ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ಇಂದು ಯುವಮೋರ್ಚಾ ಕ್ರಿಕೆಟ್
ಮಂಗಳೂರು: ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕ ವತಿಯಿಂದ ಗಂಜಿಮಠದ ಒಡ್ಡೂರು ಫಾರ್ಮ್‌ನಲ್ಲಿ “OæÞÅæÞVÛ ಯುವಕ್ fÞ}æÞVÚ’ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾಟ ಜ.11ರಂದು ನಡೆಯಲಿದೆ.
10 ತಂಡಗಳ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಇದನ್ನು ಉದ್ಘಾಟಿಸುವರು. ಉಳಿಪಾಡಿಗುತ್ತು ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸುವರು. ಬಿಜೆಪಿ ಯುವಮೋರ್ಚಾ ಪ್ರಮುಖರು ಪಾಲ್ಗೊಳ್ಳುವರು ಎಂದು ಜಿಲ್ಲಾಧ್ಯಕ್ಷ ರಂಜನ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆಯಿಂದ ಕರಾವಳಿ ಉತ್ಸವ
ಮಂಗಳೂರು: ದ.ಕ.ಜಿಲ್ಲಾಡಳಿತ ನೇತೃತ್ವದಲ್ಲಿ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಜ.12ರಿಂದ 45 ದಿನಗಳ ವರೆಗೆ ನಡೆಯುವ ಜಿಲ್ಲಾ ಕರಾವಳಿ ಉತ್ಸವ ಜರುಗಲಿದ್ದು, ಇದರಲ್ಲಿ ಆಕರ್ಷಣೀಯ ವಸ್ತುಪ್ರದರ್ಶನ ನಡೆಯಲಿದೆ ಎಂದು ಸಂಘಟಕ ಅಶೋಕ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಉತ್ಸವದಲ್ಲಿ 32 ದೊಡ್ಡ ಮಳಿಗೆಗಳು, 40 ಸಣ್ಣ ಮಳಿಗೆಗಳು, 10 ವಿಶೇಷ ಮಳಿಗೆಗಳಿಂದ ಕೂಡಿರುವ ಈ ವಸ್ತುಪ್ರದರ್ಶನದಲ್ಲಿ ನಾನಾ ಪ್ರಕಾರಗಳು ವಸ್ತುಗಳು ಮಾರಾಟಕ್ಕಿವೆ. ಗ್ರಾಹಕರ ಅಭಿಲಾಷೆಗೆ ತಕ್ಕಂತೆ, ಕೈಗೆಟಕುವ ದರದಲ್ಲಿ ವಸ್ತುಗಳು ಲಭ್ಯವಿರಲಿದೆ. ಹ್ಯಾಂಡ್‌ಲೂಮ್ಸ್, ಪ್ಲಾಸ್ಟಿಕ್ ಉತ್ಪನ್ನಗಳು, ಎಲ್ಲ ರೀತಿಯ ಗೃಹೋಪಯೋಗಿ ವಸ್ತುಗಳು, ಕುಸುರಿ  ಕಲಾಪ್ರಕಾರಗಳು ಸೇರಿದಂತೆ ವಿವಿಧ ವಸ್ತುಗಳು ದೊರಕಲಿದೆ.
ಝಗಮಗಿಸುವ ವಸ್ತುಪ್ರದರ್ಶನ, ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳು ಹಾಗೂ ಯುವ ಸಮೂಹಕ್ಕೆ ಅಮ್ಯೂಸ್‌ಮೆಂಟ್. ಟೊರ ಟೊರ, ಡ್ರ್ಯಾಗನ್ ಟ್ರೈನ್, ಕೊಲಂಬಸ್, ಝಿಗ್ ಝಾಗ್, ಚಾಂದ್ ತಾರ, ಅಕ್ಟೋಪಸ್ ಸೇರಿದಂತೆ ನಾನಾ ರೀತಿಯ ವಿಶೇಷತೆಗಳು ಈ ಬಾರಿಯ ಪ್ರದರ್ಶನದಲ್ಲಿರಲಿದೆ ಎಂದರು.

ನಾಳೆ ಬೃಹತ್ ಬೈಕ್ ರ್ಯಾಲಿ
ಬಂಟ್ವಾಳ: ಬಿ.ಸಿ. ರೋಡ್‌ನಲ್ಲಿ ಜ.19ರಂದು ನಡೆಯಲಿರುವ ಯುವವಾಹಿನಿ ತಾಲೂಕು ಘಟಕದ ರಜತ ಸಂಭ್ರಮ ಯುವ ಬಿಲ್ಲವ ಸಮಾವೇಶದ ಹಿನ್ನೆಲೆಯಲ್ಲಿ ಜ.12ರಂದು ಬೃಹತ್ ಬೈಕ್ ರ್ಯಾಲಿ ನಡೆಯಲಿದೆ ಎಂದು ಸಂಚಾಲಕ ಪ್ರಕಾಶ್ ಅಂಚನ್ ತಿಳಿಸಿದ್ದಾರೆ.  
ಬಿ.ಸಿ. ರೋಡ್‌ನ ಗಾಣದಪಡ್ಪು ಶ್ರೀ ನಾರಾಯಣ ಗುರು ಮಂದಿರದ ವಠಾರದಿಂದ ಬೈಕ್ ರ್ಯಾಲಿಗೆ ತಾಲೂಕಿನ ಬಿಲ್ಲವ ಮುಖಂಡರು ಚಾಲನೆ ನೀಡಲಿದ್ದಾರೆ ಎಂದರು. ಗಾಣದಪಡ್ಪುವಿನಿಂದ ಆರಂಭಗೊಳ್ಳುವ ಬೈಕ್ ರ್ಯಾಲಿ ಬಂಟ್ವಾಳ ಬೈಪಾಸ್ ಮೂಲಕ ಸಾಗಿ ಪೇಟೆಯಾಗಿ ಬಂದು ಮೆಲ್ಕಾರ್ ಕಲ್ಲಡ್ಕವರೆಗೆ ಸಾಗಲಿದೆ. ಅಲ್ಲಿಂದ ವಾಪಾಸ್ ಬಿ.ಸಿ. ರೋಡ್, ತುಂಬೆ, ಫರಂಗಿಪೇಟೆಯವರೆಗೆ ತೆರಳಿ ವಾಪಾಸ್ ಅದೇ ರಸ್ತೆಯ ಮೂಲಕ ಆಗಮಿಸಿ ಗಾಣದಪಡ್ಪು ನಾರಾಯಣಗುರು ಮಂದಿರದ ಬಳಿ ಸಮಾಪನಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಿಲ್ಲಿ ವಿವರಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಶದ್ ದರ್ಬೆ
ಪುತ್ತೂರು: ಪುತ್ತೂರು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊದಿನ್ ಅರ್ಶದ್ ದರ್ಬೆ ಆಯ್ಕೆಯಾಗಿದ್ದಾರೆ. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷತೆಗಾಗಿ ಗುರುವಾರ ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ಮತದಾನ ನಡೆದಿತ್ತು. ಬೂತ್ ಮಟ್ಟದ ಒಟ್ಟು 140 ಮಂದಿ ಪದಾಧಿಕಾರಿಗಳ ಪೈಕಿ 138 ಮಂದಿ ಮತ ಚಲಾಯಿಸಿದ್ದರು. ಮತ ಎಣಿಕೆ ಕಾರ್ಯ ಶುಕ್ರವಾರ ಸಂಜೆ ಮಂಗಳೂರಿನಲ್ಲಿ ನಡೆಯಿತು. ಅಭ್ಯರ್ಥಿ ಮೊದಿನ್ ಅರ್ಶದ್ ದರ್ಬೆ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ ಮತ್ತು ನಝೀರ್ ಬೆದ್ರೋಡಿ ಸ್ಪರ್ಧಾ ಕಣದಲ್ಲಿದ್ದರು. ಅರ್ಶದ್ ಮತ್ತು ಕಾರ್ತಿಕ್ ರೈ ತಲಾ 65 ಮತಗಳನ್ನು ಗಳಿಸಿದ್ದು, ನಝೀರ್ 8 ಮತ ಪಡೆದಿದ್ದರು. ಅರ್ಶದ್ ಮತ್ತು ಕಾರ್ತಿಕ ಸಮಾನ ಮತ ಪಡೆದ ಹಿನ್ನೆಲೆಯಲ್ಲಿ ಟಾಸ್ ಮೂಲಕ ಅರ್ಶದ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕಾರ್ತಿಕ್ ರೈ ನೇಮಕಗೊಂಡರು.

ಕೇನ್ಯ: ಇಂದಿನಿಂದ ಬ್ರಹ್ಮಕಲಶೋತ್ಸವ
ಸುಬ್ರಹ್ಮಣ್ಯ; ಕೇನ್ಯದ ಶ್ರೀ ವಿಷ್ಣುಮೂರ್ತಿ ದೈವಸ್ಥಾನವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ.11ರಿಂದ 13ರವರೆಗೆ ನಡೆಯಲಿದೆ. 11ರಂದು ಬೆಳಗ್ಗೆ ಹೊರೆಕಾಣಿಕೆ ಆಗಮನವಾಗಲಿದ್ದು, ಸಂಜೆ ಸಾಮೂಹಿಕ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ಕೂಪ ಶಾಂತಿ, ರಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ಪ್ರಾಕಾರ ಬಲಿ, ಮಹಾಪೂಜೆ ನಡೆಯಲಿದೆ. 12ರಂದು ಬೆಳಗ್ಗೆ 8ರಿಂದ ಗಣಹೋಮ, ಪವಮಾನ ಹೋಮ, ಬಿಂಬಶುದ್ಧಿ, ಕಲಶಾಭಿಷೇಕ, ಬಿಂಬಶಯಾಧಿವಾಸ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸಚಿವ ವಿನಯಕುಮಾರ್ ಸೊರಕೆ, ಶಾಸಕ ಅಂಗಾರ ಮತ್ತು ಶಕುಂತಳಾ ಶೆಟ್ಟಿ, ಜಿಪಂ ಸದಸ್ಯ ದೇವರಾಜ್ ಕೆ.ಎಸ್, ಪುತ್ತೂರು ಸಹಾಯಕ ಆಯುಕ್ತ ಕೃಷ್ಣಮೂರ್ತಿ, ಸವಣೂರು ಸೀತಾರಾಮ ರೈ, ಅಶೋಕ್ ಕುಮಾರ್ ರೈ, ಲತಾ ಪಿ.ಎಸ್, ಪ್ರವೀಣ್ ಕುಮಾರ್ ಶೆಟ್ಟಿ. 13ರಂದು ಬೆಳಗ್ಗೆ 5.30ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ವಿಷ್ಣುಮೂರ್ತಿ ದೈವದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಗುಳಿಗ ದೈವದ ಪ್ರತಿಷ್ಠೆ, ಕಲಾಶಾಭಿಷೇಕ ನಡೆಯಲಿದೆ.

ನಾಳೆ ವಿಚಾರ ಸಂಕಿರಣ
ಮಂಗಳೂರು: ನಿಟ್ಟೆ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡಮಿಯ ಸೈಕಿಯಾಟ್ರಿಕ್ ವಿಭಾಗ, ನಿಟ್ಟೆ ವಿವಿ, ಯುನೆಸ್ಕೊ ಚೇರ್ ಇನ್ ಬಯೋಎಥಿಕ್ಸ್ ಸೌತ್ ಇಂಡಿಯಾ ವಿಭಾಗ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿನ ಜಾಗತಿಕ ಸೈಕಿಯಾಟ್ರಿಕ್ ಅಸೋಸಿಯೇಶನ್ ಸಂಯೋಜನೆಯಲ್ಲಿ ಜ.12ರಂದು ಫಾದರ್ ಮುಲ್ಲರ್ಸ್ ದಶಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟಕ ಡಾ.ಸತೀಶ್ ರಾವ್ ಮಾತನಾಡಿ, ಬೆಳಗ್ಗೆ 9ಕ್ಕೆ ನಿಟ್ಟೆ ವಿವಿ ಕುಲಪತಿ ಡಾ.ವಿನಯ ಹೆಗ್ಡೆ ಅತಿಥಿಯಾಗಿ ಪಾಲ್ಗೊಳ್ಳುವರು. ಫಾದರ್ ಮುಲ್ಲರ್ಸ್ ಆಸ್ಪತ್ರೆ ಆಡಳಿತ ನಿರ್ದೇಶಕ ರೆ.ಫಾ.ಪ್ಯಾಟ್ರಿಕ್ ರೋಡ್ರಿಗಸ್ ಅಧ್ಯಕ್ಷತೆ ವಹಿಸುವರು. ವಿದೇಶ ಸೇರಿದಂತೆ ನಾನಾ ಭಾಗಗಳಿಂದ 165ಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.