5 ಬ್ಯಾರಲ್ ಡಾಂಬರು ಕಳವು
ಉಪ್ಪಿನಂಗಡಿ: ಕೊಯ್ಲ ಗ್ರಾಮದ ಸಬಳೂರು ಏಣಿತಡ್ಕ ರಸ್ತೆಯ ಡಾಂಬರೀಕರಣಕ್ಕಾಗಿ ತಂದಿರಿಸಿದ್ದ ಐದು ಬ್ಯಾರಲ್ ಡಾಂಬರು ಕಳವು ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಲಿಯ ಪ್ರಯಾಣಿಕರ ತಂಗುದಾಣದ ಹಿಂದೆ ಇಡಲಾಗಿದ್ದ ಐದು ಬ್ಯಾರಲ್ ಡಾಂಬರು ಕಳವು ಮಾಡಲಾಗಿದೆ ಎಂದು ದೂರಲಾಗಿದೆ. ಗುತ್ತಿಗೆದಾರ ಪ್ರಸಾದ್ ಕಡಬ ಪೊಲೀಸರಿಗೆ ದೂರು ನೀಡಿದ್ದು ಐದು ಬ್ಯಾರಲ್ನ ಅಂದಾಜು ಮೊತ್ತ ರು. 50 ಸಾವಿರ ನಷ್ಟ ಉಂಟಾಗಿದೆ ಎಂದಿದ್ದಾರೆ.
ಯುವತಿ ನಾಪತ್ತೆ
ಬೆಳ್ತಂಗಡಿ: ತಾಲೂಕಿನ ಲೈಲ ಗ್ರಾಮದ ಪ್ರವಿತಾ (18) ಎಂಬಾಕೆ ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಥ ಎಂಬವರ ದತ್ತು ಪುತ್ರಿಯಾದ ಈಕೆ ಮೇಲಂತಬೆಟ್ಟು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಮನೆಯಿಂದ ಹೋದವಳು ಕಾಲೇಜಿಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ಮಂಜುನಾಥ್ ದೂರು ನೀಡಿದ್ದಾರೆ.
ಗಾಯಾಳು ಸಾವು
ಬೆಳ್ತಂಗಡಿ: ಗೋಡೆ ಕುಸಿದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಾವೂರು ಗ್ರಾಮದ ಮಲ್ಲಡ್ಕ ಎಂಬಲ್ಲಿನ ನಿವಾಸಿ ಕೋಟ್ಯಪ್ಪ ಪೂಜಾರಿ (56) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇಲ್ಲಿನ ರವಿರಾಜ್ ಎಂಬವರ ಮನೆಯಲ್ಲಿ ಜ.25ರಂದು ಹಳೆ ಹಟ್ಟಿಯ ಕೆಲಸ ಮಾಡುತ್ತಿದ್ದಾಗ ಗೋಡೆ ಕುಸಿದು ತೀವ್ರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಳ್ಳೂರು ಮಸೀದಿಗೆ ನುಗ್ಗಿ ದಾಂದಲೆ: ದೂರು
ಮೂಲ್ಕಿ: ಹಳೆಯಂಗಡಿ ಸಮೀಪದ ಬೊಳ್ಳೂರು ಜುಮ್ಮಾ ಮಸೀದಿಯಲ್ಲಿ ಇತ್ತೀಚೆಗೆ ಲೆಕ್ಕ ಪತ್ರ ನಡೆಸುತ್ತಿದ್ದಾಗ ಹಳೆಯಂಗಡಿಯ ಇಂದಿರಾನಗರದ ನಿವಾಸಿಗಳಾದ ಅಬ್ದುಲ್ ಹಮೀದ್ ಯಾನೆ ಅಬ್ಬಿ ಮತ್ತು ಆರೀಶ್ ಎಂಬವರು ನುಗ್ಗಿ ದಾಂದಲೆ ನಡೆಸಿದ್ದಾರೆ.ಲೆಕ್ಕ ಪತ್ರಕ್ಕೆ ತಡೆಯೊಡ್ಡಿದಲ್ಲದೇ ಲೆಕ್ಕದ ಪುಸ್ತಕಗಳನ್ನು ಹರಿದು ಹಾಕಿ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆಯೊಡ್ಡಿರುವುದಾಗಿ ಮಸೀದಿಯ ಸಮಿತಿ ಅಧ್ಯಕ್ಷ ಬಿ.ಎಸ್. ಅಬ್ದುಲ್ ಖಾದರ್ ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಕೇಸು ದಾಖಲಾಗಿದೆ.
ಮನೆಗೆ ನುಗ್ಗಿ 2 ಲಕ್ಷ ಚಿನ್ನಾಭರಣ ಕಳವು
ಮಂಗಳೂರು: ಆರ್ಯಸಮಾಜ ರಸ್ತೆಯ ಜೋಯ್ಸ್ ಡಿಸೋಜ ಮನೆಗೆ ನುಗ್ಗಿದ ಕಳ್ಳರು 2 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಮೊದಲ ಮಹಡಿಯಲ್ಲಿದ್ದ ಮನೆಗೆ ಕಿಟಕಿಯ ಗ್ರಿಲ್ ಮುರಿದು ನುಗ್ಗಿದ ಕಳ್ಳರು ಮಾಸ್ಟರ್ ಬೆಡ್ರೂಮ್ ಕಪಾಟ್ ಒಡೆದು ಚಿನ್ನ ದೋಚಿದರು. ಜ.27ಕ್ಕೆ ಮನೆ ಬಿಟ್ಟು ತೆರಳಿದ್ದ ಜೋಯ್ಸ್ ಫೆ.3ಕ್ಕೆ ಮನೆಗೆ ಬಂದಿದ್ದರು. ಮನೆಯಲ್ಲಿ ಇಲ್ಲದ ವೇಳೆ ಕಳವು ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

