ಪತ್ನಿಯಿಂದಲೇ ಗಂಡನ ಕೊಲೆ
ಸುಳ್ಯ: ಆಲೆಟ್ಟಿ ಗ್ರಾಮದ ಕೋಲ್ಚಾರ್ ಬಳಿಯ ಮಾಣಿಮರ್ದನದ ಯುವಕನೊಬ್ಬ ಕೇರಳದಲ್ಲಿರುವ ತನ್ನ ಪತ್ನಿಯ ಮನೆಗೆ ಹೋಗಿದ್ದಾಗ ಪತಿ- ಪತ್ನಿ ಜಗಳವಾಗಿ ಪತ್ನಿಯಿಂದಲೇ ಕೊಲೆಗೀಡಾದ ಘಟನೆ ಇತ್ತೀಚೆಗೆ ಸಂಭವಿಸಿದೆ.
ಮಾಣಿಮರ್ದ ನಿವಾಸಿ ದಿ. ಬುದ್ಧ ನೈಕ್ ಮಗ ಯಶವಂತ (32) ಮತ್ತು ಕೇರಳದ ಬಂದ್ಯಡ್ಕ ಬಳಿಯ ತುಂಬೋಡಿ ಎಂಬಲ್ಲಿಯ ರಾಘವನ್ ಎಂಬವರ ಮಗಳು ಪ್ರಸೀತಾಗೆ 6 ವರ್ಷಗಳ ಹಿಂದೆ ಮದುವೆಯಾಗಿತ್ತು.
ಮನೆಯಲ್ಲಿ ತಾಯಿ ಶಾರದಾ ಮತ್ತು ಮಗ ಯಶವಂತ ಮಾತ್ರ ಇದ್ದು, ಯಶವಂತನ ಪತ್ನಿ ಪ್ರಸೀತಾ ಗಂಡನ ಮನೆಯಲ್ಲಿ ಇರಲು ಒಪ್ಪದೆ ತನ್ನ ತವರು ಮನೆಯಲ್ಲೆ ಹೆಚ್ಚಾಗಿ ಇರುತ್ತಿದ್ದರು. ಆಕೆಯ ತಂದೆ ಆಕೆಗೆ ತನ್ನ ಜಾಗದಲ್ಲಿ ಪಾಲು ನೀಡಿದ್ದು, ಆ ಜಾಗದಲ್ಲಿ ಅವರು ಇತ್ತೀಚೆಗೆ ಮನೆ ಕಟ್ಟಿದ್ದರಲ್ಲದೆ, ಅಲ್ಲೇ ಇದ್ದು ಹಾಸ್ಟೆಲ್ ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು. ಯಶವಂತ-ಪ್ರಸೀತಾರಿಗೆ 4 ವರ್ಷದ ಗಂಡು ಮಗುವೊಂದಿದ್ದು, ಯಶವಂತ ಅವರು ಆಗಾಗ ತುಂಬೋಡಿಯ ಮನೆಗೆ ಹೋಗಿ ಇರುತ್ತಿದ್ದರು.
ಮಾಣಿಮರ್ಧನ ಮನೆಯಲ್ಲಿ ವೃದ್ಧ ತಾಯಿ ಮಾತ್ರ ಇದ್ದುದರಿಂದ, ಇಲ್ಲಿಗೆ ಬಂದು ಇರುವಂತೆ ಯಶವಂತ ಹೇಳಿದರು. ಪತ್ನಿ ಒಪ್ಪದೆ ಇರುವುದರಿಂದ ಆಗಾಗ ಇವರ ಮಧ್ಯೆ ಜಗಳವಾಗುತ್ತಿತ್ತು. ಯಶವಂತನಿಗೆ ಕುಡಿತದ ಚಟ ಕೂಡ ಇತ್ತು ಎನ್ನಲಾಗಿದೆ.
ಅ.18ರಂದು ರಾತ್ರಿ ಯಶವಂತ ಮತ್ತು ಪ್ರಸೀತಾರ ಮಧ್ಯೆ ಜಗಳ ತಾರಕಕ್ಕೇರಿ ಯಶವಂತ ಪತ್ನಿಗೆ ಹೊಡೆಯಲು ಕಬ್ಬಿಣದ ಸಲಾಕೆಯೊಂದನ್ನು ಕೈಗೆತ್ತಿಕೊಂಡರೆನ್ನಲಾಗಿದೆ. ಆಗ ಪತ್ನಿ ಪ್ರಸೀತಾ ಮರದ ದೊಣ್ಣೆ ತೆಗೆದುಕೊಂಡು ಗಂಡನತ್ತ ಬೀಸಿದರೆನ್ನಲಾಗಿದೆ. ಈ ಪೆಟ್ಟು ಯಶವಂತರ ತಲೆಗೆ ಬಡಿದು ಆತ ನೆಲಕ್ಕೆ ಬಿದ್ದರು.
ಆಗ ಪತ್ನಿ ಬಿದ್ದ ಗಂಡನ ತಲೆಗೆ ಮತ್ತೂ ಹೊಡೆದರೆನ್ನಲಾಗಿದೆ. ಪರಿಣಾಮವಾಗಿ ಯಶವಂತ ರಕ್ತದ ಮಡುವಿನಲ್ಲಿ ಬಿದ್ದರು. ಈ ಬೊಬ್ಬೆ ಕೇಳಿ ಪ್ರಸೀತಾರ ತಂದೆ ಬಂದು ಬಿದ್ದಿದ್ದ ಅಳಿಯನನ್ನು ಕಾಞಂಗಾಡ್ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಅಲ್ಲಿ ಯಶವಂತ ಕೊನೆಯುಸಿರೆಳೆದರೆನ್ನಲಾಗಿದೆ. ರಾಜಾಪುರ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದ್ದು, ಪತ್ನಿ ಪ್ರಸೀತಾರನ್ನು ಪೊಲೀಸರು ಬಂಧಿಸಿದರು. ಅ.19ರಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹವನ್ನು ರಾತ್ರಿ ಮಾಣಿಮರ್ಧಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

