ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ಬಿದಿರು ಮೆಳೆಗೆ ಕಿಡಿಗೇಡಿಗಳಿಂದ ಬೆಂಕಿ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್ ಬಳಿ ಬಿದಿರಿನ ಮೆಳೆಗೆ ಬೆಂಕಿ ಹತ್ತಿಕೊಂಡು ಅದರ ಜ್ವಾಲೆ ಹಾಗೂ ಹೊಗೆ ಸುತ್ತಲೂ ವ್ಯಾಪಿಸಿ ಬುಧವಾರ ಸಂಜೆ ಪರಿಸರದಲ್ಲಿ ಆತಂಕ ಸ್ಥಿತಿ ನಿರ್ಮಾಣಗೊಂಡಿತ್ತು. ಬೆಂಕಿಯಿಂದ ಸುಟ್ಟು ಬಿದಿರಿನ ತುಂಡುಗಳು ರಸ್ತೆಗೆ ಬಿದ್ದು ಹೆದ್ದರಿಯಲ್ಲಿ ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು. ಅಗ್ನಿಶಾಮಕದಳ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿತು. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಕೆಲವೇ ಕ್ಷಣಗಳಲ್ಲಿ ಬೆಂಕಿ ಬಿದಿರಿನ ಮೆಳೆಯಲ್ಲಿ ಬೆಂಕಿ ಧಗಧಗನೆ ಉರಿಯಲಾರಂಭಿಸಿ ಸುತ್ತಲೂ ಬೆಳೆದಿದ್ದ ಹುಲ್ಲುಗಳಿಗೂ ವ್ಯಾಪಿಸಿ ಹೆದ್ದಾರಿವರೆಗೂ ಆಕ್ರಮಿಸಿತ್ತು.
ಇದರಿಂದ ಆತಂಕಗೊಂಡ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು.

ನಾಳೆ ರಾಷ್ಟ್ರಮಟ್ಟದ ಅಂತರ್ ಕಾಲೇಜು ಇಂಗ್ಲಿಷ್ ಸಾಹಿತ್ಯ ಉತ್ಸವ
ಬೆಳ್ತಂಗಡಿ: ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಇಂಗ್ಲಿಷ್ ಸಾಹಿತ್ಯ ಉತ್ಸವ ಜ.10ರಂದು ಉಜಿರೆ ಶ್ರೀ ಧ.ಮಂ. ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ. ಕಾಲೇಜಿನ ಇಂಗ್ಲಿಷ್ ವಿಭಾಗ ಸಂಘಟಿಸಿದ ಕಾರ್ಯಕ್ರಮದಲ್ಲಿ ಶ್ರದ್ಧಾ ಅಮಿತ್ ಬೆಂಗಳೂರು, ಮಂಗಳೂರು ವಿವಿಯ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರವಿಶಂಕರ್ ರಾವ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಯಶೋವರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಷೇಕ್ಸ್‌ಪಿಯರ್ ಸಾಹಿತ್ಯದ ಕುರಿತು ಚರ್ಚೆ, ರಸಪ್ರಶ್ನೆ, ಪ್ರತಿನಿಧಿಗಳಿಂದ ಪ್ರಬಂಧ ಮಂಡನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅಪಘಾತ; ಅಡುಗೆ ಅನಿಲ ಸಾಗಾಟ ಟ್ಯಾಂಕರ್ ಚಾಲಕ, ಕ್ಲೀನರ್ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ರಾ.ಹೆ. 75ರಲ್ಲಿ ಅಡುಗೆ ಅನಿಲ ಟ್ಯಾಂಕರ್ ಅಪಘಾತಕ್ಕೀಡಾಗಿ ಟ್ಯಾಂಕರ್ ಚಾಲಕ ತಮಿಳುನಾಡು ಮೂಲದ ವೆಂಕಟೇಶ್ ಮತ್ತು ಕ್ಲೀನರ್ ಗಣೇಶ್ ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಘಟನೆಯಿಂದ ಅನಿಲ ಸೋರಿಕೆಯಾಗಿಲ್ಲ ಎಂದು ತಿಳಿದು ಬಂದಿದ್ದು, ಹೆದ್ದಾರಿ ಸಂಚಾರಕ್ಕೂ ತೊಂದೆರೆಯಾಗಿಲ್ಲವೆಂದು ತಿಳಿದು ಬಂದಿದೆ. ನೆಲ್ಯಾಡಿ ಹೊರ ಠಾಣೆ ಪೊಲೀಸರು ಹಾಗೂ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.


ಆರೋಗ್ಯ ಸಚಿವರ ಇಂದಿನ ಕಾರ್ಯಕ್ರಮ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ 9 ರಂದು ಬೆಳಗ್ಗೆ 8.30 ಬಿಕರ್ನಕಟ್ಟೆ ಬಾಲ ಏಸು ಇಗರ್ಜಿಯಲ್ಲಿ ಧಾರ್ಮಿಕ ಕಾರ್ಯಕ್ರಮ, 9 ಗಂಟೆಗೆ ಉಳ್ಳಾಲ ಮೇಲಂಗಡಿ ಸಂಯುಕ್ತ ಪ್ರೌಢಶಾಲೆಗೆ ಶಂಕುಸ್ಥಾಪನೆ, 9.30ಕ್ಕೆ ಶಕ್ತಿನಗರ ನಾಲ್ಯಪದವು ಶಾಲೆಯಲ್ಲಿ ಕಲಿಕೋತ್ಸವ, ಸಂಜೆ 4ಕ್ಕೆ ದೇರಳಕಟ್ಟೆ ಶಾಂತಿಭಾಗ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ, 6ಕ್ಕೆ ಕಿನ್ಯಾ ಹಾಗೂ ಹರೇಕಳದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ದೇಗುಲಗಳ ಜೀರ್ಣೋದ್ಧಾರಕ್ಕೆ ಅನುದಾನ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಶಾಸಕ ಪ್ರಮೋದ್   ಮಧ್ವರಾಜ್ ಅವರ ಶಿಫಾರಸ್ಸಿನ ಮೇರೆಗೆ 25 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಅದರಲ್ಲಿ ಮಲ್ಪೆ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನ, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ, ಕರ್ಜೆ  ಶ್ರೀ ಅಬ್ಬಕ್ಕ ದಾರಗ ದುರ್ಗಾಪರಮೇಶ್ವರಿ ದೇವಸ್ಥಾನ, ಚೇರ್ಕಾಡಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನ, ಶಿವಳ್ಳಿ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಾಸ್ಥಾನಗಳ ಜೀರ್ಣೋದ್ಧಾರಕ್ಕೆ ತಲಾ 5 ಲಕ್ಷ ಮಂಜೂರಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

ಕಾಂಕ್ರಿಟ್ ರಸ್ತೆ ಉದ್ಘಾಟನೆ
ಬೆಳ್ಮಣ್: ಕಾರ್ಕಳ ತಾ.ಪಂ. ಅಧ್ಯಕ್ಷರ ಅನುದಾನ 2 ಲಕ್ಷ ಮತ್ತು ಬೆಳ್ಮಣ್ ಗ್ರಾಪಂ ಅನುದಾನದಿಂದ ನಿರ್ಮಿಸಲಾದ ಸೂಡ ಬಬ್ಬುಸ್ವಾಮಿ ದೈವಸ್ಥಾನದ ಕಾಂಕ್ರಿಟ್ ರಸ್ತೆಯನ್ನು ಕಾರ್ಕಳ ತಾಪಂ ಅಧ್ಯಕ್ಷೆ ರಶ್ಮಿ ಶೆಟ್ಟಿ ಉದ್ಘಾಟಿಸಿದರು. ಶಂಕರ ಕುಂದರ್ ಸೂಡ, ಕೋಡು ಜಯಶೀಲ ಹೆಗ್ಡೆ, ರಾಘವೇಂದ್ರ ದೇವಾಡಿಗ, ರಮೇಶ್ ಶಾಸ್ತ್ರಿ ಇದ್ದರು.
ಸಾಮೂಹಿಕ ಶನಿಪೂಜೆ
ಉಡುಪಿ: ಸೂಡಾ ಬ್ರೈಟ್ ಗ್ರೂಪ್ ಫ್ರೆಂಡ್ಸ್ ವತಿಯಿಂದ ಜರುಗಿದ 9ನೇ ವರ್ಷದ ಸಾಮೂಹಿಕ  ಶನಿಪೂಜಾ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕಾರಿಂಜಾ ದೇವಳದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕೋಡು ಜಯಶೀಲ ಹೆಗ್ಡೆ, ರಶ್ಮಿ ಶೆಟ್ಟಿ, ಬೆಳ್ಮಣ್ ಗ್ರಾಪಂ ಅಧ್ಯಕ್ಷ ಶಂಕರ ಕುಂದರ್, ಸಂಘದ ಅಧ್ಯಕ್ಷ ರಾಘವೇಂದ್ರ ದೇವಾಡಿಗ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.