ದಕ್ಷಿಣ ಕನ್ನಡ

ಪ್ರತ್ಯೇಕ ಅಪಘಾತ: ಐವರ ಸಾವು

Published On :

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆದ ಪ್ರತ್ಯೇಕ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.
ಸುರತ್ಕಲ್ ಪಡ್ರೆ ಬಳಿ ಲಾರಿ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಮೂವರು ದಾರುಣವಾಗಿ ಮೃತಪಟ್ಟಿದ್ದರೆ, ಉಪ್ಪಿನಂಗಡಿ ಸಮೀಪದ ಕೂಟೇಲು ಸೇತುವೆ ರಾ.ಹೆ. 75 ರಲ್ಲಿ ವಾಹನ ಅಪಘಾತದಲ್ಲಿ ಸ್ಕೂಟರ್ ಸವಾರರಿಬ್ಬರು ಮೃತಪಟ್ಟಿದ್ದಾರೆ.
ಸುರತ್ಕಲ್ ಪಡ್ರೆ ಬಳಿ ಲಾರಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ಲಾರಿ ಅಡಿಗೆ ಅಪ್ಪಚ್ಚಿಯಾಗಿದೆ. ರಿಕ್ಷಾದೊಳಗಿದ್ದ ಇಬ್ಬರು ಮಕ್ಕಳು, ರಿಕ್ಷಾ ಚಾಲಕ ಅಪ್ಪಚ್ಚಿಯಾಗಿದ್ದಾರೆ. ಡಿಕ್ಕಿ ರಭಸಕ್ಕೆ ಮಹಿಳೆ ಹೊರಗೆ ಎಸೆಯಲ್ಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳಾಯಿಬೆಟ್ಟು ನಿವಾಸಿ ಸುನೀಲ್ (24), ಮಕ್ಕಳಾದ  ಮನಿಶಾ (09), ನಿಸ್ಮಿತಾ (11)ಮೃತಪಟ್ಟವರು. ತಾಯಿ ಸವಿತಾ ಪರಿಸ್ಥಿತಿ ಚಿಂತಾ ಜನಕವಾಗಿದೆ.
ಸವಿತಾ (26) ಮತ್ತು ಮಕ್ಕಳು ಮುಂಬಯಿಯಲ್ಲಿ ವಾಸವಿದ್ದು, ರಜೆ ಮಜಾ ಸವಿಯಲು ಉಳಾಯಿಬೆಟ್ಟಿನ ಮಾವ ಸುನೀಲ್ ಮನೆಗೆ ಬಂದಿದ್ದರು. ಸವಿತಾಗೆ ಸುನೀಲ್ ಕಿರಿಯ ಸಹೋದರ. ಪಡ್ರೆಯಲ್ಲಿರುವ ದೊಡ್ಡಕ್ಕನ ಮನೆ ಶುಭ ಕಾರ್ಯಕ್ಕೆ ರಿಕ್ಷಾದಲ್ಲಿ ಕರೆದೊಯುತ್ತಿದ್ದರು. ಬೆಳಗ್ಗೆ  10.30ರ ವೇಳೆಗೆ ಮುಕ್ಕ ಸಮೀಪ ಪೆಟ್ರೋಲ್ ಬಂಕ್‌ಲ್ಲಿ ಪೆಟ್ರೋಲ್ ಹಾಕಿಸಿ ಹೆದ್ದಾರಿಗೆ ಬರುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ತಾಯಿ ಹೊರಕ್ಕೆ ಚರಂಡಿಗೆ ಬಿದ್ದರು. ಅರೆಕ್ಷಣದಲ್ಲಿ ಇಬ್ಬರ ಪ್ರಾಣಗಳು ಹಾರಿಹೋಗಿದೆ. ಸ್ವಲ್ಪ ಹೊತ್ತು ಅಳು ಕೇಳಿ ಬಂದ ಬಳಿಕ ಮಗುವೂ ಮೃತಪಟ್ಟಿತು. ಸಣ್ಣತಪ್ಪಿನಿಂದ ಕುಟುಂಬದ ಸಂತೋಷವೇ ನಾಶವಾಗಿದೆ.
 ಲಾರಿ ಅಡಿಯಲ್ಲಿ ರಿಕ್ಷಾ ಸಂಪೂರ್ಣ ಅಪ್ಪಚ್ಚಿಯಾಗಿತ್ತು. ಸರಳುಗಳು, ಲೋಹದ ತಗಡುಗಳ ಅವಶೇಷಗಳು ಕಾಣುತ್ತಿದ್ದವು. ರಿಕ್ಷಾ ಎಳೆಯಲು ತಕ್ಷಣಕ್ಕೆ ಜೆಸಿಬಿ ಯಂತ್ರ ತರಲಾಯಿತು. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಎತ್ತಿದಾಗ ರಿಕ್ಷಾ ಅವಶೇಷಗಳ ನಡುವೆ ಮೃತದೇಹಗಳಿದ್ದವು. ಸರಳುಗಳ ನಡುವೆ ಸಿಲುಕಿದ್ದ ಮೃತದೇಹಗಳನ್ನು ಹೊರಗೆ ತೆಗೆಯುವುದೇ ಬೀಬತ್ಸವಾಗಿತ್ತು. ಹಿಂದು ಜಾಗರಣೆ ವೇದಿಕೆ ಕಾರ್ಯಕರ್ತರು ಶವ ಮೇಲೆತ್ತಲು ಸಹಕರಿಸಿದರು.
ಟ್ರಾಫಿಕ್‌ಜಾಮ್: ಅಪಘಾತ ನಡೆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯಾಹ್ನ 1 ಗಂಟೆ ವರೆಗೂ ಟ್ರಾಫಿಕ್‌ಜಾಮ್ ಉಂಟಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.