ದಕ್ಷಿಣ ಕನ್ನಡ

ಸುದ್ದಿಸಂಕ್ಷೇಪ

Published On :

ಇಂದು, ನಾಳೆ 'ಕರಾಟೆ ಚಾಂಪಿಯನ್‌' ಸ್ಪರ್ಧೆ
ಮಂಗಳೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಜ. 23 ಮತ್ತು 24ರಂದು ಕುದ್ರೋಳಿ ಕೊರಗಪ್ಪ ಸಂಸ್ಮರಣೆ ಸಭಾಂಗಣದಲ್ಲಿ ರಾಜ್ಯಮಟ್ಟದ ಅಂತರ್ ಶಾಲೆ-ಕಾಲೇಜು 'ಕರಾಟೆ ಚಾಂಪಿಯನ್‌ಶಿಪ್‌' ನಡೆಯಲಿದೆ. ಕಾರ್ಯಕ್ರಮವನ್ನು ಜ. 23 ರಂದು ಸಂಜೆ 4 ಗಂಟೆಗೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಉದ್ಘಾಟಿಸುವರು.
ಕ್ರೀಡಾ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಶಾಸಕ ಬಿ.ಎ. ಮೈದಿನ್ ಬಾವ, ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಶ್ರೀ ದೇವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಸದಾನಂದ ಶೆಟ್ಟಿ ಪಾಲ್ಗೊಳ್ಳುವರು ಎಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಸ್ಪರ್ಧೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಮೂರು ವಿಭಾಗಗಳಿವೆ. ಪ್ರತಿ ವಿಭಾಗದಲ್ಲಿ ಕಟಾ ಮತ್ತು ಕುಮಿಟೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
 ಜ. 25 ರಂದು ಸಂಜೆ 6ಕ್ಕೆ ನಡೆಯುವ ಸಮಾರೋಪದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಾಜಿ ಸಚಿವರಾದ ಕೃಷ್ಣ ಪಾಲೆಮಾರ್, ಬಿ. ನಾಗರಾಜ್ ಶೆಟ್ಟಿ ಪಾಲ್ಗೊಳ್ಳುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಸಂಘಧ ಸಂಘಟನಾ ಸಮಿತಿ ಅಧ್ಯಕ್ಷ ವಿ. ರಾಜರತ್ನ ಸನಿಲ್, ಕ್ರೀಡಾ ಕಾರ್ಯದರ್ಶಿ ಪ್ರತೀಕ್ ಯು ಪೂಜಾರಿ ಇದ್ದರು.
ಇಂದು ಕಲಶಾಭಿಷೇಕ ಸಂಪನ್ನ
ಬೆಳ್ತಂಗಡಿ: ಗೇರುಕಟ್ಟೆ ಸನಿಹದ ನಾಳ ಶ್ರೀದುರ್ಗಾಪರಮೇಶ್ವರೀ ದೇವಿಗೆ ಗುರುವಾರ ಬೆಳಗ್ಗೆ 8.30ರ ಕುಂಭ ಲಗ್ನದಲ್ಲಿ ಬ್ರಹ್ಮಕುಂಭ ಕಲಶಾಭಿಷೇಕ ಸಂಪನ್ನಗೊಳ್ಳಲಿದೆ. ಬೆಳಗ್ಗೆ 10 ಗಂಟೆಗೆ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ಸುಗಮ ಸಂಗೀತ, ಮಧ್ಯಾಹ್ನ 2 ಗಂಟೆಗೆ ಶ್ರೀ ರಾಮಾಂಜನೇಯ ಮಹಿಳಾ ಯಕ್ಷಗಾನ ಮಂಡಳಿ ಬೋಳುವಾರು ಇವರಿಂದ ಯಕ್ಷಗಾನ ತಾಳಮದ್ದಲೆ, ಸಂಜೆ 4.30ಕ್ಕೆ ಶ್ರೀ ಸತ್ಯಸಾಯಿ ಸೇವಾಕ್ಷೇತ್ರ ಹಳೆಕೋಟೆ, ಬೆಳ್ತಂಗಡಿ ಇವರಿಂದ ಭಜನಾ ಸತ್ಸಂಗ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಶ್ರೀ ಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಉಜಿರೆ ಎಸ್‌ಡಿಎಂ ಕಾಲೇಜಿನ ಡಾ.ಬಿ. ಯಶೋವರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಕಟೀಲು ಕ್ಷೇತ್ರದ ಅನುವಂಶೀಯ ಅರ್ಚಕ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅತಿಥಿಗಳಾಗಿರುತ್ತಾರೆ. ಸಭಾ ಕಾರ್ಯಕ್ರಮದ ಬಳಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಸಾಂಸ್ಕೃಕ ವೇದಿಕೆ ಕುಳಾಯಿ ಇವರಿಂದ ತುಳುನಾಡ ಸಂಸ್ಕೃತಿ ಪ್ರಸ್ತುತಗೊಳ್ಳಲಿದೆ.
ಇಂದು ಪ್ರಚಾರ ಸಮ್ಮೇಳನ
ಪುತ್ತೂರು: ಜಾಮಿಅ ಸಅದಿಯ್ಯಾ ಕಾಲೇಜ್‌ನ 44ನೇ ವಾರ್ಷಿಕ ಹಾಗೂ ಸನದುದಾನ ಕಾರ್ಯಕ್ರಮದ ಅಂಗವಾಗಿ ಜ.23ರಂದು ಪುತ್ತೂರಿನಲ್ಲಿ ಪ್ರಚಾರ ಸಮ್ಮೇಳನ, ಸನ್ಮಾನ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಪುತ್ತೂರು ಮಜ್ಲಿಸ್ ಸಅದಿಯ್ಯಿನ್ ಅಧ್ಯಕ್ಷ ಮಹಮ್ಮದ್ ರಫೀಕ್ ಸಅದಿ ತಿಳಿಸಿದ್ದಾರೆ.  ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಚಾರ ಸಮ್ಮೇಳನದ ಅಂಗವಾಗಿ ಜ.20ರಂದು ಪೂರ್ವಾಹ್ನ ಪುತ್ತೂರಿನ ರೋಟರಿ ಸಭಾಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಶಿಬಿರವನ್ನು ಪುತ್ತೂರು ವಲಯ ಡಿವೈಎಸ್ಪಿ ಎಚ್.ಡಿ. ಮೆಂಡೋನ್ಸಾ ಉದ್ಘಾಟಿಸಲಿದ್ದಾರೆ. ಜಂ ಇಯ್ಯತ್ತುಲ್ ಉಮಮಾ ಪುತ್ತೂರು ಘಟಕದ ಅಧ್ಯಕ್ಷ ಮಹಮ್ಮದಲಿ ಫೈಝಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಅಂದು ಸಂಜೆ ಪುರಭವನದಲ್ಲಿ ನಡೆಯಲಿರುವ ಪ್ರಚಾರ ಸಮ್ಮೇಳನ ಮತ್ತು ಸನ್ಮಾನ ಕಾರ್ಯಕ್ರಮವನ್ನು ರಾಜ್ಯ ಎಸ್‌ವೈಎಸ್ ಅಧ್ಯಕ್ಷ ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡು ಉದ್ಘಾಟಿಸಲಿದ್ದಾರೆ.
ಭಿಕ್ಷಾಟನೆಯಿಂದ ನಾಲ್ವರು ಮಕ್ಕಳು ಮುಕ್ತ
ಮಂಗಳೂರು: ಹೆತ್ತವರೊಂದಿಗೆ ಭಿಕ್ಷಾಟನೆ ನಡೆಸುತ್ತಿದ್ದ ನಾಲ್ವರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ತಂಡ ಪತ್ತೆ ಮಾಡಿದ್ದು, ಅವರಿಗೆ ಸೂಕ್ತ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾದ ವಿದ್ಯಮಾನ ಬುಧವಾರ ನಡೆದಿದೆ. ಮೂಲತಃ ಬೆಳ್ತಂಗಡಿ ನಿವಾಸಿಯಾದ ದಂಪತಿಗೆ ನಾಲ್ವರು ಮಕ್ಕಳು. ನಾರಾವಿಯಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ ಬಳಿಕ ಸೂಕ್ತ ನೆಲೆ ಇಲ್ಲದೆ ಮಂಗಳೂರಿಗೆ ಬಂದಿತ್ತು. ಹಂಪನಕಟ್ಟೆಯ ವಸತಿಗೃಹದಲ್ಲಿ ಕಳೆದ 4 ತಿಂಗಳಿಂದ ಕಡಿಮೆ ಬಾಡಿಗೆಯಲ್ಲಿ ವಾಸಿಸುತ್ತಿತ್ತು.
ಜೀವನೋಪಾಯಕ್ಕಾಗಿ ಹಗಲು ಹೊತ್ತು ತಂದೆ ಅಥವಾ ತಾಯಿ ಹೊರಗೆ ಭಿಕ್ಷಾಟನೆಗೆ ಹೋಗುತ್ತಿದ್ದರು. ಈ ವಿಚಾರ ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ಬಂದಿತ್ತು. ಸಮಿತಿ ತಂಡ ಕಾರ್ಯಾಚರಣೆ ನಡೆಸಿ ತಂದೆ, ತಾಯಿ ಜತೆ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನು ರಕ್ಷಿಸಿದೆ.
10, 8, 5 ಹಾಗೂ ಒಂದು ವರ್ಷದ ಮಕ್ಕಳಿದ್ದು, ಇವರಿಗೆ ಅವರವರ ವಯಸ್ಸಿಗೆ ತಕ್ಕಂತೆ ಸೂಕ್ತ ಏರ್ಪಾಟು ಮಾಡಲು ಮುಂದಾಗಿದೆ. ಮೂರನೇ ಮಗುವಿಗೆ ಹೃದಯ ತೊಂದರೆ ಇದ್ದು, ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಕೊಡಿಸಲು ಶಿಫಾರಸ್ಸು ಮಾಡಲು ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷೆ ಆಶಾ ನಾಯಕ್ ತಿಳಿಸಿದ್ದಾರೆ.
ಇಂದು ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ
ಬೆಳ್ತಂಗಡಿ:  ಕಾಶಿಪಟ್ಣ-ಕೇಳ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಗುರುವಾರ ಪೂರ್ವಾಹ್ನ ಶ್ರೀ ಮಹಾಗಣಪತಿ, ಶ್ರೀ ದುರ್ಗಾಸಹಿತ ಶ್ರೀ ಪಂಚಲಿಂಗೇಶ್ವರ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧಲೇಪನ, ಪ್ರತಿಷ್ಠಾ ಬಲಿ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ವಾಸ್ತು ಶಿಲ್ಪ ಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್ ಉಪನ್ಯಾಸ ನೀಡಲಿದ್ದಾರೆ. ಬಳಿಕ, ಶ್ರೀ ಕಟೀಲು ಮೇಳದವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಯುವಕಗೆ ಥಳಿತ
ವಿಟ್ಲ:  ಯುವಕನೊಬ್ಬ ಭಿನ್ನ ಕೋಮಿನ ವಿದ್ಯಾರ್ಥಿನಿಯನ್ನು ಬೈಕ್‌ನಲ್ಲಿ ಕರೆದುಕೊಂಡ ಹೋದ ವಿಚಾರವಾಗಿ ಯುವಕರ ತಂಡ ಆತನಿಗೆ ಹಲ್ಲೆ ನಡೆಸಿ ಪೊಲೀಸರ ವಶಕ್ಕೆ ನೀಡಿದ ಘಟನೆ ಪುಣಚ ಗ್ರಾಮದ ತೋರಣಕಟ್ಟೆ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.  ವಿಟ್ಲ ಸಮೀಪದ ಮಂಗಳಪದವು ಎಂಬಲ್ಲಿಯ ಯುವಕ ಪುಣಚ ಗ್ರಾಮದ, ವಿಟ್ಲದ ಸ್ಥಳೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ವಿಟ್ಲ ಜಾತ್ರೆಗೆಂದು ಬೈಕಿನಲ್ಲಿ ಕೂರಿಸಿಕೊಂಡು ತೆರಳುತ್ತ್‌ದಾಗ ಹಿಗ್ಗಾಮುಗ್ಗಾ ಥಳಿಸಿ ವಿಟ್ಲ ಪೊಲೀಸರಿಗೊಪ್ಪಿಸಿದ್ದಾರೆ. ವಿಟ್ಲ ಪೊಲೀಸರು ಯುವಕನ ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.