ಮನೆ ಆಧಾರ ಸ್ತಂಭವೇ ಕಳಚಿತು...
ಬಂಟ್ವಾಳ: ಮನೆಗೆ ಆಧಾರ ಸ್ತಂಭವಾಗಿದ್ದ ಇಬ್ಬರು ಮಕ್ಕಳು ಹಾಗೂ ಇಬ್ಬರು ಸೊಸೆಯಂದಿರನ್ನು ಕಳೆದುಕೊಂಡ ಲಕ್ಷ್ಮಣ ಪೂಜಾರಿ ಮನೆಯಲ್ಲಿ ರೋಧನ ಮುಗಿಲು ಮುಟ್ಟಿದ್ದು, ದೇವರಿಗೆ ಹಿಡಿಶಾಪಹಾಕುತ್ತಿದ್ದಾರೆ.
ಪಾರ್ಶ್ವವಾಯು ಪೀಡಿತರಾಗಿರುವ ಲಕ್ಷ್ಮಣ ಪೂಜಾರಿ ಪತ್ನಿ ಶಶಿಕಲಾ ಅವರಂತೂ ಸಾವಿನ ಸುದ್ದಿಯಿಂದ ಕಂಗೆಟ್ಟಿದ್ದಾರೆ.
ಎನನ್ ದಾಯೆ ಬುಡ್ದು ಪೋಯರ್.. ಓ ದೇವೆರೇ ನಿಕ್ ಕಣ್ಣಿಜ್ಜಾ.. (ನನ್ನ ಯಾಕೆ ಬಿಟ್ಟು ಹೋದಿರೀ... ಓ ದೇವರೇ ನಿನಗೆ ಕಣ್ಣಿಲ್ವಾ...) ಎಂದು ಮನೆಯಲ್ಲಿ ಕುಳಿತು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಮನೆಯಲ್ಲಿಯೇ ಇರುವ ಸಹೋದರರ ಕಿರಿಯ ತಂಗಿಗೂ ಅಣ್ಣಂದಿರ ಬಗ್ಗೆ ಹೆಚ್ಚು ಒಲವಂತೆ. ಪೊಲೀಯೊ ಪೀಡಿತಳಾಗಿರುವ ಈಕೆಯನ್ನು ಬಡತನ, ಕಷ್ಟ, ನಷ್ಟದ ನಡುವೆಯೂ ಪ್ರೀತಿಯಿಂದ ಬೆಳೆಸಿದ್ದರಂತೆ. ಪ್ರೀತಿಕೊಟ್ಟು ಪ್ರೀತಿ ಪಡೆದುಕೊಳ್ಳುವ ಜೀವಗಳೇ ನಾಪತ್ತೆಯಾದ ಸನ್ನಿವೇಶ ಇಲ್ಲಿ ಉಂಟಾಗಿದ್ದು, ಕುಟುಂಬವಿಡೀ ಶೋಕಸಾಗರದಲ್ಲಿ ಮುಳುಗಿದೆ.
ಅರ್ಧದಲ್ಲೇ ನಿಂತಿತು ಹೊಸಮನೆ ಕನಸು...?: ಭಾಸ್ಕರ ಪೂಜಾರಿಗೆ ಮೂವರು ಹೆಣ್ಣುಮಕ್ಕಳಿದ್ದು, ಹಿರಿಮಗಳು ಮುನ್ನಿಯನ್ನು ಮನೆಯಲ್ಲೇ ಬಿಟ್ಟು, ಇಬ್ಬರು ಹೆಣ್ಣು ಮಕ್ಕಳನ್ನು ಔತಣಕೂಟಕ್ಕೆ ಕರೆದುಕೊಂಡು ಹೋಗಿದ್ದರು.
ಆರ್ಥಿಕವಾಗಿ ಮಧ್ಯಮವರ್ಗದವರಾಗಿದ್ದ ಈ ಸಹೋದರರು ಒಂದೇ ಮನೆಯಲ್ಲಿ ವಾಸ್ತವ್ಯವಿದ್ದರು. ಕೆಲ ಸಮಯಗಳ ಹಿಂದೆಯಷ್ಟೇ ಜಗದೀಶ್ ಹೊಸ ಮನೆಯನ್ನು ಕಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಭಾಗಶಃ ಕೆಲಸ ಪೂರ್ಣಗೊಂಡಿರುವ ಇವರ ಹೊಸಮನೆ ಇದೀಗ ಅನಾಥವದಂತಿದೆ.
ತುಂಬಿದ ಮನೆ ಬರಿದಾಯಿತು..: ಲಕ್ಷ್ಮಣ ಪೂಜಾರಿ- ಶಶಿಕಲಾ ದಂಪತಿಗೆ ಮೂವರು ಗಂಡು ಮಕ್ಕಳು ಸೇರಿದಂತೆ ಒಟ್ಟು 8 ಮಂದಿ ಮಕ್ಕಳು. ವಿಕಲಚೇತನಳಾಗಿರುವ ಕಿರಿಮಗಳನ್ನು ಹೊರತು ಪಡಿಸಿದರೆ ಎಲ್ಲಾ ಮಕ್ಕಳಿಗೂ ವಿವಾಹವಾಗಿತ್ತು.ಕಿರಿಪುತ್ರ ಜಯಂತ ಪುತ್ತೂರಿನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದು, ತನ್ನ ಪತ್ನಿ ಮಕ್ಕಳ ಜೊತೆ ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿ ವಾಸ್ತವ್ಯ ಹೂಡಿದ್ದರು.
ಮಕ್ಕಳು ಬದುಕಿದ್ದೇ ಪವಾಡ..: ಅಪಘಾತದಲ್ಲಿ ಮೂವರು ಮಕ್ಕಳು ಬದುಕಿದ್ದೇ ಪವಾಡ ಎನ್ನಬಹುದು. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮುಂಭಾಗ ನೆಲಸಮವಾಗಿತ್ತು. ರಿಕ್ಷಾದ ಚಕ್ರಗಳು ಹಾಗೂ ಸೀಟು ಅನತಿ ದೂರಕ್ಕೆ ಎಸೆಯಲ್ಪಟ್ಟಿದ್ದು, ಪ್ರಯಾಣಿಕರೆಲ್ಲರೂ ರಿಕ್ಷಾದೆಡೆಯಲ್ಲಿ ಸಿಲುಕಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಹಾಗೂ ರಸ್ತೆಯಲ್ಲಿ ಪಯಣಿಸುತ್ತಿದ್ದವರು ಜಾತಿಮತಬೇಧ ಮರೆತು ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲು ನೆರವಾದರು. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ನಿಶಾನ್ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

