ವಸತಿ ಯೋಜನೆ: ಬಾರದ ಅನುದಾನ
ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಅವ್ಯವಸ್ಥೆ, ವಾಜಪೇಯಿ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಆಗುತ್ತಿರುವ ಸಮಸ್ಯೆ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಸಭಾಭವನದಲ್ಲಿ ಜರುಗಿದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಘನತ್ಯಾಜ್ಯ ನಿರ್ವಹಣೆಗೆ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು, ಕೆಲವು ಕಡೆಗಳಲ್ಲಿ ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಸದಸ್ಯೆ ವಂದನಾ ಕಾಮತ್ ಸಭೆಯಲ್ಲಿ ತಿಳಿಸಿದರು.
ಪ್ರಸ್ತುತ ಪ್ರತಿ ಮನೆಯಿಂದ ಈಗ ತಿಂಗಳಿಗೆ ರು. 15 ಸಂಗ್ರಹಿಸುತ್ತಿದ್ದು, ಇದರಿಂದ ನಿರ್ವಹಣೆ ಕಷ್ಟವಾಗಿದೆ. ಮಾಸಿಕ ರು. 25ಕ್ಕೆ ಹೆಚ್ಚಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.
ಇನ್ನೂ ಬಾರದ ಅನುದಾನ: ವಾಜಪೇಯಿ ವಸತಿ ಯೋಜನೆಯಲ್ಲಿ ಕಳೆದ ಬಾರಿ ಅರ್ಹ ಫಲಾನುಭವಿಗಳನ್ನು ಗುರುತಿಸಿದ್ದು, ಫಲಾನುಭವಿಗಳು ತಮ್ಮ ವಾಸ್ತವ್ಯ ಪ್ರದೇಶದಲ್ಲಿ 280 ಚದರ ಅಡಿಗಿಂತ ಹೆಚ್ಚಿನ ಮನೆಯ ಭಾಗವನ್ನು ಗೋಡೆ ಕಟ್ಟಿ ಕಾಂಕ್ರಿಟ್ ಸ್ಲ್ಯಾಬ್ ಮಾಡಿದ್ದಾರೆ. ಆದರೆ ಪಂಚಾಯಿತಿಯಿಂದ ನೀಡುವ ರು. 1 ಲಕ್ಷ ಅನುದಾನ ಸಿಗದಿರುವ ಬಗ್ಗೆ ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆಂದು ಸಭೆಯಲ್ಲಿ ಸದಸ್ಯರು ದೂರಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಪ್ರಸ್ತುತ ವಾಜಪೇಯಿ ವಸತಿ ಯೋಜನೆಗೆ ಜಿಪಿಎಸ್ ಪದ್ಧತಿ ಬಂದಿದ್ದು, ಅದರಂತೆ ಫಲಾನುಭವಿಗಳು ಖಾಲಿ ನಿವೇಶನ ತೋರಿಸಬೇಕಿದೆ. ಬಳಿಕ ಗೋಡೆ ಕಟ್ಟಿದ ಬಳಿಕ ಹಾಗೂ ಕಾಂಕ್ರಿಟ್ ಸ್ಲ್ಯಾಬ್ ಮಾಡಿದ ಬಳಿಕ ಸೇರಿದಂತೆ ಒಟ್ಟು ಮೂರು ಹಂತಗಳಲ್ಲಿ ತಲಾ ರು. 40,000ದಂತೆ ಒಟ್ಟು ರು. 1.2 ಲಕ್ಷ ಹಣ ಮಂಜೂರು ಮಾಡಲು ಆದೇಶ ಬಂದಿದ್ದು, ಇದರಿಂದ ಈಗಾಗಲೇ ಮನೆ ನಿವೇಶನದಲ್ಲಿ ನಿರ್ಮಾಣ ಕಾರ್ಯ ಮಾಡಿದವರಿಗೆ ಸಮಸ್ಯೆಯಾಗಿದೆ ಎಂದು ಮುಖ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು.
ಈ ಬಗ್ಗೆ ಸಚಿವ ಕೆ. ಅಭಯಚಂದ್ರ ಜೈನ್ರೊಂದಿಗೆ ಚರ್ಚಿಸುವುದಾಗಿ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ತಿಳಿಸಿದರು. ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ವಂದಿಸಿದರು, ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್ ಕಾರ್ಯಕಲಾಪ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

