ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ಬೈಕ್ ಡಿಕ್ಕಿ; ಗಾಯ
ಬೈಂದೂರು: ರಸ್ತೆ ಬದಿಯಲ್ಲಿ ಸೊಪ್ಪಿನ ಹೊರೆಹೊತ್ತು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಶುಕ್ರವಾರ ಗಂಗನಾಡು ಹತ್ಯಾಡಿ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ನಾರಾಯಣ ಗೊಂಡ ಎಂದು ಗುರುತಿಸಲಾಗಿದೆ. ಇವರು ಹಾಡಿಯಲ್ಲಿ ಸೊಪ್ಪು ಕಡಿದುಕೊಂಡು ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವೇಗವಾಗಿ ಬಂದ ಬೈಕೊಂದು ಡಿಕ್ಕಿ ಹೊಡೆದಿದೆ. ಈ ಬಗ್ಗೆ ನಾರಾಯಣ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಡಿಕ್ಕಿ: ಕೂಲಿ ಕಾರ್ಮಿಕ ದುರ್ಮರಣ
ಮಂಗಳೂರು: ಟ್ರಾಕ್ಟರ್ ಡಿಕ್ಕಿಯಾಗಿ ರಾಯಚೂರಿನ ಕೂಲಿ ಕಾರ್ಮಿಕ ಸಂಜೀವ (25) ಮೃತಪಟ್ಟ ಘಟನೆ ಕುರ್ನಾಡಿನಲ್ಲಿ ಭಾನುವಾರ ನಡೆದಿದೆ. ಇಲ್ಲಿನ ಸಟ್ಪಾಡಿಯಲ್ಲಿ ಸಂಜೀವ ತನ್ನ ಸಹಚರ ವೀರೇಶ್ ಜತೆ ಕಲ್ಲುಕ್ವಾರಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿ ಎದುರಿನಿಂದ ಬಂದ ಟ್ರಾಕ್ಟರ್ ರಿವರ್ಸ್ ತೆಗೆಯುತ್ತಿದ್ದಾಗ ಹಠಾತ್ತನೆ ಈತನಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡ ಸಂಜೀವ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸೇರಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೋರ್ವ ಪಾದಚಾರಿ ವೀರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಾಕ್ಟರ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಕೆಲಸಗಾರ ಉಮೇಶ್ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳ್ಳತನಕ್ಕೆ ಯತ್ನ: ಇಬ್ಬರ ಬಂಧನ
ಮಂಗಳೂರು: ಹಾಡಹಗಲೇ ಮನೆಯಿಂದ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಕುತ್ತೆತ್ತೂರಿನಲ್ಲಿ ಭಾನುವಾರ ವರದಿಯಾಗಿದೆ. ಡೋಲ್ಫಿ ಆಲ್ವಿನ್ ಸುವಾರಿಸ್ ಎಂಬವರ ಬಾಡಿಗೆ ಮನೆಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ್ದರು. ಇದನ್ನು ಕಂಡ ಪಕ್ಕದ ಮನೆಯವರು ಮನೆಗೆ ಹೊರಗಿನಿಂದ ಬೀಗ ಜಡಿದು ಪೊಲೀಸರಿಗೆ ಫೋನಾಯಿಸಿದರು. ಪೊಲೀಸರು ಆಗಮಿಸಿ ಆರೋಪಿ ಹಮೀದ್ ಕಾಟಿಪಳ್ಳ ಮತ್ತು ಆರಿಫ್ ವಾಮಂಜೂರು ಎಂಬಿಬ್ಬರನ್ನು ವಶಕ್ಕೆ ತೆಗೆದುಕೊಂಡರು. ಕಳವಿಗೆ ಬಂದ ಬಜಾಜ್ ಬೈಕ್‌ನ್ನು ಸ್ವಾಧೀನಪಡಿಸಿದ್ದಾರೆ. ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.
ಬೈಕ್ ಡಿಕ್ಕಿಯಾಗಿ ಸೈಕಲ್ ಸವಾರ ಸಾವು
ಕೋಟ: ರಿಕ್ಷಾ ಸೈಕಲಿಗೆ ಡಿಕ್ಕಿ ಹೊಡೆದು ಸೈಕಲ್ ಸವಾರ ಮೃತಪಟ್ಟ ಘಟನೆ ಇಲ್ಲಿನ ಕಲ್ಮರ್ಗಿ ಕ್ಲಾತ್ ಜನರಲ್ ಸ್ಟೋರ್ಸ್ ಎದುರ ಶನಿವಾರ ನಡೆದಿದೆ. ಕೃಷ್ಣಪ್ಪ ಮೃತರು. ಇವರು ತಮ್ಮ ಸೈಕಲಿನಲ್ಲಿ ಕಲ್ಮರ್ಗಿ ಕಡೆಗೆ ಹೋಗುತ್ತಿರುವಾಗ ರಿಕ್ಷಾ ಸೈಕಲಿನ ಹಿಂಬದಿಗೆ ಡಿಕ್ಕಿ ಹೊಡೆದು ಕೃಷ್ಣಪ್ಪ ಅವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದು ಗಾಯ
ಕಾಪು: ಹೂವಿನ ಅಂಗಡಿ ಎದುರು ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಇಲ್ಲಿನ ಯೆಣಗುಡ್ಡೆ ಗ್ರಾಮದ ಕಟಪಾಡಿಯಲ್ಲಿ ಶನಿವಾರ ನಡೆದಿದೆ. ಗಾಯಗೊಂಡವರನ್ನು ಪ್ರಕಾಶ್ ಜಿ. ಶೆಟ್ಟಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪ್ರಕಾಶ್ ಜಿ. ಶೆಟ್ಟಿ ಅವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.