ಇಂದಿನಿಂದ ಗೋ ಸಮ್ಮೇಳನ
ಬೆಳ್ತಂಗಡಿ: 'ಜನಜನನೀ' ಎಂಬ ಗೋವಿನ ಉತ್ಸವ ಗೋ ಸಮ್ಮೇಳನ ಬುಧವಾರದಿಂದ 15 ರವರೆಗೆ ವೇಣೂರು ಸಮೀಪದ ಗುಂಡೂರಿ ಗ್ರಾಮದ ಬಜಿರೆ ಎಂಬಲ್ಲಿನ ಕಾವೇರಮ್ಮ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ನಡೆಯಲಿದೆ.
ತಾಲೂಕಿನ ಗ್ರಾಮೀಣ ಪ್ರದೇಶ ಗುಂಡೂರಿಯಲ್ಲಿ ಹತ್ತು ವರ್ಷಗಳ ಹಿಂದೆ ಮೋತಿರಾಮರಾವ ಅವರ ಕಲ್ಪನೆಯಲ್ಲಿ ಕಾವೇರಮ್ಮ ಅಮೃತಧಾರಾ ಗೋಶಾಲೆ ಸ್ಥಾಪಿತಗೊಂಡಿತು. ಪ್ರಸ್ತುತ 38 ದೇಸಿ ತಳಿಯ ಜಾನುವಾರುಗಳು ಈ ಗೋಶಾಲೆಯಲ್ಲಿವೆ. ಮಲೆನಾಡ ಗಿಡ್ಡ ಹಾಗೂ ಕಾಂಕ್ರೀಜ್ ತಳಿಗಳು ಇಲ್ಲಿ ಗೋರಕ್ಷಕರ ಆರೈಕೆಯೊಂದಿಗೆ ಬೆಳೆಯುತ್ತಿವೆ.
ಇದೇ ಗೋಶಾಲೆಯಿಂದ ಈಗಾಗಲೇ ಮಲೂರು, ಕುಮಟಾದ ಹೊಸಾಡ, ಗದಗದ ಹಾವಿಹಾಳ ಗೋ ಶಾಲೆಗಳಿಗೆ, ಹುಬ್ಬಳ್ಳಿಯ ಸಾವಯವ ಕೃಷಿಕೇಂದ್ರಕ್ಕೆ ಹೀಗೆ ವಿವಿಧೆಡೆಗೆ ಒಟ್ಟು 75 ಕ್ಕೂ ಹೆಚ್ಚು ಗೋವುಗಳನ್ನು ನೀಡಲಾಗಿದೆ. ಇದಲ್ಲದೆ ವೇಣೂರಿನ ಆಸುಪಾಸಿನ ಊರುಗಳ ಗೋಪ್ರೇಮಿಗಳು ಈ ಗೋಶಾಲೆಯಿಂದ ಗೋವುಗಳನ್ನು ಕೊಂಡೊಯ್ದು ಹೈನುಗಾರಿಕೆ ನಡೆಸುತ್ತಿದ್ದಾರೆ.
ಗವ್ಯೋತ್ಪನ್ನ ಘಟಕ ಸ್ಥಾಪಿಸಲು ಚಿಂತನೆ: ಸುಮಾರು ರು. 3 ಕೋಟಿ ವೆಚ್ಚದಲ್ಲಿ ಗೋಶಾಲೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ, 100ಕ್ಕೂ ಹೆಚ್ಚು ಗೋವುಗಳನ್ನು ಗೋ ಶಾಲೆಯಲ್ಲಿ ಬೆಳೆಸುವ ಹಾಗೂ ಗವ್ಯೋತ್ಪನ್ನ ಘಟಕ ಸ್ಥಾಪಿಸುವ ಯೋಜನೆಯನ್ನು ಇಲ್ಲಿ ಗೋಶಾಲೆಯ ನಿರ್ವಾಹಕರು ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಗೋ ಶಾಲೆಯ ಆವರಣದಲ್ಲಿ ಗೋಪಾಲಕೃಷ್ಣನ ಗುಡಿ ನಿರ್ಮಾಣ, 25 ಲೋಡ್ ಬೈಹುಲ್ಲು ಸಂಗ್ರಹಿಸುವ ಬೃಹತ್ ಗೋಡೌನ್ ನಿರ್ಮಾಣ, ಅತಿಥಿಗೃಹ, ಬೃಹತ್ ಗೋಬರ್ ಅನಿಲ ಘಟಕ, 2 ಎಕರೆಗಳ ಹುಲ್ಲುಗಾವಲು, ಮಹಾದ್ವಾರ, ನಂದಿ ವಿಗ್ರಹ ಕಾರ್ಯಗಳು ಪ್ರಗತಿಯಲ್ಲಿವೆ.
ಸಮ್ಮೇಳನದ ವಿಶೇಷತೆಗಳು: ಬುಧವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. 13ರಂದು ಬೆಳಗ್ಗೆ 6ರಿಂದ 108 ತೆಂಗಿನಕಾಯಿ ಗಣಹೋಮ, ಗೋಪೂಜೆ, ದೇವ ಪ್ರತಿಷ್ಠಾಂಗ ಕಾರ್ಯಕ್ರಮಗಳು, ಮಧ್ಯಾಹ್ನ ಶ್ರೀ ಗೋಪಾಲಕೃಷ್ಣ ದೇವರ ಬಿಂಬ ಸ್ಥಾಪನೆ, ಕಲಶಾಭಿಷೇಕಗಳು ನಡೆಯಲಿವೆ.
ಈ ಸಂದರ್ಭ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಉಪಸ್ಥಿತರಿರುವರು.
ಸಂಜೆ 6 ಗಂಟೆಗೆ ಧರ್ಮಸ್ಥಳ ಹರ್ಷೇಂದ್ರ ಕುಮಾರ್, ರಾಜೇಂದ್ರ ಕುಮಾರ್ ಉಪಸ್ಥಿತಿಯಲ್ಲಿ ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶ್ರೀ ಕಾಮಧೇನು ಕಥಾ ವೈಭವ: 14ರಂದು ಸಂಜೆ 6 ಗಂಟೆಗೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಪರಿಕಲ್ಪನೆಯಾದ 'ಕಾಮಧೇನು ಕಥಾ ವೈಭವ' ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮೊದಲ ಗೋ ಸಂಬಂಧಿ ವಿಚಾರಗೋಷ್ಠಿಗಳು ನಡೆಯಲಿವೆ.
15ರಂದು ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

