'ಎಳನೀರಿ'ಗೂ ನೀರಿನ ಬಾಧೆ
ಮಂಗಳೂರು: ಬಿಸಿಲಿನ ಧಗೆಗೆ ಬಾಯಾರಿದಾಗ ನಗರದಲ್ಲಿ ಕಣ್ಣಾಡಿಸಿದಲ್ಲಿ ಕಾಣ ಸಿಗುವುದು ಎಳನೀರು. ಆದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಸೀಯಾಳದ ಕೊರತೆ ಕಂಡು ಬಂದಿದೆ. ಇದಕ್ಕೆ ಕಾರಣ ನೀರಿನ ಅಭಾವ.
ಮೈಸೂರಿನಲ್ಲಿ ನೀರಿನ ಕೊರತೆಯಿಂದ ಎಕರೆಗಟ್ಟಲೆ ತೋಟದಲ್ಲಿ ಬೆಳೆದಿರುವ ತೆಂಗಿನ ಮರದ ಸೀಯಾಳಗಳು ಮುರಟಿಕೊಂಡಿದ್ದು, ಚಿಪ್ಪಿನ ಸಣ್ಣ ಆಕಾರ ಹೊಂದಿದೆ. ಮೇಲ್ಭಾಗದಿಂದ ನೋಡಿದರೆ ಎಳತು ಸೀಯಾಳದಂತೆ ಕಂಡುಬಂದರೆ ಕೆತ್ತಿ ನೋಡಿದರೆ ಅದು ಗೆರಟೆ ರೂಪದಲ್ಲಿದೆ. ಸ್ವಲ್ಪ ಮಟ್ಟಿಗೆ ಮಾತ್ರ ನೀರು ಇರುತ್ತದೆ.
ಇಂಥ ಸೀಯಾಳಗಳು ಲೋಡುಗಟ್ಟಲೆ ಬಂದು ಮಾರುಕಟ್ಟೆಯಲ್ಲಿ ಸೇರುತ್ತಿವೆ. ಕೆಲವು ವ್ಯಾಪಾರಿಗಳು ಇವುಗಳನ್ನು ನಿರಾಕರಿಸುತ್ತಿದ್ದರೆ, ಇನ್ನು ಕೆಲವರು ಕಡಿಮೆ ರು. 10-12 ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸುಮಾರು 19 ವರ್ಷಗಳಿಂದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿರುವ ಜಯರಾಮ ಅವರು ಕಳೆದ ಒಂದು ತಿಂಗಳಿನಿಂದ ಇಂಥ ಸೀಯಾಳಗಳನ್ನು ಮಾರಾಟ ಮಾಡುತ್ತಿದ್ದಾರೆ. 'ಇಂಥ ಸೀಯಾಳಗಳು ಹೆಚ್ಚಾಗಿ ಮೈಸೂರಿನಿಂದ ಬರುತ್ತಿದೆ. ಕೇಳಿದರೆ ನೀರಿಲ್ಲ ಆದ್ದರಿಂದ ಈ ರೀತಿ ಆಗಿದೆ ಎನ್ನುತ್ತಾರೆ. ಗ್ರಾಹಕರು ಇವುಗಳನ್ನು ನೋಡಿ ಬೇಡ ಎಂದು ಹೇಳುತ್ತಾರೆ. ದಿನಕ್ಕೆ 1ಸಾವಿರ ಸೀಯಾಳ ವ್ಯಾಪಾರ ಮಾಡುತ್ತಿದ್ದ ತಾನು, ಈಗ 500 ಸೀಯಾಳ ಮಾರಾಟವಾಗುತ್ತಿರುವುದೇ ಜಾಸ್ತಿ' ಎಂದು ಹೇಳುತ್ತಾರೆ.
ಲೇಡಿಹಿಲ್ನ ಸೀಯಾಳ ವ್ಯಾಪಾರಿ ಚಂದ್ರಪ್ಪ ಅವರು, 'ಜನರ ಬೇಡಿಕೆ ಇದ್ದರೂ, ಇಂಥ ಸೀಯಾಳವನ್ನು ಗ್ರಾಹಕರಿಗೆ ನೀಡಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ತಪ್ಪಲ್ಲ ಈಗ ಇದೇ ರೀತಿಯ ಸೀಯಾಳ ಬರುತ್ತಿದೆ. ಆದ್ದರಿಂದ ನಮಗೆ ಶಾಪ ಹಾಕಬೇಡಿ' ಎಂದು ಹೇಳುತ್ತಾರೆ
ಇತ್ತೀಚೆಗೆ ಸೀಯಾಳ ಸರಬರಾಜು ಕಮ್ಮಿಯಾಗಿದೆ. ನೀರಿನ ಕೊರತೆಯಿಂದ ಇಳುವರಿ ಚೆನ್ನಾಗಿಲ್ಲವೆಂದು ಮಾರಾಟಗಾರರು ಹೇಳುತ್ತಾರೆ.
ಜಿಲ್ಲೆಗೆ ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರಿನಿಂದ ಸೀಯಾಳಗಳನ್ನು ಟೆಂಪೋದಲ್ಲಿ ತೆಗೆದುಕೊಂಡು ಬರಲಾಗುತ್ತಿದೆ. ಇವರು ದಾರಿಯಲ್ಲಿ ತಳ್ಳುಗಾಡಿ, ಅಂಗಡಿಗಳಿಗೆ ಮಾರಾಟ ಮಾಡುತ್ತಾ ಸಾಗುತ್ತಾರೆ. ಹಾಸನದಿಂದ ಸ್ವಲ್ಪ ಪ್ರಮಾಣ ದೊಡ್ಡ ಸೀಯಾಳಗಳು ಬರುತ್ತಿದೆ. ಆದರೆ ಅದೂ ಕಮ್ಮಿ ಮಧ್ಯಾಹ್ನ ವ್ಯಾಪಾರ ಮುಗಿದು ಹೋಗುತ್ತಿದೆ ಎಂದು ಹೇಳುತ್ತಾರೆ ಕೆ.ಎಸ್. ರಾವ್ ರಸ್ತೆಯ ವ್ಯಾಪಾರಿ ಸುಂದರ್.
-ವಜ್ರಾಕ್ಷಿ ಬಂಟ್ವಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

