ಧಾರವಾಡ

ಮಾ. 2ರಿಂದ ಸುಗಮ ಸಂಗೀತ ಸಮ್ಮೇಳನ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 16
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮಾರ್ಚ್ 2,3ರಂದು ಧಾರವಾಡದಲ್ಲಿ ಗೀತೋತ್ಸವ  ಹೆಸರಿನಲ್ಲಿ 10ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ ಏರ್ಪಡಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಫೆ. 2ರಂದು ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಸೃಜನಾ ರಂಗಮಂದಿರದಲ್ಲಿ ಹಿರಿಯ ಸಾಹಿತಿ ಡಾ.ಕೆ.ಎಸ್. ನಿಸಾರ್ ಅಹಮ್ಮದ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಗೀತಸಂಗಮ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಭಾಗವಹಿಸುತ್ತಾರೆ ಎಂದರು.
ಸೃಜನಾ ರಂಗಮಂದಿರದಲ್ಲಿ ಎರಡು ದಿನ 14 ವರ್ಷಕ್ಕಿಂತ ಕೆಳಗಿರುವ ಮಕ್ಕಳಿಂದ ನವಶೋಧ, ಮರೆಯಲಾರದ ಮಹನೀಯರ ಹಾಡು ಪ್ರಸ್ತುತ ಪಡಿಸುವ ಅನುರಣನ, ಸ್ವರಮಾಧುರ್ಯ-ಪದಲಾಲಿತ್ಯವೆಂಬ ಸುಮಧುರ ಗೀತೆಗಳು, ಸ್ವರ-ರಾಗ-ಸಂಚಾರ, ಕಾವ್ಯದ ಸಾರಾಂಶಕ್ಕೆ ಧಕ್ಕೆ ಬರದಂತೆ ಪೂರ್ವಕ್ಕೆ ಪಶ್ಚಿಮದ ಲೇಪನ, ಕವಿಗೋಷ್ಠಿ, ಮರೆಯಲಾಗದ ಹಾಡು, ಚಿಣ್ಣರ ಗಾಯನ, ಕವಿ-ಕಾವ್ಯ-ಗಾಯನ, ಗಾನಲಹರಿ-ಕೇಳಿ ನಮ್ಮ ಹಾಡು, ಗೀತ ಗೌರವದಂತಹ ಅದ್ಭುತ ಗಾಯನ ಗೋಷ್ಠಿ ಇರುತ್ತವೆ. ಸಮಾರಂಭಗಳಲ್ಲಿ ಸಂಗೀತಾ ಕಟ್ಟಿ, ರತ್ನಮಾಲಾಪ್ರಕಾಶ, ಬಸಲಿಂಗಯ್ಯ ಹಿರೇಮಠ, ಇಂದು ವಿಶ್ವನಾಥ, ಡಾ. ರೋಹಿಣಿ ಮೋಹನ್, ಶ್ರೀಕಾಂತ ಕುಲಕರ್ಣಿ ಸೇರಿದಂತೆ 200ಕ್ಕೂ ಹೆಚ್ಚು ಸುಗಮ ಸಂಗೀತ ಕಲಾವಿದರು, ಕವಿಗಳು ಭಾಗವಹಿಸುತ್ತಾರೆ.
ಮಾ. 2 ಹಾಗೂ 3ರಂದು ಸಂಜೆ 6.30ರಿಂದ ಕರ್ನಾಟಕ ಕಾಲೇಜು ಮೈದಾನದಲ್ಲಿ ಸಮೂಹ ಗಾಯನ ಹಾಗೂ ಗೀತ ಸಂಗೀತ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಾ. 3ರ ಸಂಜೆ 5.30ಕ್ಕೆ ಸಮಾರೋಪ ನಡೆಯಲಿದ್ದು, ನಾಡೋಜ ಡಾ. ಚನ್ನವೀರ ಕಣವಿ ಅಧ್ಯಕ್ಷತೆ ವಹಿಸುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಸಮಾರೋಪ ಭಾಷಣ, ಬಿ.ಆರ್. ಲಕ್ಷ್ಮಣರಾವ್ ಭಾಗವಹಿಸುತ್ತಾರೆ. ಶಿಶುನಾಳ ಷರೀಫ ಪ್ರಶಸ್ತಿ ಪುರಸ್ಕೃತ ನಾರಾಯಣರಾವ್ ಮಾನೆ ಅವರನ್ನು ಅಭಿನಂದಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಇಂದು ವಿಶ್ವನಾಥ, ಶ್ರೀನಿವಾಸ ಉಡುಪ, ಮೃತ್ಯುಂಜಯ ದೊಡವಾಡ, ಬಿ.ಡಿ. ಹಿರೇಗೌಡರ ಇದ್ದರು.

ಸಮ್ಮೇಳನಾಧ್ಯಕ್ಷರ ಕುರಿತು...
ಅನುರಾಧಾ ಧಾರೇಶ್ವರ ಅವರು 30 ವರ್ಷಗಳ ಸುಧೀರ್ಘ ಸೇವೆಯ ನಂತರ ನಿವೃತ್ತಿ ಪಡೆದು ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ. ಮಾತೃ ಭಾಷೆ ಕೊಂಕಣಿಯಾದರೂ ಹೆಚ್ಚಿನ ಒಲವು ಕನ್ನಡದ ಭಾವಗೀತೆಗಳ ಕಡೆಗಿತ್ತು. ಚಿಕ್ಕವರಿದ್ದಾಗಲೇ ತಾಯಿ ಉಮಾಭಾಯಿಯವರು ಹಾರ್ಮೋನಿಯಂ ನುಡಿಸಿಕೊಂಡು ಭಜನೆ ಹಾಡುತ್ತಿದ್ದರು. ಅವರಿಂದ ಪ್ರಭಾವಿತರಾದ ಅನುರಾಧಾ ಸುಗಮ ಸಂಗೀತಕ್ಕೆ ಸ್ಫೂರ್ತಿ ಪಡೆದರು. ಸಂಗೀತ ನೃತ್ಯ ಅಕಾಡೆಮಿ, ಗೌಡ ಸಾರಸ್ವತ ಪ್ರಶಸ್ತಿ, ಮೈಸೂರು ಸುಗಮ ಸಮಗೀತ ಪ್ರಶಸ್ತಿ, ರಾಜ್ಯೋತ್ಸವ, ಕೊಂಕಣಿ ಸುಗಮ ಸಂಗೀತ ಪ್ರಶಸ್ತಿ ಸೇರಿದಂತೆ ರಾಜ್ಯ ಸರ್ಕಾರದ ಸಂತ ಶಿಶುನಾಳ ಷರೀಫ ಪ್ರಶಸ್ತಿ ಸಹ ದೊರೆತಿದೆ.

ಕಷ್ಟಕರ ಸ್ಥಿತಿಯಲ್ಲಿ ಪರಿಷತ್...
ಸುಗಮ ಸಂಗೀತ ಪರಿಷತ್ತಿಗೆ ವಾರ್ಷಿಕ 11 ಲಕ್ಷ ಅನುದಾನ ನೀಡುತ್ತಿದ್ದು, ಇಷ್ಟು ಕಡಿಮೆ ಅನುದಾನದಿಂದ ರಾಜ್ಯಾದ್ಯಂತ ಸಂಚರಿಸಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿಲ್ಲ. ಸರ್ಕಾರ ಪರಿಷತ್ಗೆ ಭಿಕ್ಷೆ ನೀಡಿದಂತೆ ಅನುದಾನ ನೀಡುತ್ತಿದೆ. ಪ್ರಸ್ತುತ ಧಾರವಾಡದಲ್ಲಿ ನಡೆಸುತ್ತಿರುವ ಸುಗಮ ಸಂಗೀತ ಸಮ್ಮೇಳನಕ್ಕೆಂದು 22 ಲಕ್ಷ ಖರ್ಚಾಗುತ್ತಿದ್ದು, ಎಲ್ಲ ಸಮಾರಂಭ ಇನ್ನಿತರೆ ಸಂಘ-ಸಂಸ್ಥೆಗಳ ಸಹಕಾರದಿಂದಲೇ ಮಾಡಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ರಾಜ್ಯ ಸರ್ಕಾರ ಪರಿಷತ್ತಿಗೆ ಪ್ರತಿ ವರ್ಷ ಕನಿಷ್ಠ 25 ಲಕ್ಷ ಅನುದಾನ ನೀಡಬೇಕು.
-ವೈ.ಕೆ. ಮುದ್ದುಕೃಷ್ಣ (ಸುಗಮ ಸಂಗೀತ ಪರಿಷತ್ ಅಧ್ಯಕ್ಷ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.