ಎಂಡೋ: ರು. 75 ಕೋ. ಪರಿಹಾರ ಬೇಡಿಕೆ
ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರಿಗೆ ರು. 75 ಕೋಟಿ ವಿಶೇಷ ಪರಿಹಾರ ನೀಡಲು ಜಿಲ್ಲೆಯಿಂದ ಕೋರಿಕೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಕಲ್ಯಾಣ ಸಮಿತಿಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜಿಲ್ಲೆಯಿಂದ ರು. 75 ಕೋಟಿ ಪರಿಹಾರ ಕೇಳಿದ್ದರೆ, ಆರೋಗ್ಯ ಇಲಾಖೆ ಜತೆ ರು. 50 ಕೋಟಿ ಪರಿಹಾರಕ್ಕೆ ಪ್ರಸ್ತಾಪಿಸಿದ್ದೇನೆ. ಎಂಡೋ ಸಂತ್ರಸ್ತರ ಶಾಶ್ವತ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ರೂಪುರೇಷೆ ಹಾಕಿಕೊಳ್ಳಲಾಗುತ್ತಿದೆ. ಸಂತ್ರಸ್ತರಿಗೆ ನೆರವಾಗಲೆಂದೇ ರಚಿಸಿದ ಸಾಮಾನ್ಯ ಸಮಿತಿ ಹಾಗೂ ಕಾರ್ಯನಿರ್ವಹಣಾ ಸಮಿತಿ ಇನ್ನೊಮ್ಮೆ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ಸಮಿತಿ ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯನ್ನು ಹೊಂದಿದೆ ಎಂದರು.
ಎಂಡೋ ಸಂತ್ರಸ್ತರ ಸಮಸ್ಯೆ ಸರಿಯಾಗಿ ತಿಳಿಯುವ ಸಲುವಾಗಿ ಸರ್ವೇ ಕಾರ್ಯ ನಡೆಸಲಾಗಿದೆ. ಈ ಬಾರಿ ಉತ್ತಮ ಸರ್ವೇ ನಡೆಸಿದ್ದು, ಹೆಚ್ಚುಕಡಿಮೆ ಇದ್ದರೆ ಮತ್ತೆ ಸೇರ್ಪಡೆಗೆ ಅವಕಾಶವಿದೆ. ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆಯ ಸಾಮಾನ್ಯ ಸಮಿತಿ ಸಲಹೆ, ಸೂಚನೆ, ಮಾರ್ಗದರ್ಶನ ನೀಡಲಿದ್ದು, ಅದರಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಕಾರ್ಯನಿರ್ವಹಣಾ ಸಮಿತಿ ಕಾರ್ಯಕ್ರಮ ಅನುಷ್ಠಾನಿಸಲಿದೆ. ಸಂತ್ರಸ್ತರಿಗೆ ಕೊಂಡಿಯಾಗಿ ಈ ಸಮಿತಿ ಕಾರ್ಯನಿರ್ವಹಿಸಲಿದೆ ಎಂದರು.
ಇನ್ನು ಸಮಿತಿಗೆ ದೂರು ನೀಡಿ: ಎಂಡೋ ಸಂತ್ರಸ್ತರು ಈವರೆಗೆ ಯಾರಿಗೆ ಅಹವಾಲು ಸಲ್ಲಿಸಬೇಕು ಎಂಬ ಗೊಂದಲದಲ್ಲಿದ್ದರು. ಇನ್ನು ಈ ಸಮಿತಿಗೆ ಕುಂದುಕೊರತೆ ಹೇಳಬಹುದು. ಪ್ರಸ್ತುತ ರು. 5 ಕೋಟಿ ಅನುದಾನ ಕೋರಲಾಗಿದ್ದು, ಸರಿಯಾದ ಕಾರ್ಯಕ್ರಮ ಹಾಕಿಕೊಂಡರೆ ಇನ್ನೂ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು. ಎಂಡೋಪೀಡಿತ ಪ್ರದೇಶದ ಗರ್ಭಿಣಿಯರ ಸ್ಕ್ಯಾನಿಂಗ್ ನಡೆಸಲು ಆರೋಗ್ಯ ಇಲಾಖೆ ಅನುಮತಿ ಬೇಕು. ಎನ್ಜಿಒಗಳು ಅನುಮತಿ ಪಡೆದೇ ವ್ಯವಹರಿಸಬೇಕು. ಎಂಡೋಪೀಡಿತರ ಪಟ್ಟಿ ಅಂತಿಗೊಂಡಿಲ್ಲ. ಬಳಿಕ ಸಂತ್ರಸ್ತರ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಬಹುದು. ಎಂಡೋಪೀಡಿತರಿಗೆ ವೃತ್ತಿಕೌಶಲ್ಯ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
50 ಲಕ್ಷಕ್ಕೆ ಹೆಚ್ಚಳ: ಎಂಡೋ ಸಂತ್ರಸ್ತರ ಪಾಲನಾ ಸಮಿತಿಗೆ ಮಾಸಿಕ ನೀಡುತ್ತಿದ್ದ ರು. 25 ಲಕ್ಷವನ್ನು ರು. 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಕೊಕ್ಕಡ ಮತ್ತು ಕೊಯಿಲದಲ್ಲಿ ಪಾಲನಾ ಕೇಂದ್ರವಿದೆ. ಈ ಕೇಂದ್ರಕ್ಕೆ ಬರಲಾಗದವರಿಗೆ ಮೊಬೈಲ್ ಕ್ಲಿನಿಕ್ ವ್ಯವಸ್ಥೆಗೆ ಟೆಂಡರ್ ಕರೆಯಲಾಗಿದೆ. ಶಾಶ್ವತ ಪುನರ್ವಸತಿ ಕೇಂದ್ರ ತೆರೆಯುವ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಎನ್ಜಿಒಗಳು, ಉಸ್ತುವಾರಿ ಸಚಿವರ ಜತೆ ಚರ್ಚೆ ನಡೆಸಲಾಗುವುದು ಎಂದರು.
ಸ್ಕ್ಯಾನಿಂಗ್ಗೆ ಅವಕಾಶ ಕಲ್ಪಿಸಿ: ಎಂಡೋ ಸಂತ್ರಸ್ತರ ಸಮಸ್ಯೆ ನಿವಾರಣೆಗೆ ಜನಪ್ರತಿನಿಧಿಗಳು ಸ್ಪಂದನ ನೀಡಬೇಕು. ಶೇಕಡಾವಾರು ಪ್ರಮಾಣದಲ್ಲಿ ಸಂತ್ರಸ್ತರ ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ. ಬಿಟ್ಟುಹೋದವರ ಹೆಸರು ಸೇರ್ಪಡೆಗೆ ಅವಕಾಶವಿದೆ. ಜನನಿ ಸುರಕ್ಷಾ ಯೋಜನೆಯಲ್ಲಿ ಗರ್ಭಿಣಿಯರ ಉಚಿತ ಸ್ಕ್ಯಾನಿಂಗ್ಗೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವ ರಮಾನಾಥ ರೈ ಸೂಚಿಸಿದರು. ಎಂಡೋ ಪೀಡಿತರ ಹೆತ್ತವರ ನಂತರ ಅವರಿಗೆ ಯಾರು ಗತಿ ಎಂಬ ಪ್ರಶ್ನೆ ಬರುತ್ತದೆ. ಹಾಗಾಗಿ ಅವರಿಗೆ ಶಾಶ್ವತ ಆಶ್ರಮದ ವ್ಯವಸ್ಥೆಯಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಆಗ್ರಹಿಸಿದರು. ಜಿ.ಪಂ. ಅಧ್ಯಕ್ಷ ಕೊರಗಪ್ಪ, ಸದಸ್ಯರಾದ ಆಶಾ ತಿಮ್ಮಪ್ಪ, ಫಕೀರ, ಕೇಶವ ಗೌಡ, ಧನಲಕ್ಷ್ಮೀ, ಸರಸ್ವತಿ ಕಾಮತ್, ಮಮತಾ ಗಟ್ಟಿ, ಚಂದ್ರಕಲಾ, ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಮಾತನಾಡಿದರು. ವೇದಿಕೆಯಲ್ಲಿ ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವಾ, ಜಿಲ್ಲಾಧಿಕಾರಿ ಪ್ರಕಾಶ್, ಜಿಲ್ಲಾ ಪಂಚಾಯ್ತಿ ಸಿಇಒ ತುಳಸಿ ಮದ್ದಿನೇನಿ ಹಾಜರಿದ್ದರು.
ಕೇರಳ ಸಿಎಂ ಜತೆ ಮಾತುಕತೆ
ಕರ್ನಾಟಕ-ಕೇರಳ ಗಡಿ ಭಾಗದ ನೆಟ್ಟಣಿಗೆ ಮುಡ್ನೂರಿನಲ್ಲಿ ಬಾವಿಗೆ ಎಂಡೋಸಲ್ಫಾನ್ ಬ್ಯಾರಲ್ ಸುರಿದ ಘಟನೆಗೆ ಸಂಬಂಧಿಸಿ ಕೇರಳ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುದ್ದಿಗಾರರಲ್ಲಿ ಮಾತನಾಡಿದ ಅವರು, ಪರಿಸರ ಇಲಾಖೆ ನಡೆಸಿದ ಬಾವಿ ನೀರಿನ ಪರೀಕ್ಷೆಯಲ್ಲಿ ಎಂಡೋಸಲ್ಫಾನ್ ಅಂಶ ಇಲ್ಲ ಎಂದು ವರದಿ ಬಂದಿದೆ. ಎಂಡೋ ಬ್ಯಾರಲ್ ಸುರಿದ ಪ್ರದೇಶ ಗಡಿ ಭಾಗದಲ್ಲಿರುವುದರಿಂದ ಮುಂದಿನ ಕ್ರಮದ ಕುರಿತು ಕೇರಳ ಮುಖ್ಯಮಂತ್ರಿ ಜತೆ ಶೀಘ್ರ ಮಾತುಕತೆ ನಡೆಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

