ದಕ್ಷಿಣ ಕನ್ನಡ

ಶಾಸಕರಾಗಿ ಸಂಸದರಾದ್ರು, ಸ್ಥಾನ ಕಳ್ಕೊಂಡ್ರು

Published On :

ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಎಲ್ಲ ಶಾಸಕರಿಗೆ ಸಿಗುವುದಿಲ್ಲ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಇದುವರೆಗೆ 8 ಮಂದಿ ಶಾಸಕರಿಗೆ ಸಂಸದರಾಗಿ ಭಡ್ತಿ ಹೊಂದುವ ಅವಕಾಶ ಸಿಕ್ಕಿದೆ. ಹಾಗೆಯೇ 4 ಮಂದಿ ಸಂಸದರು ಶಾಸಕರಾಗಿ, ವಿಧಾನಪರಿಷತ್ತು ಸದಸ್ಯರಾಗಿ ರಾಜ್ಯ ರಾಜಕಾರಣಕ್ಕೆ ಸೀಮಿತಗೊಂಡಿದ್ದಾರೆ.
ಕೆ.ಕೆ. ಶೆಟ್ಟಿ, ಡಿ.ವಿ. ಸದಾನಂದ ಗೌಡ, ಜಯಪ್ರಕಾಶ್ ಹೆಗ್ಡೆ, ಧನಂಜಯ ಕುಮಾರ್, ವಿನಯ ಕುಮಾರ್ ಸೊರಕೆ, ಮನೋರಮಾ ಮಧ್ವರಾಜ್, ಐ.ಎಂ. ಜಯರಾಮ ಶೆಟ್ಟಿ, ವೀರಪ್ಪ ಮೊಯ್ಲಿ ಈ 8 ಮಂದಿ ಈಗ ಬೇರೆ ಬೇರೆ ಸ್ಥಾನಗಳಲ್ಲಿದ್ದಾರೆ. ಇನ್ನೂ ಕೆಲವರು ಹುದ್ದೆ ವಂಚಿತರು.
ಉಡುಪಿಯ ಪ್ರಥಮ ಶಾಸಕ ಟಿ.ಎ.ಪೈ 1977ರಲ್ಲಿ ಸಂಸದರಾಗಿ ಕೇಂದ್ರ ಸಚಿವರಾದರು. 1956ರಿಂದ ಎರಡು ಸಲ ವಿಧಾನ ಪರಿಷತ್ತು ಸದಸ್ಯರಾಗಿದ್ದ ಕಾಂಗ್ರೆಸ್‌ನ ಕೆ.ಕೆ.ಶೆಟ್ಟಿ 1971ರಲ್ಲಿ ಮಂಗಳೂರು ಸಂಸದರಾದರು. ಎರಡು ಸಲ ಪುತ್ತೂರು ಶಾಸಕರಾಗಿದ್ದ ಡೀವಿ ನಂತರ ಮಂಗಳೂರು ಸಂಸದರಾದರು. ಅಲ್ಲಿಂದ ಉಡುಪಿಗೆ ನೆಗೆದು ಅಲ್ಲಿಯೂ ಸಂಸದರಾದರು. ಬಯಸದೇ ಬಂದ ಮುಖ್ಯಮಂತ್ರಿ ಗಾದಿಗಾಗಿ ಸಂಸತ್ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆ ಬಳಿಕ ವಿಧಾನ ಪರಿಷತ್ತು ಸದಸ್ಯರಾದರು. ಈ ಬಾರಿ ಬೆಂಗಳೂರು ಉತ್ತರದಲ್ಲಿ ಲೋಕಸಭೆ ಬಾಗಿಲು ತಟ್ಟುತ್ತಿದ್ದಾರೆ.
1983ರಲ್ಲಿ ಮಂಗಳೂರಲ್ಲಿ ಬಿಜೆಪಿ ಶಾಸಕರಾಗಿದ್ದ ಧನಂಜಯ ಕುಮಾರ್ 1991ರಲ್ಲಿ ಸಂಸತ್‌ಗೆ ಸ್ಪರ್ಧಿಸಿದರು. ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪ್ರಥಮ ಖಾತೆ ತೆರೆದ ಹೆಗ್ಗಳಿಕೆ ಇವರ ಹೆಸರಲ್ಲಿದೆ. ಒಟ್ಟು ನಾಲ್ಕು ಬಾರಿ ಸಂಸದರಾಗಿದ್ದ ಧನಂಜಯ ಕುಮಾರ್ ಈಗ ಜೆಡಿಎಸ್ ಬಾಗಿಲು ತಟ್ಟುತ್ತಿದ್ದು, ದ.ಕ. ಅಥವಾ ಉಡುಪಿ ಕ್ಷೇತ್ರದಿಂದ ಸಂಸತ್ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದಾರೆ.
ಒಂದು ಬಾರಿ ಜನತಾದಳದಲ್ಲಿ, ಮತ್ತೆರಡು ಬಾರಿ ಬ್ರಹ್ಮಾವರದಲ್ಲಿ ಪಕ್ಷೇತರ ಶಾಸಕರಾಗಿದ್ದ ಜಯಪ್ರಕಾಶ್ ಹೆಗ್ಡೆಗೆ ಅದೃಷ್ಟ ಖುಲಾಯಿಸಿದ್ದು ಕಾಂಗ್ರೆಸ್ ಸೇರಿದಾಗ. 2013ರಲ್ಲಿ ಉಡುಪಿ ಚುನಾವಣೆಯಲ್ಲಿ ಜಯಗಳಿಸಿದರು. ಈಗ ಎರಡನೇ ಬಾರಿ ಅದೃಷ್ಟ ಪರೀಕ್ಷಿಸಲಿದ್ದಾರೆ. ವಿನಯ ಕುಮಾರ್ ಸೊರಕೆ 2 ಬಾರಿ ಪುತ್ತೂರಲ್ಲಿ ಶಾಸಕರಾಗಿದ್ದರು. ಅಲ್ಲಿಂದ ಮಂಗಳೂರಲ್ಲಿ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿದರೂ ಗೆಲವು ಸಿಗಲಿಲ್ಲ, ಮತ್ತೆ ಉಡುಪಿಯಲ್ಲಿ 99ರಲ್ಲಿ ಸಂಸದರಾದರು. ಮೊನ್ನೆಯ ವಿಧಾನಸಭೆ ಚುನಾವಣೆಯಲ್ಲಿ ಕಾಪು ಶಾಸಕನಾಗಿ ರಾಜ್ಯ ಸರ್ಕಾರದಲ್ಲಿ ಈಗ ನಗರಾಭಿವೃದ್ಧಿ ಸಚಿವ.
ಉಡುಪಿಯಲ್ಲಿ 4 ಬಾರಿ ಕಾಂಗ್ರೆಸ್ ಶಾಸಕಿಯಾಗಿ, ಸಚಿವೆಯಾಗಿದ್ದ ಮನೋರಮಾ ಮಧ್ವರಾಜ್, 2004ರಲ್ಲಿ ಬಿಜೆಪಿ ಸೇರಿದರು. ವಿನಯ ಕುಮಾರ್ ಸೊರಕೆ ವಿರುದ್ಧ ಗೆದ್ದು ಸಂಸದೆಯಾದರು.
ಕಾರ್ಕಳದಲ್ಲಿ 6 ಬಾರಿ ಶಾಸಕರಾಗಿದ್ದ ವೀರಪ್ಪ ಮೊಯ್ಲಿ, ಮುಖ್ಯಮಂತ್ರಿಯಾದ ಬಳಿಕ ಸಂಸತ್ತಿಗೆ ಮೂರು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಮಂಗಳೂರಲ್ಲಿ ಎರಡು ಸಲ, ಚಿಕ್ಕಮಗಳೂರಿನಲ್ಲಿ ಒಮ್ಮೆ ಸ್ಪರ್ಧಿಸಿ ಸೋಲುಂಡರು. 2009ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಗೆಲವು ಸಾಧಿಸಿ ಕೇಂದ್ರ ಸಚಿವರಾದರು. ಈಗ 2ನೇ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ದ.ಕ.ದಿಂದ ಮಗ ಹರ್ಷ ಮೊಯ್ಲಿಯನ್ನು ಕಣಕ್ಕಳಿಸಬೇಕು ಎಂಬ ಇರಾದೆ ಈಡೇರಿಲ್ಲ.  
94ರಲ್ಲಿ ಬೈಂದೂರು ಶಾಸಕರಾಗಿದ್ದ ಐ.ಎಂ.ಜಯರಾಮ ಶೆಟ್ಟಿ 98ರಲ್ಲಿ ಉಡುಪಿ ಬಿಜೆಪಿ ಸಂಸದರಾದರು. ಆದರೆ 99ರಲ್ಲಿ ವಿನಯ ಕುಮಾರ್ ಸೊರಕೆ ವಿರುದ್ಧ ಸೋತರು. ಈಗ ರಾಜಕೀಯ ತೆರೆಮರೆಗೆ.

ವಿಧಾನಸಭೆಗೆ ಮರಳಿದವರು
ಮಂಗಳೂರಿನ ಪ್ರಥಮ ಸಂಸದ ಟಿ.ಆರ್.ಆಚಾರ್ಯ 62ರಲ್ಲಿ ವಿಧಾನ ಪರಿಷತ್ತು ಸದಸ್ಯ. ಸಂಸದ ಶಂಕರ ಆಳ್ವ 72ರಲ್ಲಿ ಪುತ್ತೂರು ಶಾಸಕ. ಪ್ರಥಮ ರಾಜ್ಯಸಭೆ ಸದಸ್ಯ  ಬಿ.ವಿ. ಕಕ್ಕಿಲ್ಲಾಯ ಕ್ರಮವಾಗಿ ಬಂಟ್ವಾಳ ಮತ್ತು ವಿಟ್ಲ ಶಾಸಕರಾಗಿದ್ದರು. ಸಂಸದ ಡೀವಿ, ವಿನಯ ಕುಮಾರ್ ಸೊರಕೆ ರಾಜ್ಯ ರಾಜಕಾರಣಕ್ಕೆ ಮರಳಿದವರಲ್ಲಿ ಪ್ರಮುಖರು.

ಯಶಸ್ಸು ಸಿಗದವರು
ಶಾಸಕರಾಗಿದ್ದ ಡಾ.ವಿ.ಎಸ್.ಆಚಾರ್ಯ, ರುಕ್ಮಯ ಪೂಜಾರಿ, ಕೆ.ರಾಮಭಟ್, ಬಿ.ಎ.ಮೊಯ್ದಿನ್, ವಸಂತ ಬಂಗೇರ, ಯು.ಆರ್.ಸಭಾಪತಿ ಮತ್ತು ಸುನಿಲ್ ಕುಮಾರ್‌ಗೆ ಲೋಕಸಭೆ ಕೈಗೆಟುಕಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.