ಸುದ್ದಿ ಸಂಕ್ಷೇಪ
ಸೇನಾ ನೇಮಕಾತಿ ರ್ಯಾಲಿ
ಮಂಗಳೂರು: ಸೇನಾ ನೇಮಕಾತಿ ಕಚೇರಿ ವತಿಯಿಂದ ಸೇನೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸೇನಾ ರ್ಯಾಲಿಯು ಫೆ. 10 ರಿಂದ 17 ರವರೆಗೆ ಕಾರವಾರ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ 0824-2450169 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಾಳೆಯಿಂದ ಚೆಸ್ ಕೂಟ
ಮಂಗಳೂರು: ಕಿಂಗ್ಸ್ ಅಕಾಡೆಮಿ ವತಿಯಿಂದ ಜ. 24 ರಿಂದ 26ರವರೆಗೆ ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ನಡೆಯಲಿದೆ. ಜ. 24 ರಂದು ಬೆಳಗ್ಗೆ 11ಕ್ಕೆ ಪ್ರಾರಂಭವಾಗುವ ಪಂದ್ಯಾವಳಿಯನ್ನು ದ.ಕ. ಜಿಲ್ಲಾ ಮೀನು ಮಾರ್ಕೆಟಿಂಗ್ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಉದ್ಘಾಟಿಸುವರು. ಚಾರ್ಟೆಡ್ ಅಕೌಂಟೆಂಟ್ ಕೆ.ಎಸ್. ಕಾಮತ್, ವಕೀಲರಾದ ಪಿ.ಪಿ. ಹೆಗ್ಡೆ, ಆನಂದ್ ಬೆಂಗ್ರೆ ಪಾಲ್ಗೊಳ್ಳುವರು ಎಂದು ಅಕಾಡೆಮಿ ಸಲಹೆಗಾರ ರಾಮಚಂದರ್ ಬೈಕಂಪಾಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸ್ಪರ್ಧೆಯಲ್ಲಿ 500 ಮಂದಿ ಪಾಲ್ಗೊಳ್ಳಲಿದ್ದು, ಒಟ್ಟು ವಿಜೇತ ಸ್ಪರ್ಧಾಳುಗಳಿಗೆ ರು. 70 ಸಾವಿರ ನಗದು, ಟ್ರೋಫಿ ನೀಡಲಾಗುತ್ತದೆ. ಜ. 26 ರಂದು ನಡೆಯುವ ಸಮಾರೋಪದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಹುಮಾನ ವಿತರಿಸುವರು ಎಂದರು. ಪ್ರಧಾನ ತೀರ್ಪುಗಾರ ಪ್ರಸನ್ನ ರಾವ್ ಬೋಳೂರು, ಅಧ್ಯಕ್ಷ ಪ್ರವೀಣ್ ಕಾಮತ್, ಲೋಕೆಶ್ ಬೆಂಗ್ರೆ ಇದ್ದರು.
ನಾಳೆಯಿಂದ ಚಿತ್ರ ಪ್ರದರ್ಶನ
ಮಂಗಳೂರು: ಕೆನಡಿಯನ್ ಚಿತ್ರಕಲಾವಿದೆ, ಮೂಲತಃ ಮಂಗಳೂರಿನವರಾದ ಕೋಕಿಲಾ ಅವರ ಚಿತ್ರಕಲಾ ಪ್ರದರ್ಶನವು ಜ. 24 ರಿಂದ 27ರವರೆಗೆ ಬಲ್ಲಾಳ್ಬಾಗ್ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿದೆ. ಕಲಾವಿದೆ ತನ್ನ ಚಿತ್ರಕಲಾ ಪ್ರದರ್ಶನದ ಮೂಲಕ ತನ್ನ ಬಾಲ್ಯದ ನೆನಪಿಗೆ ಬಣ್ಣ ನೀಡಿದ್ದಾರೆ. ಪ್ರದರ್ಶನವನ್ನು ಜ. 24 ರಂದು ಸಂಜೆ 5 ಕ್ಕೆ ಡಾ.ಎಂ.ವಿ ಶೆಟ್ಟಿ ಮೆಮೋರಿಯಲ್ ಟ್ರಸ್ಟಿ ಡಾ. ಹಿಮಾ ಉರ್ಮಿಳಾ ಶೆಟ್ಟಿ ಉದ್ಘಾಟಿಸುವರು ಎಂದು ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬೆಳಗ್ಗೆ 9.30 ರಿಂದ ರಾತ್ರಿ 7.30ರವರೆಗೆ ಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ ಎಂದರು.
ಲಾರಿ-ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಬಂಟ್ವಾಳ: ಇಲ್ಲಿಗೆ ಸಮೀಪದ ಅಣ್ಣಳಿಕೆ ತಿರುವಿನಲ್ಲಿ ಲಾರಿ-ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಬಂಟ್ವಾಳ ಕೆಳಗಿನಪೇಟೆ ನಿವಾಸಿ ಪದ್ಮನಾಭ ಆಚಾರ್ಯ (60) ಮೃತರು. ಇವರು ಮನೆ ಸಮೀಪದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಎಲೆಕ್ಟ್ರಿಶಿಯನ್ ವೃತ್ತಿ ನಡೆಸುತ್ತಿದ್ದರು. ಬೆಳಗ್ಗೆ 9.15ರ ವೇಳೆಗೆ ಮೂಡುಬಿದಿರೆ ಕಡೆಯಿಂದ ಬಂಟ್ವಾಳದತ್ತ ತಮ್ಮ ಬೈಕ್ನಲ್ಲಿ ಬರುತ್ತಿದ್ದಾಗ ಎದುರಿನಿಂದ ಧಾವಿಸಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಅವರ ತಲೆಯಲ್ಲಿದ್ದ ಹೆಲ್ಮೆಟ್ ದೂರ ಹಾರಿ ಬಿದ್ದಿದ್ದು, ಇವರು ರಸ್ತೆಗೆ ಕವಚಿ ಬಿದ್ದು ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯ ಉಂಟಾಯಿತು. ತಕ್ಷಣ ಸ್ಥಳಿಯರು ಆಟೋರಿಕ್ಷಾದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ಅದಾಗಲೇ ಅವರು ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಸಂಚಾರ ವ್ಯತ್ಯಯ: ಘಟನೆಯಿಂದಾಗಿ ಮೂಡುಬಿದಿರೆ-ಬಂಟ್ವಾಳ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆ ನಡೆದು ಒಂದೂವರೆ ತಾಸು ಕಳೆದರೂ ಪೊಲೀಸರು ಸ್ಥಳಕ್ಕೆ ಆಗಮಿಸಲಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

