ಹಾಗೂ 1077 ದೂರವಾಣಿ ನಿಯಂತ್ರಣ ಕೊಠಡಿಯಲ್ಲಿ ದಾಖಲಿಸಲಾಗಿದೆ. ಅಬಕಾರಿ ಇಲಾಖೆಯಿಂದ 338 ದೂರು ಸ್ವೀಕೃತವಾಗಿದ್ದು, ಇದರಲ್ಲಿ 87 ಪ್ರಕರಣ ದಾಖಲಿಸಲಾಗಿದೆ. 50 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, 6 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು ರು. 7.55 ಲಕ್ಷ ಹಾಗೂ 299.67 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.
1685 ಪೊಲೀಸ್ ಸಿಬ್ಬಂದಿ: ಮಂಗಳೂರು ನಗರ ಮತಗಟ್ಟೆಗಳಿಗೆ ಒಟ್ಟು 1685 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಸುರಕ್ಷಿತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಬ್ಬರು ಆಯುಕ್ತರು, ಒಬ್ಬರು ಉಪ ಆಯುಕ್ತರು, 4 ಮಂದಿ ಸಹಾಯಕ ಆಯುಕ್ತರು, 18 ಮಂದಿ ಇನ್‌ಸ್ಪೆಕ್ಟರ್, 51 ಮಂದಿ ಸಬ್ ಇನ್‌ಸ್ಪೆಕ್ಟರ್/ಸಹಾಯಕ ಸಬ್ ಇನ್‌ಸ್ಪೆಕ್ಟರ್, 129 ಮುಖ್ಯ ಪೇದೆಗಳು, 389 ಪೇದೆಗಳು, 169 ಗೃಹರಕ್ಷಕರು, 830 ಕೇಂದ್ರೀಯ ಪ್ಯಾರಾ ಮಿಲಿಟರಿ ಬಲ ಸಿಬ್ಬಂದಿ, 100 ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಡಿಸಿಪಿ ಮುತ್ತೂರಾಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.