ಸುದ್ದಿ ಸಂಕ್ಷೇಪ
ಬಾಲಕಿಗೆ ಕಿರುಕುಳ: ಆರೋಪಿ ಬಂಧನ
ಪುತ್ತೂರು: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಸ್ಥಳೀಯರು ಪುತ್ತೂರು ನಗರ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶನಿವಾರ ಸಂಜೆ ನಗರದ ಹಾರಾಡಿ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಪಂಜಳ ನಿವಾಸಿ ಅಶೋಕ (30) ಎಂದು ಗುರುತಿಸಿಲಾಗಿದೆ. ಪುತ್ತೂರು ನಗರದ ಶಾಲೆಯೊಂದರಲ್ಲಿ ಕಲಿಯುತ್ತಿರುವ ಬಾಲಕಿ ಸಂಜೆ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ರಸ್ತೆ ಬದಿ ನಿಂತುಕೊಂಡಿದ್ದ ಈತ ಏಕಾಏಕಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಎನ್ನಲಾಗಿದೆ. ಈ ವೇಳೆ ಹೆದರಿದ ಬಾಲಕಿ ಬೊಬ್ಬೆ ಹಾಕಿದ್ದು, ಸ್ಥಳೀಯರು ಆತನನ್ನು ಬೆನ್ನಟ್ಟಿ ಹಿಡಿದು ನಗರ ಪೊಲೀಸರಿಗೆ ಒಪ್ಪಿಸಿದರು. ರಾತ್ರಿಯತನಕ ಆತನ ವಿರುದ್ಧ ಪ್ರಕರಣ ದಾಖಲಾಗಿಲ್ಲ.
ಧರ್ಮಸ್ಥಳ ವಿದ್ಯಾಸಂಸ್ಥೆ ಡಿಸಿ
ಮನ್ನಾ ಜಾಗದಲ್ಲಿಲ್ಲ: ಶಿವಪ್ಪ
ಮಂಗಳೂರು: 'ಧರ್ಮಸ್ಥಳ ವಿದ್ಯಾಸಂಸ್ಥೆಯು ಉಜಿರೆಯ ಡಿಸಿ ಮನ್ನಾ ಜಾಗದಲ್ಲಿ ನಿರ್ಮಾಣಗೊಂಡಿದೆ ಎನ್ನುತ್ತಿರುವ ಕೆಲ ಸಂಘಟನೆಗಳ ಆರೋಪ ಸುಳ್ಳೆಂದು' ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಷ್ಠಾನ ರಾಜ್ಯಾಧ್ಯಕ್ಷ ಶಿವಪ್ಪ ರೆಂಕೆದಗುತ್ತು ಹೇಳಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಕ್ಷಣ ಸಂಸ್ಥೆಯು ಯಾವುದೇ ಡಿಸಿ ಮನ್ನಾ ಜಾಗವನ್ನು ಅಕ್ರಮವಾಗಿ ಹೊಂದಿಲ್ಲ. ಬದಲಾಗಿ 1948-49 ರಂದು ಸರ್ಕಾರವೇ ಲೀಸ್ ಮೂಲಕ ಶಿಕ್ಷಣ ಸಂಸ್ಥೆಗೆ ನೀಡಿದೆ. ಇದರಲ್ಲಿ ಶಾಲಾ ಕಟ್ಟಡ, ಆಟದ ಮೈದಾನ, ಹಾಸ್ಟೆಲ್ ಕಟ್ಟಡ ನಿರ್ಮಾಣಗೊಂಡಿದೆ. 6 ದಶಕದ ಹಿಂದೆ ವಿದ್ಯಾ ಸಂಸ್ಥೆಗೆ ಕಾನೂನು ರೀತಿಯಲ್ಲಿ ನೀಡಲ್ಪಟ್ಟ ಜಮೀನನ್ನು ಈಗ ಒಮ್ಮಿಂದೊಮ್ಮೆಲೆ ಅಕ್ರಮ ಸ್ವಾಧೀನ ಎನ್ನುವುದು ಅಕ್ಷಮ್ಯ ಎಂದರು. ಸೌಜನ್ಯ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಸರ್ಕಾರ ಒಪ್ಪಿಸಿದ್ದು, ವರದಿ ಬರುವರೆಗೆ ತಾಳ್ಮೆಯಿಂದ ಕಾಯುವುದು ನ್ಯಾಯೋಚಿತವಾಗಿದೆ. ಈ ಕುರಿತು ನಡೆಯುತ್ತಿರುವ ಹೋರಾಟಗಳಿಗೆ ಯಾವುದೇ ಅರ್ಥವಿಲ್ಲ. ಸಿಬಿಐ ಮತ್ತು ನ್ಯಾಯಾಲಯದ ವಿಶ್ವಾಸವಿಡುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಬಸ್ನಿಂದ ಎಸೆಯಲ್ಪಟ್ಟು ವ್ಯಕ್ತಿ ಸಾವು
ಪಡುಬಿದ್ರಿ: ಚಲಿಸುತ್ತಿದ್ದ ಬಸ್ ಒಮ್ಮೆಗೆ ನಿಲ್ಲಿಸಿದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕನೋರ್ವ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಪಡುಬಿದ್ರಿಯಲ್ಲಿ ಶುಕ್ರವಾರ ನಡೆದಿದೆ. ಮೃತರು ರಾಮಣ್ಣ ಶೆಟ್ಟಿ (60). ಅವರು ಅಡ್ವೆಯಿಂದ ಪಡುಬಿದ್ರಿ ಕಡೆಗೆ ಗುರುವಾರ ಬಸ್ಸಿನಲ್ಲಿ ಹೋಗುತ್ತಿದ್ದ ಸಂದರ್ಭ ಬಸ್ಸು ಚಾಲಕ ಯಾವುದೇ ಸೂಚನೆ ನೀಡದೆ ನಿಲ್ಲಿಸಿದ್ದರಿಂದ ಬಸ್ನಿಂದ ಹೊರಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

