ಅಪಾಯಕಾರಿ ಮನೆಯೊಳಗೆ ವಾಸ..
ಉಪ್ಪಿನಂಗಡಿ: ಮನೆಗೆ ಮರ ಬಿದ್ದು ಹದಿನೈದು ದಿನಗಳು ಕಳೆದರೂ ಮನೆ ದುರಸ್ತಿಯಾಗದೆ ಅಪಾಯಕಾರಿ ಮನೆಯಲ್ಲಿ ಮಕ್ಕಳ ಜೊತೆಗೂಡಿ ದಲಿತ ಕುಟುಂಬವೊಂದು ದಿನ ಕಳೆಯುತ್ತಿರುವ ಖೇದಕರ ವಿದ್ಯಮಾನವೊಂದು ಉಪ್ಪಿನಂಗಡಿಯ ನಟ್ಟಿಬೈಲಿನಲ್ಲಿ ಕಂಡುಬಂದಿದೆ.
ಅದು ಪೂರ್ಣಿಮ ಮತ್ತು ಆಕೆಯ ಗಂಡ ರಮೇಶ ದಂಪತಿ ಮನೆ. ಕಷ್ಟಪಟ್ಟು ನಿರ್ಮಿಸಲಾಗಿದ್ದ ಮನೆಗೆ ಕಳೆದ ಹದಿನೈದು ದಿನಗಳ ಹಿಂದೆ ಬೀಸಿದ ಭಾರಿ ಗಾಳಿ ಮಳೆಗೆ ಮನೆ ಬಳಿಯ ಮರದ ಗೆಲ್ಲೊಂದು ಮುರಿದು ಮನೆಯ ಮೇಲೆ ಬಿತ್ತು. ಅರ್ಧಾಂಶ ಭಾಗ ಮನೆಯ ಛಾವಣಿ ತುಂಡರಿಸಲ್ಪಟ್ಟು ಮಳೆಯ ನೀರು ಮನೆಯೊಳಗೆ ಸುರಿಯುವಂತಾಗಿದೆ.
ಘಟನೆ ಸಂಭವಿಸಿದ ಮೂರು ದಿನಗಳ ಬಳಿಕ ಮನೆಯ ಮೇಲಿದ್ದ ಮರದ ಗೆಲ್ಲನ್ನು ತೆರವುಗೊಳಿಸಲಾಯಿತ್ತಾದರೂ ಮುರಿದ ಮನೆಯ ಛಾವಣಿಯನ್ನು ದುರಸ್ತಿ ಮಾಡುವವರು ಯಾರೂ ಇಲ್ಲವಾಗಿದೆ. ಮನೆಯ ಯಜಮಾನನಾದ ರಮೇಶ ಕೂಲಿನಾಲಿ ಮಾಡಿ ನಿತ್ಯದ ಜೀವನ ಸಾಗಿಸುವಲ್ಲಿ ಹೈರಾಣಗುತ್ತಿದ್ದು, ಕೈಯಲ್ಲಿ ಹಣವಿಲ್ಲದೆ ಮನೆಯ ಛಾವಣಿ ದುರಸ್ತಿಗೆ ಮುಂದಾಗಿಲ್ಲ.
ಘಟನೆ ಬಳಿಕ ಸ್ಥಳೀಯ ಪಂಚಾಯಿತಿ ಕಾರ್ಯದರ್ಶಿ ನಷ್ಟದ ಅಂದಾಜು ಮಾಡಿಕೊಂಡು, ಮನೆಯ ಹಾನಿಗೀಡಾದ ಭಾಗವನ್ನು ಅಳತೆ ಮಾಡಿಕೊಂಡು ಹೋಗಿದ್ದಾರೆ ಎನ್ನುವ ಮನೆ ಮಂದಿ, ಮನೆಯ ದುರಸ್ತಿಯನ್ನು ಪಂಚಾಯಿತಿ ಆಡಳಿತವೇ ನಿರ್ವಹಿಸುತ್ತದೆ ಎನ್ನುವ ಆಶಾವಾದದಲ್ಲಿ ದಿನ ಕಳೆಯುವಂತಿದೆ.
ಈಗಾಗಲೇ ಬಿದಿರನ್ನು ಅಳವಡಿಸಿದ್ದ ಮನೆಯ ಛಾವಣಿ ಗೆಲ್ಲು ಬಿದ್ದ ಬಳಿಕ ಶಿಥಿಲವಾಗಿದ್ದು, ಯಾವುದೇ ಸಂದರ್ಭದಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ. ಮೇಲಾಗಿ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳಿದ್ದು, ಬೀಳುವ ಸ್ಥಿತಿಯಲ್ಲಿರುವ ಹಂಚುಗಳು ಮನೆಯೊಳಗಿರುವ ಮಕ್ಕಳ ಮೇಲೆ ಬಿದ್ದರೆ ಇನ್ನೂ ಅನಗತ್ಯ ಅವಘಡಗಳು ಸಂಭವಿಸುವ ಸಾಧ್ಯತೆಗಳಿರುವುದರಿಂದ ಆಡಳಿತ ವ್ಯವಸ್ಥೆ ಈ ದಲಿತ ಕುಟುಂಬದ ಮನೆಯನ್ನು ಆದ್ಯತೆಯ ಮೇಲೆ ದುರಸ್ತಿ ಪಡಿಸುವ ಅಗತ್ಯತೆ ಇದೆ.
ಪಂಚಾಯಿತಿ ಆಡಳಿತದ ವ್ಯಾಪ್ತಿಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶವಿದ್ದರೆ ಪಂಚಾಯಿತಿ ಆಡಳಿತ ತುರ್ತಾಗಿ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಇಲ್ಲವಾದರೆ ಕಂದಾಯ ಇಲಾಖೆ ಇತ್ತ ಕಡೆಗೆ ಆದ್ಯತೆಯ ಗಮನ ಹರಿಸಬೇಕಾಗಿದೆ. ದಲಿತೋದ್ಧಾರಕ್ಕೆ ಸರ್ಕಾರದ ಹತ್ತು ಹಲವು ಯೋಜನೆಗಳು ಚಾಲ್ತಿಯಲ್ಲಿದ್ದರೂ ಪೂರ್ಣಿಮಾ ದಂಪತಿ ತಮ್ಮ ಮಕ್ಕಳು ಮರಿಗಳೊಂದಿಗೆ ಸೋರುವ- ಬೀಳುವ- ಭೀತಿಯ ಮನೆಯಲ್ಲಿ ವಾಸಿಸುವ ದುಃಸ್ತಿತಿ ಬಂದಿರುವುದು ವಿಪರ್ಯಾಸ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

