ಕಲ್ಮಕಾರಲ್ಲಿ ಕಾಡಾನೆ ಕಾಟ
ಸುಬ್ರಹ್ಮಣ್ಯ: ಕೃಷಿಕರನ್ನು ಗಂಭೀರವಾಗಿ ಕಾಡುತ್ತಿರುವ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಲ್ಮಕಾರು ಮತ್ತು ಕೊಲ್ಲಮೊಗ್ರು ಗ್ರಾಮಗಳ ಹತ್ತಾರು ಪ್ರದೇಶಗಳ ಕೃಷಿಕರ ತೋಟಗಳಿಗೆ ನಿರಂತರವಾಗಿ ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ನಾಶಗೊಳಿಸುತ್ತಿರುವುದು ಸಾಮಾನ್ಯವಾಗಿದೆ.
ಕೊಪ್ಪಡ್ಕ, ಗೂನಡ್ಕ ರೈತರು ನಿತ್ಯ ರಾತ್ರಿ ತೋಟಗಳಿಗೆ ದಾಳಿ ಇಡುವ ಕಾಡಾನೆಗಳನ್ನು ಕಾಡಿನತ್ತ ಓಡಿಸಲು ತಂಡ ತಂಡವಾಗಿ ಕಾರ್ಯಾಚರಣೆ ಆರಂಭಿಸಿದ್ದು ವಾರದಿಂದ ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಹರಿಹರ, ಐನೆಕಿದು ಪ್ರದೇಶಗಳ ಕಾಡಿನಂಚಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ ಜೀವನ ನಡೆಸುತ್ತಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಉಪಟಳ ಕಳೆದ ಕೆಲವು ವರುಷಗಳಿಂದ ಕಾಡುತ್ತಿದ್ದರೂ ಇತ್ತೀಚೆಗೆ ಕೆಲವು ಸಮಯದಿಂದ ಗಂಭೀರವಾಗಿ ಕಾಡುತ್ತಿದೆ. ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಬೆಳೆ ಹಾನಿ, ಕೃಷಿ ಉಪಕರಣಗಳನ್ನು ಹಾಳುಗೆಡವುತ್ತಿವೆ. ಜೀವಹಾನಿಗೂ ಕಾರಣವಾಗುತ್ತಿವೆ.
ವರದಿ ಸಲ್ಲಿಕೆಯಾಗಿದೆ: ಕಾಡಾನೆ ಬಾಧಿತ ಪ್ರದೇಶಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಬೆಳೆ ನಾಶದ ಅಂದಾಜು ಪಟ್ಟಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರೆ, ಸರ್ಕಾರ ಅಲ್ಪಸ್ವಲ್ಪ ಪರಿಹಾರ ಮೊತ್ತ ನೀಡಿ ಕೈ ತೊಳೆದುಕೊಂಡುಬಿಡುತ್ತದೆ. ಆದರೆ ನಿರಂತರವಾಗಿ ಪುನರಾವರ್ತನೆಯಾಗುವ ಕಾಡಾನೆಗಳ ಉಪಟಳ ತಡೆಯಲು, ಸೋಲಾರ್ ಬೇಲಿ, ಸುತ್ತ ಕಂದಕ ನಿರ್ಮಾಣಗಳಂತಹ ಧನಾತ್ಮಕ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕೃಷಿಕರು ಆರೋಪ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಕೃಷಿಕರ ಸಂಕಷ್ಟ ಅರ್ಥಮಾಡಿಕೊಳ್ಳದ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಈ ಪರಿಸರದ ಮಂದಿ ಸಹನೆ ಕಳೆದುಕೊಂಡಿದ್ದು, ನಾಶವಾದ ಬೆಳೆಗಳಿಗೆ ಪರಿಹಾರ ಹೆಚ್ಚುಗೊಳಿಸಬೇಕು, ಕಾಡಾನೆಗಳ ಉಪಟಳ ತಡೆಯಲು ಶಾಶ್ವತ ಪರಿಹಾರ ಜರುಗಿಸಬೇಕು. ಇಲ್ಲವಾದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಆನೆಬಾಧಿತ ಗ್ರಾಮಗಳ ಕೃಷಿಕರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

