ದಕ್ಷಿಣ ಕನ್ನಡ

ಅಡಕೆ, ಕಾಳುಮೆಣಸು ಕಳವು

Published On :

ವಿಟ್ಲ: ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿ ಅಂಗಡಿಗೆ ನುಗ್ಗಿದ ಕಳ್ಳರು ಸಾವಿರಾರು ರು. ಮೌಲ್ಯದ ಅಡಕೆ ಹಾಗೂ ಕಾಳುಮೆಣಸು ಕದ್ದ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.  ಕುದ್ದುಪದವು ಮುಖ್ಯ ರಸ್ತೆ ಬದಿಯಲ್ಲಿರುವ ಅಬೂಬಕ್ಕರ್ ಎ.ಎಂ. ಅವರಿಗೆ ಸೇರಿದ ಅಂಗಡಿಯ ಶಟರ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಗೋಣಿ ಚೀಲದಲ್ಲಿ ಇಡಲಾದ ಅಡಕೆ, ಕಾಳು ಮೆಣಸು ಸೇರಿದಂತೆ ಒಟ್ಟು 75 ಸಾವಿರ ಮೌಲ್ಯದ ಸೊತ್ತುಗಳನ್ನು ಎಗರಿಸಿದ್ದಾರೆ.  ಅಂಗಡಿ ಮುಂಭಾಗದಲ್ಲಿ ಜೀಪು ಅಥವಾ ಆಟೋ ಚಕ್ರದ ಗುರುತುಗಳು ಕಂಡು ಬಂದಿದ್ದು, ಮೂರು ಅಥವಾ ನಾಲ್ಕು ಜನರ ತಂಡ ಈ ಕೃತ್ಯ ನಡೆಸಿರಬೇಕು ಎಂದು ಶಂಕಿಸಲಾಗಿದೆ.

ಟೆಂಪೊ ಡಿಕ್ಕಿ; ವ್ಯಕ್ತಿಗೆ ಗಾಯ
ಉಡುಪಿ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರಿಗೆ ಟೆಂಪೊ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಇಲ್ಲಿನ ಆಭರಣ ಮೋಟಾರ್ಸ್ ಎದುರು ಗುರುವಾರ ನಡೆದಿದೆ. ಗಾಯಗೊಂಡವರನ್ನು ಪಿಚ್ಚಂಡಿ ಎಂದು ಗುರುತಿಸಲಾಗಿದೆ. ಇವರು ಉಡುಪಿಯಲ್ಲಿ ಚಮ್ಮಾರ ಕೆಲಸ ಮಾಡಿಕೊಂಡಿದ್ದರು. ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗಲು ಆಭರಣ ಮೋಟಾರ್ಸ್ ಎದುರು ರಸ್ತೆ ದಾಟಲು ನಿಂತಿದ್ದಾಗ ಟೆಂಪೋ ಚಾಲಕ ಮಹಮ್ಮದ್ ಹನೀಫ್ ಎಂಬಾತ ಟೆಂಪೋವನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಪಿಚ್ಚಂಡಿ ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕೃಷ್ಣ ನೀಡಿದ ದೂರಿನಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ ಜುಗಾರಿ; ವ್ಯಕ್ತಿ ಸೆರೆ
ಕುಂದಾಪುರ: ಬೀಜಾಡಿ ಗ್ರಾಮದ ಕಾಂತೇಶ್ವರಿ ದೇವಸ್ಥಾನದ ಬಳಿ ಮಟ್ಕಾ ಜುಗಾರಿ ಆಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಗುರುವಾರ ನಡೆದಿದೆ. ಆರೋಪಿ ದಾಮೋದರ, ಇವನು ಬೀಜಾಡಿ ಗ್ರಾಮದ ಕಾಂತೇಶ್ವರಿ ದೇವಸ್ಥಾನದ ಬಳಿ ಹಣವನ್ನು ಪಣವಾಗಿಟ್ಟುಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದಾನೆಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಟ್ಕಾಜುಗಾರಿ ಆಟಕ್ಕೆ ಬಳಸಿದ 560 ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರಾಹಿಯಲ್ಲಿ ಮುಳುಗಿ ಸಾವು
ಅಮಾಸೆಬೈಲು: ಕುಂದಾಪುರದ ಎಸ್‌ಎನ್‌ಸಿ ಎಂಬ ಕಂಪೆನಿಯ ಆಡಳಿತಾಧಿಕಾರಿಯಾಗಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬರು ವಾರಾಹಿ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತರು ಸರಯೂ ಮಹತೊ (45) ಜಾರ್ಖಂಡ್‌ನ ಬಕರೋ ಜಿಲ್ಲೆಯ ನಿವಾಸಿ. ಬುಧವಾರ ಸಂಜೆ 4 ಗಂಟೆಗೆ ಮಚ್ಚಟ್ಟು ಗ್ರಾಮದ ವಾರಾಹಿ ಹೊಳೆಯಲ್ಲಿ ಸ್ನಾನ ಮಾಡಲು ಹೋದವರು ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಉದಯಕುಮಾರ್ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.